Monday, July 1, 2013

Notes

ಗ್ರಾಮೀಣ ಭಾಗದಲ್ಲೇ ಆಗ್ತಿವೆ ಪದವಿ ಕಾಲೇಜು, ಹೆಗ್ಗೋಡು ವಿದ್ಯಾಭಿವೃದ್ಧಿ ಸಂಘದ ಸಾಧನೆ.
ಓದಿ ಸಂಭ್ರಮಿಸಬೇಕು ಅಂತ ಏನೂ ಅನ್ನಿಸ್ಲಿಲ್ಲ. ಸಂಭ್ರಮಿಸಬೇಕು ನಿಜ. ಅಲ್ಲೇ ಹುಟ್ಟಿ, ಬೆಳೆದವನಿಗೆ ಊರಿನ ಸಾಧನೆ ಹೆಚ್ಚುಗಾರಿಕೆಯೇ ಸೈ. ಆದರೆ ಬದಲಾದ ಈ ವಾತಾವರಣದಲ್ಲಿ ಇದರ ಅಗತ್ಯತೆ ಎಷ್ಟು ಅನ್ನೋದು ತಿಳಿಯಲಿಲ್ಲ. ನಾವು ಪ್ರೈಮರಿ, ಹೈಸ್ಕೂಲ್ಗಳನ್ನ ಓದೋವಾಗ ಹೆಚ್ಚು ಖಾಸಗೀ ಶಾಲೆಗಳಿರಲಿಲ್ಲ ಮತ್ತು ನನ್ನ ಮಕ್ಕಳನ್ನು ಖಾಸಗೀ ಶಾಲೆಗಳಿಗೇ ಕಳಿಸಬೇಕು ಅನ್ನೋ ಮನಸ್ಥಿತಿಯೂ ನಮ್ಮ ಹಿರಿಯರಿಗಿರಲಿಲ್ಲ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚೆಗೆ, ಅಂದರೆ ಒಂದು ಹತ್ತು‍ ಹದಿನೈದು ವರ್ಷಗಳಲ್ಲಾದ ಬದಲಾವಣೆ ವಿಪರೀತ. ಹೆಚ್ಚಾದ ಖಾಸಗೀ ಶಾಲೆಗಳು, ಸರ್ಕಾರಿ ಶಾಲೆಗಳಲ್ಲಿನ ಬೋಧನೆಯ ಗುಣಮಟ್ಟದ ಕೊರತೆ, ತಂದೆ ತಾಯಿಯರ ಮನಸ್ಥಿತಿಯ ಬದಲಾವಣೆ, ಕುಟುಂಬದ‌ಆರ್ಥಿಕ ಪ್ರಗತಿ... ಇನ್ನೂ ಹಲವು ಅಂಶಗಳು. ಇವು ಇವತ್ತಿನ ಪೋಷಕರಿಗೆ ತಮ್ಮ ಮಕ್ಕಳನ್ನ, ಸ್ವಲ್ಪ ದೂರ ಆದ್ರೂ ಪರವಾಗಿಲ್ಲ, ನಗರಕ್ಕೇ ಕಳಿಸೋಣ, ಸಿಬಿಎಸ್ಸಿ ಶಿಕ್ಷಣವನ್ನೇ ಕೊಡಿಸೋಣ ಅನ್ನಿಸುತ್ತಿದೆ. ಖಾಸಗೀ ಶಾಲೆಗಳಲ್ಲಿನ ಬೋಧನೆಯ ಗುಣಮಟ್ಟಕ್ಕೆ ನಮ್ಮ ಸರ್ಕಾರಿ ಶಾಲೆಗಳು ತಕ್ಕುದಾದ ಸ್ಪರ್ಧೆಯನ್ನು ಕೊಡಲು ಆಗದೇ ಇರುವುದು ಬಹಳ ಬೇಜಾರಿನ ಸಂಗತಿ. ಕೆಲ ವರ್ಷಗಳ ಹಿಂದೆ ಶಾಲೆಗಳ ದತ್ತು ಸ್ವೀಕಾರ ಅನ್ನೋ ಕಾರ್ಯಕ್ರಮ ನಡೆಯಿತು. ಅದರಲ್ಲಿ ಆಯಾ ಊರಿನ ಕೆಲವು ಸಂಸ್ಥೆಗಳು ಶಾಲೆಯ ಗುಣಮಟ್ಟವನ್ನ ಎತ್ತರಿಸಲಿಕ್ಕೆ ಸಹಕಾರಿಯಾಗಬಹುದು ಅನ್ನೋ ವಿಚಾರ ಇದ್ದಿರಬಹುದು. ಆದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ, ಅದರ ಯಶಸ್ಸು ಆಗಲಿಲ್ಲ ಎಂದೇ ನನ್ನ ಭಾವ. ಇವತ್ತಿನ ಪರಿಸ್ಥಿತಿ ಹೇಗಿದೆ ಅಂದರೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಿದರೆ, ಅವರಿಗೆ ಗುಣಮಟ್ಟದ ಶಿಕ್ಷಣ ಸಿಗಲಾರದು ಎಂಬುದು ಪೋಷಕರ ಅಭಿಪ್ರಾಯ. ಮತ್ತೊಂದು ಕಡೆ ಖಾಸಗೀ ಶಾಲೆಗಳಲ್ಲಿನ ಶಿಕ್ಷಣದ ವೆಚ್ಚ ಭರಿಸಲಾಗದ ಪರಿಸ್ಥಿತಿ. ಆದರೆ ಸದ್ಯಕ್ಕೆ ಇವೆರಡರ ಮಧ್ಯೆ ಗೆಲ್ಲುತ್ತಿರುವುದು ಖಾಸಗೀ ಶಾಲೆಗಳೇ ಸೈ. ಸ್ವಲ್ಪ ಹೆಚ್ಚಾದರೂ, ಗುಣಮಟ್ಟಕ್ಕೆ ಪೋಷಕ ಮೊರೆ ಹೋಗಿದ್ದಾನೆ. ಅದು ಸಹಜ ಕೂಡ. ಯಾವ ವ್ಯಕ್ತಿ ತಾನೆ ತನ್ನ ಮಕ್ಕಳನ್ನ ದ್ವಿತೀಯ ದರ್ಜೆ ಶಿಕ್ಷಣಕ್ಕೆ ಕಳಿಸಲು ಇಚ್ಛಿಸುತ್ತಾನೆ? ಜನ ಸಾಮಾನ್ಯರ ಮೊದಲ ಆದ್ಯತೆ ಉತ್ತಮ ಗುಣಮಟ್ಟದ ಮೂಲಭೂತ ಶಿಕ್ಷಣ. ಪದವಿ ಹಂತದ ಶಿಕ್ಷಣವನ್ನು ವ್ಯಕ್ತಿ ಹೊರಗಡೆ ಹೋಗಿ ಸಂಪಾದಿಸಲು ಶಕ್ಯ ಮತ್ತು ಹೊರ ಪ್ರಪಂಚ ನೋಡಲು ಅವನೂ ಉತ್ಸುಕನಾಗಿರುತ್ತಾನೆ. ಹಾಗಾಗಿ ಯಾವುದೇ ಸಂಸ್ಥೆ ಆಯಾ ಪ್ರದೇಶದ ಪ್ರೈಮರಿ, ಸೆಕಂಡರಿ ಮತ್ತು ಹೈಸ್ಕೂಲ್ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟವನ್ನ ಹೆಚ್ಚಿಸಬೇಕು ಮತ್ತು ಪೋಷಕರನ್ನು ಅದರ ಕಡೆಗೆ ಆಕರ್ಷಿಸಬೇಕು ಅನ್ನುವುದು ನನ್ನ ಅಭಿಪ್ರಾಯ. ಪದವಿ ಹಂತದ ಶಿಕ್ಷಣ ಹೆಗ್ಗೋಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಅಗತ್ಯವೇ ಅನ್ನುವುದು ಪ್ರಶ್ನೆಯೇ ಸರಿ.

No comments:

Post a Comment