Tuesday, October 27, 2015

ಮುದ್ದಿನಿಂದ ಬುದ್ಧನೆಡೆಗೆ



ಈ ಮುದ್ದು ಮಕ್ಕಳ ಪ್ರಶ್ನೆಗಳದೇನು? ಇವರೇನು ಪ್ರಶ್ನೆಗಳ ಮೂಲಕ ತಾವು ಕಲಿಯುತ್ತವೋ ಅಥವಾ ನಮಗೆ ಕಲಿಸುತ್ತವೋ? ನಾವೂ ಕಲಿಯುವ ಹಾದಿಯಲ್ಲಿರುವವರೇ ಬಿಡಿ. ಹೆಚ್ಚೆಂದರೆ ಈ ಮಕ್ಕಳಿಗಿಂತ ಕಿಂಚಿತ್ ವರ್ಷ ಮುಂಚಿತವಾಗಿ ಈ ಭುವಿಗೆ ಬಂದಿದ್ದು ನಾವು. ನಾವೇನು ಜ್ಞಾನಿಗಳಲ್ಲ. ನಾವೇ ಹೇಳಿಕೊಡುವವರು, ನಾವು ಸರಿಯಾದದ್ದನ್ನೇ ಮಾಡುತ್ತಿದ್ದೇವೆ, ಮಕ್ಕಳೂ ಅದನ್ನೇ ಕಲಿಯಬೇಕು ಎನ್ನುವ ಅಹಂಕಾರ ಖಂಡಿತಾ ಸಲ್ಲ. ಈ ಪ್ರಸಂಗ ನೋಡಿ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು. ದೇವರ ಮುಂದಿನ ದೀಪಕ್ಕೆ ಬೆಂಕಿ ಎಂದು ಕರೆಯುತ್ತಿದ್ದಿತ್ತು. ಅದು ಕರೆದದ್ದೇನು ತಪ್ಪಲ್ಲ. ಆದರೂ ಅದಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. "ಮಗು, ಅದು ಬೆಂಕಿಯಲ್ಲ, ಅದಕ್ಕೆ ದೀಪವೆಂದು ಕರೆಯಬೇಕು" ಎಂದು. ಮಗು ಯಾಕೆ ಎಂದು ಪ್ರಶ್ನಿಸಿತು. ಉತ್ತರಿಸಬೇಕಲ್ಲ. ಹೀಗೊಂದು ಪ್ರಯತ್ನ ಮಾಡಲಾಯಿತು. ಮೂಲ ಒಂದೇ ಆದರೂ ಬಳಕೆಯ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗಿದೆ. ಕತ್ತಲೆಯನ್ನು ಓಡುಸುವ ಬೆಳಕಿಗೋಸ್ಕರ ಬಳಸಿದಾಗ ಅದನ್ನು ದೀಪವೆಂದು ಕರೆಯಬೇಕು. ಅಡುಗೆ ಮುಂತಾದವೆಡೆ ಶಾಖಕ್ಕೋಸ್ಕರ ಬಳಸಿದಾಗ ಅದನ್ನು ಬೆಂಕಿಯೆಂದು ಕರೆಯಬೇಕು. ಇಷ್ಟನ್ನು ವಿವರಿಸಿ ಆಗಿತ್ತು. ಮಕ್ಕಳೊಂದು ಅದ್ಭುತ. ಅವು ಸಂಗತಿಗಳನ್ನು ಜೋಡಿಸುವ ರೀತಿ ಅನನ್ಯ. ಈ ಮಗುವಿನ ಮುಂದಿನ ಪ್ರಶ್ನೆಯನ್ನು ಕೇಳಿ.  "ಸರಿ, ನನ್ನ ಹುಟ್ಟಿದ ಹಬ್ಬದ ದಿನ ನೀನು ಮಾಡುತ್ತೀಯಲ್ಲ ಹೋಮ, ಅದು ಬೆಂಕಿಯಲ್ಲವೇ?" ಸ್ವಲ್ಪ ಯೋಚಿಸುವಂತಾದರೂ ಉತ್ತರಿಸುವ ಪ್ರಯತ್ನ ಅಷ್ಟೆ. "ಅಲ್ಲ, ಅದಕ್ಕೆ ಅಗ್ನಿಯೆಂದು ಹೆಸರು." ಮಗುವಿಗೆ ಸಮಾಧಾನವಾದಂತಿರಲಿಲ್ಲ. ಮತ್ತೆ ಪ್ರಶ್ನಿಸಿತು. "ಅದು ಬೆಂಕಿಯಲ್ಲವೇ?"  ಸ್ವಲ್ಪ ವಿವರಣೆಯ ಅಗತ್ಯವಿದೆಯೆನ್ನಿಸಿತು. "ಮಗು, ನಮಗೆ ಆಯುರಾರೋಗ್ಯ, ಐಶ್ವರ್ಯಗಳನ್ನು ಕೊಡುವವರು ದೇವತೆಗಳು. ಇಂದ್ರ, ಸೂರ್ಯ, ವಾಯು, ವರುಣಾದಿ ದೇವತೆಗಳು ಕಾಲ ಕಾಲಕ್ಕೆ ಮಳೆ-ಬೆಳೆಗಳನ್ನು ಕೊಡುವವರು. ಅವರಿಗೆ ಶಕ್ತಿ ಬೇಕಲ್ಲವೇ? ಅವರು ನಮ್ಮ ಹಾಗೆ ದಿನಾ ಮೂರು ಹೊತ್ತು ಉಣ್ಣುವವರಲ್ಲ. ಅವರಿಗೆ ಶಕ್ತಿಕೊಡಬೇಕಾದವರು ನಾವು. ನಾವು ಹೋಮ, ಹವನಾದಿಗಳನ್ನು ಮಾಡಿ ಹವಿಸ್ಸುಗಳನ್ನು ಅರ್ಪಿಸಿದರೆ ಅದನ್ನು ದೇವತೆಗಳು ಸ್ವೀಕರಿಸುವರು. ಆ ಹವಿಸ್ಸುಗಳು ದೇವತೆಗಳಲ್ಲಿ ಶಕ್ತಿಯನ್ನು ತುಂಬುವವು. ಈ ಹೋಮಗಳನ್ನು ಮಾಡಬೇಕಾದರೆ ಅಲ್ಲಿ ದೇವತೆಗಳನ್ನು ಆಹ್ವಾನಿಸಲಾಗಿರುತ್ತದೆ. ಹಾಗಾಗಿ ಅದು ಬೆಂಕಿಯಾದರೂ ಅದಕ್ಕೆ ಅಗ್ನಿ ಎಂಬ ಹೆಸರಿನಿಂದ ಕರೆಯುತ್ತಾರೆ." ಇಷ್ಟು ವಿವರಿಸುವ ವೇಳೆಗೆ ಮಗು ಮುಂದಿನ ಯಾವುದೋ ಆಟಕ್ಕೆ ಓಡಿಯಾಗಿತ್ತು. ಉತ್ತರಿಸಿದವ ಕ್ಷಣಹೊತ್ತು ಶೂನ್ಯದಲ್ಲಿ ಮನಸ್ಸನ್ನು ನೆಟ್ಟ. 

Sunday, October 25, 2015

ಗುರು ಪ್ರಸಾದ at my desk. Please help to read yourself.


ಪುರಾತನ ಕಾಲದಲ್ಲಿ ಕಾಗೆ ಮತ್ತು ಗೂಬೆಗಳು ಬೆಳ್ಳಗಿದ್ದವು. ಹಿಮದಂತೆ ಬೆಳ್ಳಗಿದ್ದವು. ಒಮ್ಮೆ ಅವುಗಳಿಗೆ ಶುದ್ಧತೆಯ ಪ್ರತೀಕವಾದ ತಮ್ಮ ಬಿಳಿ ಬಣ್ಣದ ಬಗ್ಗೆ ಜಿಗುಪ್ಸೆ ಬಂದಿತು. ಬೇರೆ ಬೇರೆ ಪಕ್ಷಿಗಳ ಬೇರೆ ಬೇರೆ ಬಣ್ಣಗಳನ್ನು ಕಂಡು ಅವು ಅಸೂಯೆಪಟ್ಟವು ಮತ್ತು ತಾವೂ ತಮ್ಮ ಬಣ್ಣಗಳನ್ನು ಬದಲಿಸಬೇಕೆಂದು ನಿರ್ಣಯಿಸಿದವು. ಕಾಗೆ ಗೂಬೆಗೆ, ಮೊದಲು ನಾನು ನಿನ್ನ ಮೈಮೇಲೆ ಬಣ್ಣಗಳನ್ನು ಬಿಡಿಸುತ್ತೇನೆ, ನಂತರ ನೀನು ನನ್ನ ಮೇಲೆ ಬಿಡಿಸು ಎಂದಿತು. ಒಪ್ಪಂದದಂತೆ ಬಿಳಿಯ ಗೂಬೆಯ ಮೇಲೆ ಕಾಗೆ ಕಪ್ಪು ಕಂದು, ದೊಡ್ಡ ಚಿಕ್ಕ ವೃತ್ತಗಳನ್ನು ಬಿಡಿಸಿತು. ಗೂಬೆಗೆ ತನ್ನ ಮೈಯನ್ನು ನೋಡಿಕೊಂಡು ಸಂತೋಷವಾಯಿತು. ಈಗ ಗೂಬೆಯ ಸರದಿ. ಕಾಗೆ ಸೂರ್ಯನಿಗೆ ಮೈಯೊಡ್ಡಿ ಕಣ್ಮುಚ್ಚಿ ಕುಳಿತಿತು. ಗೂಬೆ ಕಾಗೆಯ ಮೈಮೇಲೆ ಕಪ್ಪು ಕಪ್ಪು ಚುಕ್ಕೆಗಳನ್ನು ಬಿಡಿಸಿತು. ಬಿಡಿಸುವ ಕೆಲಸ ಪೂರ್ಣಗೊಂಡ ಮೇಲೆ ಗೂಬೆ ಕಾಗೆಯನ್ನೊಮ್ಮೆ ನೋಡಿತು. ಗೂಬೆಗೆ ಕಾಗೆ ತನಗಿಂತ ಹೆಚ್ಚು ಸುಂದರವಾಗಿ ಕಾಣಿಸುತ್ತಿದೆ ಎನ್ನಿಸಿತು. ಮುಂದಿನದು ಅಸೂಯೆ. ಅದರ ಮುಂದುವರಿಕೆ ಅದರ ಬಣ್ಣ ಕೆಡಿಸುವುದು. ಗೂಬೆಗೆ ತನ್ನನ್ನು ನೋಡಿಕೊಂಡಾಗ ಉಂಟಾದ ಸಂತೋಷ ಭಾವ ಅಳಿಸಿ ಅಸೂಯಾ ಭಾವ ಮನಸ್ಸನ್ನು ತುಂಬಿತು. ತಾನು ಹೇಗಿದ್ದರೂ ಪರವಾಗಿಲ್ಲ. ಕಾಗೆ ಮಾತ್ರ ಚೆನ್ನಾಗಿ ಕಾಣದಂತೆ ಮಾಡಬೇಕೆನ್ನಿಸಿತು. ಗೂಬೆಯು ಮೊದಲು ತನ್ನ ಮನಸ್ಸನ್ನು ಕೆಡಿಸಿಕೊಂಡಿತು. ಕಾಗೆಯನ್ನು ರೂಪದಲ್ಲಿ ಕೆಡಿಸುವ ಮನಸ್ಸು ಮಾಡಿತು. ಗೂಬೆ ತಾನು ಬಿಡಿಸಿದ ಕರಿಯ ಚುಕ್ಕೆಗಳನ್ನೆಲ್ಲ ಸೇರಿಸಿ ಸಂಪೂರ್ಣ ಕಪ್ಪು ಬಣ್ಣ ಬರುವಂತೆ ಮಾಡಿತು ಮತ್ತು ಕಾಗೆ ಕಣ್ಣು ಬಿಡುವುದಕ್ಕಿಂತ ಮುಂಚೆ ಹಾರಿಹೋಯಿತು. ಇತ್ತ ಕಾಗೆ ಕಣ್ದೆರೆತು ತನ್ನನ್ನೊಮ್ಮೆ ನೋಡಿಕೊಂಡಿತು. ಸಂಪೂರ್ಣ ಕಪ್ಪು. ಕರಿಗಪ್ಪು. ಕಾಗೆ ನೊಂದಿತು. ಮಿತ್ರ ತನಗೆ ಮೋಸ ಮಾಡಿದನೆಂದು ನೊಂದಿತು. ಅಂದಿನಿಂದ ಕಾಗೆ ಮತ್ತು ಗೂಬೆಗಳಿಗೆ ಅದೇ ಬಣ್ಣಗಳಂತೆ.

ಸ್ವತ: ಕೆಟ್ಟು, ಪರರನ್ನು ಕೆಡಿಸುವುದು ಅಸೂಯೆ.

Monday, October 19, 2015

ಗುರು ಪ್ರಸಾದ at my desk. Please read yourself



ಒಂದು ಯುದ್ಧದ ಸನ್ನಿವೇಶ. ಅದೊಂದು ರಣಭೂಮಿ. ಇನ್ನೇನು ಅಂತಿಮ ಕ್ಷಣಗಳು. ಒಂದು ದೇಶ ಗೆದ್ದಾಗಿತ್ತು. ಸೋತ ದೇಶದ ಸೈನಿಕರನ್ನು ಹುಡುಕಿ ಹುಡುಕಿ ಗೆದ್ದ ದೇಶದ ಸೈನಿಕರು ಕೊಲ್ಲುತ್ತಿದ್ದರು. ಅಮಾನವೀಯ, ಆದರೆ ಅದು ನಡೆಯುವುದೇ ಹಾಗೆ. ರಣಭೂಮಿಯಲ್ಲಿ ಯುದ್ಧದ ಅವಶ್ಯಕತೆಗೋಸ್ಕರ ಸೈನಿಕರು ಬಂಕರ್ಗಳನ್ನು, ಗುಹೆಗಳನ್ನು ನಿರ್ಮಿಸಿಕೊಂಡಿದ್ದರು. ಸೋತ ದೇಶದ ಸೈನಿಕರು ರಕ್ಷಣೆಗೋಸ್ಕರ ಈ ಗುಹೆಗಳಲ್ಲಿ ಅಡಗುತ್ತಿದ್ದರು. ಆದರೆ ಗೆದ್ದ ದೇಶದ ಸೈನಿಕರು ಈ ಗುಹೆಗಳನ್ನು ಹುಡುಕಿ ಹುಡುಕಿ ಸೋತವರನ್ನು ಕೊಲ್ಲುತ್ತಿದ್ದರು. ಹಾಗೇ ಇದೂ ಒಬ್ಬ ಸೈನಿಕನ ಕತೆ. ರಕ್ಷಣೆಗೆಂದು ಒಂದು ಗುಹೆಯಲ್ಲಿ ಅಡಗಿದ. ಶತ್ರುಗಳು ಹತ್ತಿರ ಹತ್ತಿರ ಬರುತ್ತಿರುವುದು ಅವರ ಬೂಟಿನ ಶಬ್ದಗಳಿಂದ ಕೇಳುತ್ತಿತ್ತು. ಸೈನಿಕನಿಗೆ ತಾನಿನ್ನು ಬದುಕಿರಲಾರೆ ಎನ್ನಿಸಿತು. ಶತ್ರುಗಳು ಕ್ರೂರವಾಗಿ ಹಿಂಸಿಸಿ ತನ್ನನ್ನು ಕೊಲ್ಲುತ್ತಾರೆ ಎಂದೆನಿಸಿತು. ದೇವರಲ್ಲಿ ತುಂಬಾ ಆರ್ತನಾಗಿ ಮೊರೆಯಿಟ್ಟ. ತನ್ನನ್ನು ಬದುಕಿಸೆಂದು ಪ್ರಾರ್ಥಿಸಿದ. ಪುರುಷ ಪ್ರಯತ್ನ ಸಂಪೂರ್ಣ ಸೋತಿದೆ. ನಿನ್ನಲ್ಲಿ ಶರಣಾದೆ. ನಿನಗೆ ನನ್ನ ಮೇಲೆ ಕರುಣೆಯಿದ್ದರೆ, ಉಳಿಸಬೇಕೆಂದೆನಿಸಿದರೆ ಉಳಿಸು ಎಂದು ದೈನ್ಯನಾಗಿ ಮೊರೆಯಿಟ್ಟ. ಮುಂದೆ ನಡೆದುದುದೆಲ್ಲಾ ಪವಾಡ. ಅದು ದೇವರ ಮಹಿಮೆಯೋ ಮತ್ತಿನ್ನೇನೋ ಬಲ್ಲವರಾರು? ಆ ಗುಹೆಯಲ್ಲಿ ಒಂದು ಚಟುವಟಿಕೆ ಪ್ರಾರಂಭವಾಯಿತು. ಅದೆಲ್ಲಿತ್ತೋ ಜೇಡವೊಂದು ಕಾಣಿಸಿತು. ಆ ಜೇಡ ಆ ಗುಹೆಯ ಬಾಗಿಲಿಗೆ ಬಲೆಯನ್ನು ಹೆಣೆಯಲು ಪ್ರಾರಂಭಿಸಿತು. ನಿಮಿಷಗಳಷ್ಟರಲ್ಲಿ ಆ ಜೇಡ ಗುಹೆಯ ಬಾಗಿಲಿಗೆ ಸಂಪೂರ್ಣವಾಗಿ ಬಲೆಯನ್ನು ಹೆಣೆದಾಗಿತ್ತು. ಶತ್ರು ಸೈನಿಕರು ಗುಹೆಗಳನ್ನು ಪರಿಶೀಲಿಸುತ್ತಾ ಬರುತ್ತಿದ್ದರು. ಈ ಗುಹೆಯನ್ನೂ ಒಳಹೊಕ್ಕು ನೋಡಬೇಕು. ಆದರೆ ಆ ಜೇಡರ ಬಲೆ ಅಡ್ಡವಾಗಿತ್ತು. ಸೈನಿಕರಿಗೆ ಅನ್ನಿಸಿತು. ಇಲ್ಲಿ ಜೇಡರ ಬಲೆ ಹಾಳಾಗದೆ ಇದೆ ಎಂದಾದರೆ ಈ ಗುಹೆಯ ಒಳಗೆ ಮನುಷ್ಯರಾರೂ ಹೋಗಿರಲು ಅಸಾಧ್ಯ. ಯಾರೂ ಇಲ್ಲದ ಮೇಲೆ ಇಲ್ಲಿ ಶೋಧನೆಯ ಅಗತ್ಯವೇನು? ಸೈನಿಕರು ಈ ಗುಹೆಯನ್ನು ಬಿಟ್ಟು ಮುಂದಿನದಕ್ಕೆ ಸಾಗಿದರು. ಆತನ ಜೀವ ಉಳಿದಿತ್ತು. ಶಸ್ತ್ರಗಳಿಂದ ಸಾಧಿಸಲಾಗದ್ದು ಒಂದು ಜೇಡರ ಬಲೆ ಸಾಧಿಸಿತ್ತು. 

ದೈವಕ್ಕೆ ಉಳಿಸಬೇಕೆಂದೆನಿಸಿದರೆ ಅಳಿಸಲಸಾಧ್ಯ. 

ಇದೊಂದು ಸತ್ಯ ಘಟನೆಯಂತೆ. 

Sunday, October 18, 2015

ಗುರು ಪ್ರಸಾದ at my desk. Please help to read yourself



ಅಣ್ಣ-ತಮ್ಮಂದಿರೀರ್ವರು. ಅಣ್ಣ ಸದ್ಗುಣ ಸಂಪನ್ನ. ಸದಾಚಾರಿ. ಸಮಾಜದಲ್ಲಿ ಗೌರವ, ಮನ್ನಣೆ ಗಳಿಸಿರುವವನು. ತಮ್ಮ ಪ್ರಪಂಚದಲ್ಲಿರುವ ಎಲ್ಲಾ ದುರ್ಮಾರ್ಗಗಳಲ್ಲಿ ನಡೆಯುತ್ತಿರುವವನು. ಮದ್ಯ, ಮಾನಿನಿಯರ ದಾಸ. ದುಷ್ಕೃತ್ಯಗಳಲ್ಲಿ ಸಮಾಜದಲ್ಲಿ ಹೆಸರುವಾಸಿ. ಒಬ್ಬ ಪತ್ರಕರ್ತ ಈ ಇಬ್ಬರನ್ನೂ ಸಂದರ್ಶಿಸಲು ನಿರ್ಧರಿಸಿದ. ಪತ್ರಕರ್ತರೆಂದರೆ ನಕಾರಾತ್ಮಕ ಎಂಬುದೊಂದು ಭಾವನೆ ಸಮಾಜದಲ್ಲಿ ಬೆಳೆದಿದೆ ತಾನೆ? ಈ ಪತ್ರಕರ್ತನೂ ಅದೇ ಜಾತಿಗೆ ಸೇರಿದವನಿರಬೇಕು. ಮೊದಲು ತಮ್ಮನನ್ನೇ ಸಂದರ್ಶಿಸಲು ತೀರ್ಮಾನಿಸಿದ. ಸಂದರ್ಶನದಲ್ಲಿ ತಮ್ಮನನ್ನು ಪ್ರಶ್ನಿಸಿದ. "ತಾವೇಕೆ ಹೀಗೆ? ಈ ರೀತಿಯಾಗಿ ಬೆಳೆಯಲು ಕಾರಣಗಳೇನು?" ತಮ್ಮ ಉತ್ತರಿಸಿದ- "ನಾನೇಕೆ ಹೀಗೆ? ನಾನು ಹೀಗಿರದೆ ಮತ್ತೆ ಹೇಗೆ ಇರಬೇಕು? ನಾನು ಹೀಗಿರಲು ನನ್ನಪ್ಪ ಕಾರಣ. ನನ್ನ ತಂದೆ ಒಬ್ಬ ಮದ್ಯ ವ್ಯಸನಿ. ಪ್ರತಿದಿನ ಬಂದು ನನ್ನ ತಾಯಿಗೆ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಇದನ್ನೇ ನೋಡಿ ನಾನು ಬೆಳೆದವ. ಅದನ್ನೇ ಉಂಡು ಅದೇ ಆಗಿರುವೆ ಅಷ್ಟೆ. ನನ್ನ ತಂದೆ ನನಗೊಬ್ಬ ಆದರ್ಶ." ಪತ್ರಕರ್ತನಿಗೆ ಆಶ್ಚರ್ಯವಾಯಿತು. ತಂದೆ ಹೀಗೆ. ಆದರೆ ಮಕ್ಕಳಿಬ್ಬರು ತದ್ವಿರುದ್ಧ. ಪತ್ರಕರ್ತ ಅಣ್ಣನ ಸಂದರ್ಶನ ಮಾಡಿದ. ಅಣ್ಣನನ್ನು ಪ್ರಶ್ನಿಸಿದ. "ತಾವೇಕೆ ಹೀಗೆ? ಈ ರೀತಿಯಾಗಿ ಬೆಳೆಯಲು ಕಾರಣಗಳೇನು? ನಿಮ್ಮ ತಮ್ಮ ನೋಡಿದರೆ ಹಾಗೆ. ನಿಮ್ಮ ತಂದೆ ಒಬ್ಬ ಮದ್ಯವ್ಯಸನಿಯೆಂದು ಕೇಳ್ಪಟ್ಟೆ." ಅಣ್ಣ ಉತ್ತರಿಸಿದ. "ಹೌದು. ನೀವು ಕೇಳಿದ್ದು ಸರಿ. ಆಶ್ಚರ್ಯಪಡಬೇಡಿ, ಸಂದೇಹಿಸಬೇಡಿ. ನಮ್ಮಿಬ್ಬರ ತಂದೆ ಒಬ್ಬನೇ. ಅವನು ಮದ್ಯವ್ಯಸನಿಯೂ ಹೌದು. ಪ್ರತಿದಿನ ಬಂದು ನನ್ನ ತಾಯಿಗೆ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಇದನ್ನೇ ನೋಡಿ ನಾನು ಬೆಳೆದವ. ಆ ತಾಯಿಯ ನೋವನ್ನು ನೋಡಿ, ನೋಡಿ ರೋಸಿ ಹೋಗಿದ್ದೆ. ನಾನು ಮಾತ್ರ ಎಂದೆಂದಿಗೂ ಅಪ್ಪನ ಹಾಗೆ ಆಗಬಾರದೆಂದು ತೀರ್ಮಾನಿಸಿದ್ದೆ. ಅದಕ್ಕೇ ನಾನು ಹೀಗೆ. ನನ್ನಮ್ಮನ ಕಷ್ಟ ಯಾರಿಗೂ ಬರದಿರಲಿ ಎಂಬುದೇ ಆಶಯ."

ಮನದ, ಬುದ್ಧಿಯ ಬೆಳವಣಿಗೆ ಸಂಗತಿಗಳನ್ನು ಗ್ರಹಿಸುವ, ಜೀರ್ಣಿಸಿಕೊಳ್ಳುವ ರೀತಿಯಲ್ಲಿದೆ.

Thursday, October 15, 2015

ಗುರು ಪ್ರಸಾದ at my desk. Please help to read yourself



ಒಂದು ಊರು. ಊರಿಗೊಬ್ಬ ಸಂತ. ಸಂತನಿಗೆ ಅಪಾರವಾದ ಜ್ಞಾನವಿತ್ತು. ಗ್ರಾಮಸ್ಥರಿಗೆ ಸಂತನ ಜ್ಞಾನದ ಬಗ್ಗೆ ಅಪಾರವಾದ ಅಜ್ಞಾನವೂ ಇತ್ತು. ಒಂದಿನ ರಾತ್ರಿ ಸಂತನಿಗೊಂದು ಕನಸು ಬಿತ್ತು. ಕನಸು ಹೀಗಿತ್ತು - ಇಂದಿನಿಂದ ಸರಿಯಾಗಿ ೩ ದಿನಗಳ ನಂತರ ಈ ಊರಿನಲ್ಲಿ ಮಳೆಯಾಗುತ್ತದೆ. ಅತ್ಯಧಿಕ ಮಳೆಯಾಗಿ ಹಳ್ಳ - ಕೊಳ್ಳಗಳು ತುಂಬಿ ಹರಿಯುತ್ತವೆ. ಆದರೆ ಆ ನೀರನ್ನೇನಾದರೂ ಕುಡಿದರೆ, ಕುಡಿದವರಿಗೆ ಹುಚ್ಚು ಹಿಡಿಯುತ್ತದೆ. ಸಂತನಿಗೆ ಎಚ್ಚರವಾಯಿತು, ಭಯವಾಯಿತು. ಮಾರನೆ ದಿನದಿಂದಲೇ ಆ ಸಂತ ಊರಿನವರನ್ನು ಎಚ್ಚರಿಸಲು ಪ್ರಾರಂಭಿಸಿದ. ಇಂದಿನಿಂದ ಮೂರುದಿನಗಳ ನಂತರದ ಮಳೆ ನೀರನ್ನು ಕುಡಿಯದಿರಿ ಎಂದು ಎಲ್ಲರಿಗೆ ಹೇಳುತ್ತಾ ಬಂದ. ಈ ಊರಿನಿಂದ ಬಹುದೂರ ಒಂದು ಬೆಟ್ಟವಿದೆ. ಬನ್ನಿ, ಅಲ್ಲಿಗೆ ಹೋಗಿ ತಂಗೋಣ ಎಂದ. ಗ್ರಾಮಸ್ಥರು ಸಂತನ ಮಾತಿಗೆ ಅಷ್ಟು ಗಮನವೀಯಲಿಲ್ಲ. ಉಪೇಕ್ಷಿಸಿದರು. ಆದರೆ ಸಂತ ಊರನ್ನು ಬಿಟ್ಟು ಬೆಟ್ಟ ಹತ್ತಿದ. ಆ ದಿನ ಬಂತು. ಮಳೆ ಪ್ರಾರಂಭವಾಯಿತು. ಹಳ್ಳ-ಕೊಳ್ಳಗಳು ತುಂಬಿದವು. ಜನ ಸಂತನನ್ನು ಮರೆತು ನೀರು ಕುಡಿದರು. ಕುಡಿದವರಿಗೆಲ್ಲ ಹುಚ್ಚು ಹಿಡಿಯಿತು. ಎಲ್ಲ ಗ್ರಾಮಸ್ಥರಿಗೂ ಹುಚ್ಚು ಹಿಡಿಯಿತು. 

ದಿನಗಳು ಉರುಳಿದವು. ಬೆಟ್ಟದ ಮೇಲೆ ಸಂತನೊಬ್ಬನೆ. ಆತನಿಗೂ ಕುತೂಹಲ ಬಂತು. ಯಾಕೆ ಒಮ್ಮೆ ಊರಿಗೆ ಹೋಗಿ ಪರಿಸ್ಥಿತಿ ಹೇಗಿದೆಯೆಂದು ನೋಡಿ ಬರಬಾರದು ಎನಿಸಿತು. ಬೆಟ್ಟದಿಂದಿಳಿದು ಊರಿಗೆ ಬಂದು ನೋಡಿದ. ಇಡೀ ಊರಿಗೇ ಊರೇ ಹುಚ್ಚು. ಸಂತ ಊರಿನವರನ್ನು ಕಂಡು ಮಾತನಾಡಿದ. ನಾನು ನಿಮಗೆ ಎಚ್ಚರಿಕೆ ನೀಡಿದ್ದೆ ಎಂದು ಹಲುಬಿದ. ಹಲವರಿಗೆ ಹಾಗೆ ಹೇಳಿದ. ಆದರೆ ಊರಿನವರಿಗೆಲ್ಲರಿಗೆ ಈ ಸಂತನ ವರ್ತನೆ ಸರಿ ಕಾಣಲಿಲ್ಲ. ಸಂತನಿಗೇನಾದರೂ ಹುಚ್ಚು ಹಿಡಿದಿರಬಹುದೇ ಎಂದು ಸಂಶಯಿಸಿದರು. ಬೈದರು, ಹೋಗಾಚೆ ಎಂದರು, ಕಲ್ಲು ಬೀಸಿದರು. ಸಂತ ತಪ್ಪಿಸಿಕೊಂಡು ಮತ್ತೆ ಬೆಟ್ಟ ಹತ್ತಿದ. ಹಲವಾರು ದಿನ ಕಳೆದ ನಂತರ ಸಂತನಿಗೆ ಮತ್ತೆ ಬೆಟ್ಟದಲ್ಲಿ ಒಬ್ಬನೆ ಕೂತು ಬೇಸರವಾಯಿತು. ಮತ್ತೆ ಊರು ಕರೆಯಿತು. ಮತ್ತೆ ಹೋದ. ಪುನ: ಊರಿನವರು ಇವನೊಬ್ಬ ಹುಚ್ಚನೆಂದು ಬೈದು ಓಡಿಸಿದರು. ಸಂತ ಮತ್ತೆ ಬೆಟ್ಟ ಹತ್ತಿದ. ಹಲವು ದಿನಗಳ ನಂತರ ಪುನ: ಅದೇ ಬೇಜಾರು. ಈ ಚಕ್ರಗಳು ಹಲವಾರು ಬಾರಿ ನಡೆದವು. ಕೊನೆಗೊಮ್ಮೆ ಸಂತ ದಿಕ್ಕೆಟ್ಟು ನಿರ್ಧರಿಸಿದ. ಊರಿಗೆ ಬಂದು ತಾನೂ ಕೆರೆಯ ನೀರನ್ನು ಕುಡಿದ. ಅಲ್ಲಿಗೆ ಎಲ್ಲವೂ ಸರಿಯಾದಂತಾಯಿತು.

ಸಂತನ ಪರಿಸ್ಥಿತಿ ಹಲವು ಸಂದರ್ಭಗಳಲ್ಲಿ ಬಂದೊದಗಬಹುದು. ಹತ್ತು ಜನರಾಡುವ ಮಿಥ್ಯೆಯ ನಡುವೆ ಒಬ್ಬರೆ ಸತ್ಯವನ್ನು ಪ್ರತಿಪಾದಿಸುವ ಸಂದರ್ಭ ಬರಬಹುದು. ಆ ಕ್ಷಣಗಳಲ್ಲಿ ಮಾನಸಿಕ ಸ್ಥೈರ್ಯ, ದೃಢ ನಂಬಿಕೆ, ನಿಲುವು ಅವಶ್ಯಕ.

Wednesday, October 14, 2015

ಗುರು ಪ್ರಸಾದ at my desk. Please help to read yourself

ಒಬ್ಬ ವ್ಯಾಪಾರಿ. ಆತನ ವ್ಯಾಪಾರ ದೇಶ-ದೇಶಗಳ ನಡುವೆ, ಹಡಗುಗಳ ಮೂಲಕ. ದುರದೃಷ್ಟವಶಾತ್ ಒಮ್ಮೆ ಸಮುದ್ರದಲ್ಲಿ ಬಿರುಗಾಳಿ ಎದ್ದು ಆತನ ಹಡಗುಗಳೆಲ್ಲ ಮುಳುಗಿದವು. ಅತನ ಅತಿ ದೊಡ್ಡ ಹೂಡಿಕೆ ನಷ್ಟವಾಗಿತ್ತು. ಈ ರೀತಿಯ ನಷ್ಟವನ್ನು ಅವನು ಎಂದೂ ಅನುಭವಿಸಿರಲಿಲ್ಲ. ಇದರಿಂದ ಚೇತರಿಸಿಕೊಳ್ಳುವುದು ಅಸಾಧ್ಯವೆನಿಸಿತ್ತು ಆ ವ್ಯಾಪಾರಿಗೆ. ಬೇರೆ ದಾರಿಗಾಣದೆ ಆತ್ಮಹತ್ಯೆಯ ಹಾದಿ ತುಳಿದಿದ್ದ. ಆ ಸಮಯದಲ್ಲಿ ಆ ವ್ಯಾಪಾರಿಗೆ ಒಬ್ಬ ವೃದ್ಧನ ಪರಿಚಯವಾಯಿತು. ತಾನೂ ಒಬ್ಬ ವ್ಯಾಪಾರಿಯಾಗಿದ್ದೆನೆಂದೂ, ಅತಿ ಹೆಚ್ಚು ಧನ ಸಂಪಾದನೆ ಮಾಡಿದ್ದೇನೆಂದೂ ಆ ವೃದ್ಧ ತನ್ನ ಪರಿಚಯ ಮಾಡಿಕೊಂಡ. ಈ ವ್ಯಾಪಾರಿಯ ಕಷ್ಟದ, ನಷ್ಟದ ಕತೆಯನ್ನು ಆ ವೃದ್ಧ ಆಲಿಸಿದ, ಸ್ವತ: ನೊಂದ, ಸಂತೈಸಿದ. ವೃದ್ಧನಿಗೆ ಏನೆನ್ನಿಸಿತೋ, ತನ್ನಲ್ಲಿದ್ದ ಬ್ಯಾಂಕ್ ಚೆಕ್ ವೊಂದನ್ನು ತೆಗೆದು, ತನ್ನ ಸಹಿ ಮಾಡಿ ಆ ವ್ಯಾಪಾರಿಗೆ ಕೊಟ್ಟ. "ನೀನು ಪುನ: ವ್ಯಾಪಾರವನ್ನಾರಂಭಿಸು, ಸಣ್ಣದಾಗೇ ಪ್ರಾರಂಭಿಸು, ಒಂದು ವೇಳೆ ಮತ್ತೆ ಎಂದಾದರೂ ನೀನು ನಷ್ಟವನ್ನನುಭವಿಸಿ ಸಾಯಲು ಹೊರಟೆ ಎಂದಾದರೆ, ಆ ನಿರ್ಧಾರವನ್ನು ಬದಲಿಸು. ನನ್ನ ಹತ್ತಿರ ಸಾಕಷ್ಟು ಹಣವಿದೆ. ಈ ಚೆಕ್ಕನ್ನು ಉಪಯೋಗಿಸಿ ಹಣವನ್ನು ಪಡೆದುಕೋ, ಹೊಸ ಜೀವನವನ್ನು ಪ್ರಾರಂಭಿಸು" ಎಂದು ಆ ವ್ಯಾಪಾರಿಗೆ ಹೇಳಿ ಆ ವೃದ್ಧ ಹೋದ. 

ವ್ಯಾಪಾರಿಗೆ ಆ ಚೆಕ್ ಹೊಸ ಚೈತನ್ಯವನ್ನು ತುಂಬಿತು. ತಾನಿಲ್ಲಿಗೆ ಬಿಡಬಾರದೆಂದು, ಪುನ: ನಿರ್ಧರಿಸಿದ. ಮತ್ತೆ ಸೋತರೆ ಹೇಗಿದ್ದರೂ ಜೀವನಕ್ಕೆ ಈ ಚೆಕ್ ಇದ್ದೇ ಇದೆ ಎಂದು ಭಂಡ ಧೈರ್ಯ ಮಾಡಿ ಪುನ: ತನ್ನ ವ್ಯಾಪಾರವನ್ನು ಆರಂಭಿಸಿದ. ಸಣ್ಣದಾಗಿ ಶುರು ಮಾಡಿ, ಮತ್ತೆ ಲಾಭಗಳಿಸುತ್ತಾ ಸಾಗಿದ. ಆರು ತಿಂಗಳು ಕಳೆಯುವ ಹೊತ್ತಿಗೆ ಆ ವ್ಯಾಪಾರಿಗೆ ಆತ್ಮವಿಶ್ವಾಸ ಬೆಳೆದಿತ್ತು. ತಾನೀಗ ಸಮರ್ಥವಾಗಿ ತನ್ನ ವ್ಯವಹಾರ ನಿಭಾಯಿಸಬಲ್ಲೆ ಮತ್ತು ಇನ್ನೆಂದೂ ನನಗೆ ಈ ಚೆಕ್ಕಿನ ಅವಶ್ಯಕತೆ ಬರದಂತೆ ಜೀವನ ನಿರ್ವಹಿಸೆಬಲ್ಲೆನೆಂಬ ವಿಶ್ವಾಸ ವ್ಯಾಪಾರಿಗೆ ಬಂದಿತ್ತು. ಇನ್ನು ಈ ಚೆಕ್ಕನ್ನು ಆ ವೃದ್ಧನಿಗೆ ಮರಳಿಸಿ ಧನ್ಯವಾದಗಳನ್ನು ತಿಳಿಸಬೇಕೆಂದು ನಿರ್ಧರಿಸಿದ. ಆ ವೃದ್ಧನನ್ನು ಹುಡುಕತೊಡಗಿದ. ಬಹಳ ಹುಡುಕಾಟದ ನಂತರ ಒಂದು ಆಸ್ಪತ್ರೆಯಲ್ಲಿ ಆ ವೃದ್ಧನನ್ನು ಹಿಡಿಯಲು ಸಾಧ್ಯವಾಯಿತು. ಅಲ್ಲಿ ಆ ವೃದ್ಧನನ್ನು ನೋಡಿಕೊಳ್ಳುವ ದಾದಿಯ ಬಳಿ ಮಾತನಾಡಿದ. ಈ ವ್ಯಾಪಾರಿಯನ್ನು ನೋಡಿದ ದಾದಿ ಕೇಳಿದಳು - "ಏನು? ಈ ವೃದ್ಧ ನಿಮಗೂ ತಾನೊಬ್ಬ ಬಹುದೊಡ್ಡ ವ್ಯಾಪಾರಿಯೆಂದು ಗುರುತಿಸಿಕೊಂಡನೇ? ನಿಮಗೇನಾದರೂ ಖಾಲಿ ಚೆಕ್ ಗೆ ಸಹಿ ಹಾಕಿಕೊಟ್ಟನೆ?" ವ್ಯಾಪಾರಿ ಹೌದೆಂದು ತಲೆಯಲ್ಲಾಡಿಸಿದ. ದಾದಿ ಪುನ: ಹೇಳಿದಳು - "ಈತನೊಬ್ಬ ಮನೋರೋಗಿ, ಈಗ ಆರು ತಿಂಗಳ ಮೊದಲು ಈ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ. ಸಿಕ್ಕ ಸಿಕ್ಕಿದವರಿಗೆ ತಾನೊಬ್ಬ ಬಹುದೊಡ್ಡ ವ್ಯಾಪಾರಿಯೆಂದು ಗುರುತಿಸಿಕೊಳ್ಳುವುದು ಮತ್ತು ಖಾಲಿ ಚೆಕ್ಕಿಗೆ ಸಹಿಹಾಕಿ ಕೊಡುವುದು ಈತನದೊಂದು ಗೀಳು". ವ್ಯಾಪಾರಿಯ ಮೈ ಬೆವತಿತ್ತು. ಆದರೆ ಆ ಖಾಲಿ ಚೆಕ್ಕು ಆತನ ಜೀವನವನ್ನು ಬದಲಿಸಿತ್ತು.

ಜೀವನದಲ್ಲಿ ಸಂಪೂರ್ಣ ಸೋತು ಸಾಯುವ ಹಂತದಲ್ಲಿದ್ದಾಗ, ದೇವರು ಸಣ್ಣ ಅವಕಾಶವೊಂದನ್ನು ನೀಡುತ್ತಾನೆ. ಆತನನ್ನು ನಂಬಿ, ಧನಾತ್ಮಕವಾಗಿ ಚಿಂತಿಸಿ ಕೈಹಿಡಿದರೆ ಪುನ: ಮೇಲೇಳಲು ಸಾಧ್ಯವಾಗಬಹುದು.

Monday, October 12, 2015

ಝೂಂಡನ ಊಟ.



ಝೂಂಡನಿಗೆ ಊಟ ರುಚಿಸಲಿಲ್ಲ. ಅಂದಿನಿಂದ ಹಲವಾರು ದಿನಗಳವರೆಗೆ ಊಟ ರುಚಿಸಲಿಲ್ಲ. ಹಲವಾರು ದಿನಗಳಿಂದ ಝೂಂಡನ ಪತ್ನಿಯ ಮನಸ್ಥಿತಿಯೂ ಸರಿ ಇಲ್ಲ. ಒಂಥರಾ ಕಿರಿ ಕಿರಿ. ಸಮಾಧಾನವಿಲ್ಲ. ಸಿಡುಕು. ಝೂಂಡನಿಗೆ ಪತ್ನಿಯ ಮನಸ್ಥಿತಿಗೂ ತನ್ನ ಊಟಕ್ಕೂ ಏನೋ ಸಂಬಂಧವಿದೆಯೆನ್ನಿಸಿತು. ಮುಂದಿನ ಬಾರಿಯ ಝೂಂಡ ಗುರುವಿನ ಭೇಟಿಯಲ್ಲಿ ಈ ವಿಷಯವಾಗಿ ಸಾಕಷ್ಟು ಚರ್ಚಿಸಿದ. ಝೂಂಡಗುರುಗಳು ಆತನಿಗೆ ಎರಡು ಸಲಹೆಗಳನ್ನಿತ್ತರು. ೧. ಅನ್ನದಾನ ನಡೆಯುವೆಡೆ ಊಟಮಾಡು. ೨. ತಾಯಿಯೊಬ್ಬಳು ಮಗುವಿಗಾಗಿ ಕಲಸಿದ ಅನ್ನವನ್ನು ಊಟಮಾಡು. ಈ ಎರಡು ಸಲಹೆಗಳು ನಮಗೆ ವಿಚಿತ್ರವೆನಿಸಲಿಲ್ಲ. ಯಾಕೆಂದರೆ ನಮಗೆ ಗೊತ್ತು. ಈ ಎರಡೂ ಒಂಥರಾ ಹೆಚ್ಚು ರುಚಿಯಾಗಿರುತ್ತದೆ. ಆದರೆ ಝೂಂಡನಿಗೆ ವಿಚಿತ್ರವೆನಿಸಿತು.. ಮತ್ತು ಆ ಹೆಚ್ಚಿನ ರುಚಿ ಯಾಕೆಂದು ಬುದ್ಧಿಯನ್ನು ಒರೆಗೆ ಹಚ್ಚಿದ. ಝೂಂಡ ಗುರುವಿನ ಬಳಿ ಚರ್ಚಿಸಿದ. ವಿವರಣೆ ಪಡೆದ. ಅಡಿಗೆಯೊಂದೇ ಎಂದೂ ರುಚಿಯಾಗಿರುವುದಿಲ್ಲ. ಅದರ ಜೊತೆ ಭಾವವು ಬೆರೆತಿರಬೇಕು. ಅನ್ನದಾನಗಳಲ್ಲಿ ದಾನಿಯು ಒಂದೋ ತನ್ನ ಪಾಪ ಕರ್ಮಗಳನ್ನು ಕಳೆದುಕೊಳ್ಳುವ ಭಾವದಿಂದಿರುತ್ತಾನೆ. ಅಥವಾ ಹೆಚ್ಚಿನ ಪುಣ್ಯ ಸಂಪಾದನೆಯ ಭಾವ ಹೊಂದಿರುತ್ತಾನೆ. ಇವರಡೂ ಸಹ ಒಳ್ಳೆಯ ಭಾವಗಳು. ಇವು ಆತ ಮಾಡುವ ದಾನದೊಂದಿಗೆ ಬೆರೆಯುತ್ತವೆ. ತಾಯಿ ಮಗುವಿಗಾಗಿ ಅನ್ನ ಕಲಸುವಾಗ ಅವಳ ಪ್ರೀತಿ, ಕರುಣೆಗಳು ಅಲ್ಲಿ ಸೇರುತ್ತವೆ. ತನ್ನ ಮಗುವಿವೆ ಇದು ಅಮೃತಾನ್ನವಾಗಲೆಂಬ ಭಾವ ಸೇರಿ ಅದು ಅಮೃತಾನ್ನವೇ ಆಗುತ್ತದೆ. ಹಾಗಾಗಿ ಅದು ಬರಿಯ ಹಾಲನ್ನವಾದರೂ ಹೆಚ್ಚು ರುಚಿ. ಒಳ್ಳೆಯ ಭಾವವು ಬೆರೆತಿರುವ ಆಹಾರ ಸಹಜವಾಗಿಯೇ ಹೆಚ್ಚು ರುಚಿಯಾಗಿರುತ್ತದೆ. ಝೂಂಡ ಗುರುಗಳು ಇವಿಷ್ಟು ವಿವರಣೆಯನ್ನು ಝೂಂಡನಿಗೆ ಹೇಳಿ, ನಿನ್ನ ಪತ್ನಿಯನ್ನು ಸಮಾಧಾನಿಸು. ಆ ಸಮಾಧಾನ ಬೆರೆತಿರುವ ಅಡಿಗೆಯನ್ನು ನೀನು ಸಮಾಧನದಿಂದ ಸ್ವೀಕರಿಸೆಂದು ಹೇಳಿದರು. ಅಂದಿನಿಂದ ಝೂಂಡ ಅಮೃತಾನ್ನವನ್ನೇ ಸೇವಿಸಿದ.

ಪ್ರಾಯದಿಂದ ಸಣ್ಣವರು, ದೊಡ್ಡ ವಿಚಾರ.



ಅದೊಂದು ಮೂರು - ಮೂರೂವರ್ಷದ ಕೂಸು. ಅದಕ್ಕೆ ದಿನ ಪತ್ರಿಕೆಯಲ್ಲಿ ಬರುವ ಭಾವಚಿತ್ರಗಳನ್ನು ನೋಡುವುದು ಮತ್ತು ಇದರ ಬಗ್ಗೆ ಕತೆ ಹೇಳೆಂದು ಕೇಳುವುದು ಅಭ್ಯಾಸ. ವಿಜಯವಾಣಿಯ ವಾರದಲ್ಲೊಮ್ಮೆ ಬರುವ ಸಂಸ್ಕೃತಿ ಎಂಬ ಮತ್ತೊಂದು ಪತ್ರಿಕೆಯಲ್ಲಿ ಅನಂತನ ಚತುರ್ದಶಿಯ ನಿಮಿತ್ತ ಲೇಖನವೊಂದು ಪ್ರಕಟವಾಗಿತ್ತು. ಅದರಲ್ಲಿ ಅನಂತ ಪದ್ಮನಾಭನ ಸುಂದರವಾದ ಚಿತ್ರವೂ ಇತ್ತು. ಈ ಕೂಸಿಗೆ ಕುತೂಹಲ ಬಂತು. ಅದೇನೆಂದು ಕೇಳಿತು. ಹೆತ್ತವರು ವಿವರಿಸಿದರು. ಮಗುವಿಗೆ ಕುತೂಹಲ. ಅಲ್ಲ, ಆ ದೇವರು ಹಾವಿನ ಮೇಲೇಕೆ ಮಲಗಿದ್ದಾನೆ? ಅದು ಅವನಿಗೆ ಕಚ್ಚುವುದಿಲ್ಲವಾ? ಪ್ರಶ್ನೆ. ಹೆತ್ತವರಿಗೆ ಮುಗ್ಧ ನಗು. ಅದರ ವಿಚಾರವಾಗಿ ಕತೆಯನ್ನು ಹೇಳಲಾಯಿತು. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ. ಮಗುವೆಂದಿತು. ನಾನವನನ್ನು ನೋಡಬೇಕು. ಅವನೆಲ್ಲಿರುತ್ತಾನೆ? ಹೇಗೆ ನೋಡುವುದು? ಮತ್ತೆ ಹೆತ್ತವರ ವಿವರಣೆ. ಮಗು, ಅವನು ನಿನ್ನೊಳಗೇ ಇದ್ದಾನೆ. ನೀನವನನ್ನು ನೋಡಲು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದಪ್ಪ. ಇದನ್ನು ಹೇಳಿದುದದರ ಉದ್ದೇಶ, ಆ ಮಗು ತುಂಬಾ ತುಂಟ. ಒಂದರೆ ಕ್ಷಣವೂ ಸುಮ್ಮನಿರಲಾರದ ಕೂಸು. ಹಾಗಾಗಿ ಸ್ವಲ್ಪ ಹೊತ್ತು ಮಗುವನ್ನು ಸುಮ್ಮನೆ ಕೂರಿಸುವ ಹೆತ್ತವರ ವ್ಯರ್ಥ ಪ್ರಯತ್ನ. ಆದರೆ ಏನಾಶ್ಚರ್ಯ? ಅದನ್ನು ಕೇಳಿದ ಮಗು, ಕೂತಿತು. ಸುಮ್ಮನೆ ಕಣ್ಮುಚ್ಚಿ ಒಂದರೆ ಕ್ಷಣ ಕೂತಿತು. ಆ ಮಗುವಿಗೆ ಏನರ್ಥವಾಯಿತೋ, ಅದು ದೇವರನ್ನು ಕಂಡಿತೋ, ಕಾಣುವುದೋ ಪ್ರಸ್ತುತವಲ್ಲ. ಆದರೆ ಅಷ್ಟು ಚಿಕ್ಕ ಮಗುವಿಗೆ ತಾನು ಇವನನ್ನು ನೋಡಬೇಕು ಅನ್ನಿಸಿದ್ದಿದೆಯಲ್ಲ, ಅದು ದೊಡ್ಡ ವಿಚಾರ. 

ಗುರು ಪ್ರಸಾದ at my desk. Please help to read yourself.



ಅದೊಂದು ಶುಭ ಸಂಜೆ. ಹೊರಗಿನ್ನೂ ಬೆಳಕಿತ್ತು. ಮನೆಯ ಒಳಗೆ ಕತ್ತಲೆ ಕವಿದಿತ್ತು. ಒಬ್ಬ ಅಜ್ಜಿ ಮನೆಯ ಅಂಗಳದಲ್ಲಿ ಏನನ್ನೋ ಹುಡುಕುತ್ತಿದ್ದಳು. ಬಹಳ ಹೊತ್ತಿನಿಂದ ಹುಡುಕುತ್ತಿದ್ದಳು. ಒಮ್ಮೊಮ್ಮೆ ತಾನು ಹುಡುಕುತ್ತಿದ್ದುದು ಸಿಕ್ಕೇ ಬಿಟ್ಟಿತೆಂದು ಸಂತೋಷಿಸುತ್ತಿದ್ದಳು. ಆದರೆ ಸಿಕ್ಕಿದ್ದು ತಾನು ಹುಡುಕುತ್ತಿದ್ದುದಾಗಿರುತ್ತಿರಲಿಲ್ಲ. ಮತ್ತೆ ಬೇಸರಿಸುತ್ತಿದ್ದಳು. ಮತ್ತೆ ಹುಡುಕುತ್ತಿದ್ದಳು. ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳಿಗೆ ಅಜ್ಜಿಯ ಈ ವರ್ತನೆ ವಿಚಿತ್ರವೆನಿಸಿತು. ಅಜ್ಜಿಯ ಬಳಿ ಓಡಿ ಬಂದು ಕೇಳಿದಳು. 'ಅಜ್ಜಿ, ಅಷ್ಟು ಹೊತ್ತಿನಿಂದ ಏನು ಹುಡುಕುತ್ತಿದ್ದೀಯ?' ಅಜ್ಜಿ ಉತ್ತರಿಸಿದಳು. 'ಒಂದು ಗುಂಡು ಸೂಜಿ ಕಳೆದೋಗಿತ್ತು'. ಮೊಮ್ಮಗಳು ಮತ್ತೆ ಪ್ರಶ್ನಿಸಿದಳು. 'ಎಲ್ಲಿ ಕಳೆದೋಗಿತ್ತು'? ಅಜ್ಜಿಯ ಉತ್ತರ - 'ಮನೆ ಒಳಗೆ ಆಡುಗೆ ಮನೆಯಲ್ಲಿ ಕಳೆದೋಗಿತ್ತು. ಅಲ್ಲಿ ಈಗ ಬೆಳಕಿಲ್ಲ. ಕತ್ತಲು. ಇಲ್ಲಾದರೆ ಬೆಳಕಿದೆ. ಹಾಗಾಗಿ ಇಲ್ಲಿ ಹುಡುಕುತ್ತಿದ್ದೇನೆ'. ಮೊಮ್ಮಗಳಿಗೆ ವಿಚಿತ್ರವೆನಿಸಿತು. ಕೇಳಿದಳು. 'ಏನಜ್ಜೀ ನೀನು. ಇಷ್ಟೊಂದು ವಯಸ್ಸಾಗಿದೆ ನಿನಗೆ. ಒಂದು ಸಣ್ಣ ಗುಂಡು ಸೂಜಿಗಾಗಿ ಇಷ್ಟೆಲ್ಲ ಹುಡುಕಬೇಕೇ? ಹೋಗಲಿ, ಕಳೆದುದನ್ನು ಕಳೆದಲ್ಲಿ ಹುಡುಕಬೇಕು ತಾನೆ?' 

ಎರಡು ವಿಚಾರಗಳಲ್ಲಿ ಗೊಂದಲಗಳಿವೆ. ೧. ಏನನ್ನು ಹುಡುಕಬೇಕು ಗೊತ್ತಿಲ್ಲ. ೨. ಎಲ್ಲಿ ಹುಡುಕಬೇಕು ಗೊತ್ತಿಲ್ಲ. ಗುಂಡು ಸೂಜಿಯೊಂದು ನೆಮ್ಮದಿ. ಇದನ್ನು ಅಂತರಂಗದಲ್ಲಿ ಹುಡುಕದೇ ಬಹಿರಂಗದಲ್ಲಿ ಹುಡುಕುತ್ತಿದ್ದೇವೆ. ಕಾರಣ, ಅಂತರಂಗ ಕತ್ತಲಾಗಿದೆ. ಬಹಿರಂಗದಲ್ಲಿ ಕಣ್ಣು ಕೋರೈಸುವ ಬೆಳಕಿದೆ. ನೆಮ್ಮದಿಯೆಂದು ತೋರುವ ಹಲವಾರು (ಅಡ್ಡ, ಉದ್ದ, ಅಗಲ) ದಾರಿಗಳಿವೆ. ಬೇಕಾದುದು ಬೆಳಕು, ಅಂತರಂಗದಲ್ಲಿ. ಅದನ್ನು ಹೊತ್ತಿಸಿಕೊಳ್ಳಬೇಕು. ಆ ಬೆಳಕಿನಲ್ಲಿ ಹುಡುಕಬೇಕು.

ಗುರು ಪ್ರಸಾದ at my desk. Please help to read yourself.



ಅದೊಂದು ಶುಭದಿನ. ಒಂದು ರೈಲಿನಲ್ಲಿ ಒಬ್ಬ ತಂದೆ ಆತನಿಗೊಬ್ಬ ವಯಸ್ಕನಾದ ಮಗ ಪ್ರಯಾಣಿಸುತ್ತಿದ್ದರು. ಮಗನಿಗೆ ಎಲ್ಲಿಲ್ಲದ ಕೌತುಕ. ಆತ ಕಿಟಕಿಯ ಹೊರ ನೋಡುತ್ತಿದ್ದುದನ್ನು ಸಹ ಪ್ರಯಾಣಿಕರು ಅಚ್ಚರಿಯೆಂಬಂತೆ ನೋಡುತ್ತಿದ್ದರು. ಮಗ ತನ್ನ ತಂದೆಗೆ ಕಿಟಕಿಯ ಹೊರ ತೋರಿಸುತ್ತಾ ಹೇಳುತ್ತಿದ್ದ. 'ನೋಡಪ್ಪಾ, ಹೊರಗೆ ಎಂತಾ ಸೌಂದರ್ಯವಿದೆ! ಮರ-ಗಿಡಗಳು ಹಿಂದೆ, ಹಿಂದೆ ಓಡುತ್ತಿವೆ'. ತಂದೆ ಮಗನಿಗೆ ಸಮಾಧಾನಿಸುತ್ತಿದ್ದ. ಹೌದು ಇದು ಅದ್ಭುತವೆಂಬಂತೆ ಸಮಾಧಾನಿಸುತ್ತಿದ್ದ. ಸ್ವಲ್ಪ ಪ್ರಯಾಣದ ನಂತರ ಮಗ ಮತ್ತೆ ತಂದೆಗೆ ಹೇಳಿದ. 'ನೋಡಪ್ಪಾ, ಹೊರಗೆ ಮಳೆ ಬರುವಂತಾಗಿದೆ. ಮೋಡಗಳು ನಮ್ಮಿಂದ ಹಿಂದೆ ಹಿಂದೆ ಓಡುತ್ತಿವೆ'. ಸಹ ಪ್ರಯಾಣಿಕನೊಬ್ಬನಿಗೆ ಇವನ ವರ್ತನೆ ವಿಚಿತ್ರವೆನಿಸಿತು. ರೈಲು ಇನ್ನೂ ಮುಂದೋಡಿತು. ಅಲ್ಲಿ ದನ-ಕರುಗಳು ಮೇಯುತ್ತಿದ್ದವು. ಅದನ್ನು ತೋರಿಸಿ ಮಗ ತಂದೆಗೆ ಹೇಳಿದ. ನೋಡಪ್ಪಾ, ದನ-ಕರುಗಳು ಮೇಯುತ್ತಲೇ ಹಿಂದೆ ಹಿಂದೆ ಸಾಗುತ್ತಿವೆ. ಸಹ ಪ್ರಯಾಣಿಕನಿಗೆ ಈಗ ಇವನ ವರ್ತನೆ ಕಿರಿ ಕಿರಿಯಾದಂತೆನಿಸಿತು. ಆತ ಆ ತಂದೆಗೆ ಹೇಳಿದ. 'ಏನು, ನಿಮ್ಮ ಮಗ ಇಷ್ಟು ದೊಡ್ಡವನು. ಆದರೆ ಆತನ ವರ್ತನೆ ತೀರಾ ವಿಚಿತ್ರವಾಗಿದೆ. ಇವನನ್ನು ಒಬ್ಬ ಒಳ್ಳೆಯ ಮನೋ ವೈದ್ಯರ ಬಳಿಯಲ್ಲಿ ಯಾಕೆ ತೋರಿಸಬಾರದು'? ಆ ತಂದೆ ತುಂಬಾ ಸಮಾಧಾನದಿಂದ ಸಹ ಪ್ರಯಾಣಿಕನಿಗೆ ಉತ್ತರಿಸಿದ. 'ಹೌದು. ನಾವೀಗ ಒಬ್ಬ ವೈದ್ಯರನ್ನು ಕಂಡೇ ವಾಪಸಾಗುತ್ತಿದ್ದೇವೆ. ನನ್ನ ಮಗ ತೀರಾ ಚಿಕ್ಕ ವಯಸ್ಸಿನಲ್ಲೇ ತನ್ನೆರಡು ಕಂಗಳನ್ನೂ ಕಳೆದುಕೊಂಡ. ಆತನಿಗೆ ಈಗಷ್ಟೇ ಮತ್ತೆ ದೃಷ್ಟಿ ಬಂದಿದೆ. ಆತನಿಗೆ ಈಗ ಇವೆಲ್ಲವೂ ಹೊಸತು. ಹಾಗಾಗಿ ಆತನ ವರ್ತನೆ ಹೀಗಿದೆ. ದಯಮಾಡಿ ಸ್ವಲ್ಪ ಸಹಕರಿಸಿ'.
ಕಣ್ಮುಂದಿನ ಸಂಗತಿಗಳು ತೀರಾ ಭಿನ್ನವಾಗಿದ್ದಿರಬಹುದು. ಯಾವ ವರ್ತಮಾನ ಸಂಗತಿಗಳನ್ನೂ ಒಮ್ಮೆ ನೋಡಿ ತೀರ್ಮಾನ ಹೇಳಲು ಕಷ್ಟವಲ್ಲವೇ?

ಪ್ರಾಯದಿಂದ ಸಣ್ಣವರು, ದೊಡ್ಡ ಪ್ರಶ್ನೆಗಳು



ಸುಮಾರು ಮೂರು - ಮೂರೂವರೆ ವರ್ಷದ ಬಾಲಕ. ಬೆಳಗ್ಗೆ ಶಾಲೆಗೆ ಹೊರಟಿದ್ದ. ಶಾಲಾ ವಾಹನ ಬರುವುದಕ್ಕಿನ್ನೂ ಸಮಯವಿತ್ತು. ಆತನ ಅಪ್ಪ ತಿನ್ನಲಿಕ್ಕೆಂದು ಅವನ ಮುಷ್ಟಿಗೆ ಒಂದಷ್ಟು ದ್ರಾಕ್ಷಿ, ಬಾದಾಮಿಗಳನ್ನು ಕೊಟ್ಟರು. ಸರಿ. ಶಾಲಾ ವಾಹನ ಬಂತು. ಆತನ ತಾಯಿ ಹತ್ತಿಸಿ ಕಳಿಸಿದ್ದಾಯಿತು. ಸಂಜೆ ಮನೆಗೆ ಬಂದ ತಂದೆಗೆ ತಾಯಿ ಕೇಳಿದಳು. 'ನೀವೇನೋ ದ್ರಾಕ್ಷಿ, ಬಾದಾಮಿ ಕೊಟ್ಟು ಕಳಿಸಿದಿರಿ. ಅಲ್ಲಿ ವಾಹನದಲ್ಲಿ ಹಲವಾರು ಮಕ್ಕಳಿದ್ದರು. ಅವರೆದುರಿಗೆ ಇವನೊಬ್ಬನೇ ಹೇಗೆ ತಿನ್ನಬೇಕು?' ತಂದೆ ಮಗನನ್ನು ಕರೆದು ಹೇಳಿದರು, 'ಮಗು, ಕೈಯಲ್ಲಿ ಏನಾದರೂ ತಿನ್ನುವ ವಸ್ತುವಿದ್ದರೆ, ಸುತ್ತಲೂ ಬೇರೆಯವರಿದ್ದರೆ, ಅವರಿಗೆ ಒಂದಷ್ಟು ಕೊಟ್ಟು, ನೀನು ತಿನ್ನಬೇಕು'. ಮಗು ಕೇಳಿತು. 'ಯಾಕಪ್ಪಾ'? ಆ ಮಗು ಹಾಗೆಯೇ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುವುದು ಅದಕ್ಕೆ ಅಭ್ಯಾಸ. ತಂದೆ ತುಂಬಾ ಸ್ವಾಭಾವಿಕವೆಂಬಂತೆ ಉತ್ತರಿಸಿದರು. 'ಮಗು, ನೀನು ನಿನ್ನ ಕೈಯಲ್ಲಿರುವ ತಿನ್ನುವ ವಸ್ತುವನ್ನು ಮತ್ತೊಬ್ಬನಿಗೆ ಕೊಟ್ಟರೆ, ಅವರು ನಿನ್ನ ಫ್ರೆಂಡ್ (ಈಗಿನ ಮಕ್ಕಳಿಗೆ ಸ್ನೇಹಿತ ಶಬ್ದದ ಪರಿಚಯ ಅಷ್ಟಾಗಿ ಇಲ್ಲ) ಆಗುತ್ತಾರೆ. ನಿನಗೆ ಆಡಲು ಒಬ್ಬ ಗೆಳೆಯ ಸಿಗುತ್ತಾನೆ'. ಬಹುಷ: ಆ ಮಗುವಿಗೆ ಶಾಲೆಯಲ್ಲಿ ಏಕವಚನ, ಬಹುವಚನ ಹೇಳಿ ಕೊಟ್ಟಿರಬೇಕು. ಮಗು ತನ್ನ ಕೈ ತೋರಿಸಿ ಹೇಳಿತು. 'ಫ್ರೆಂಡ ಅಂದ್ರೆ ಒಬ್ಬ. ಫ್ರೆಂಡ್ಸ ಅಂದ್ರೆ ಜಾಸ್ತಿ ಜನ' ಅಲ್ವೇನಪ್ಪ? ತಂದೆಗೆ ಈಗ ಮುಗ್ಧ ನಗು. ಅವರೆಂದರು. 'ಹೌದು ಮಗು. ಫ್ರೆಂಡ್ಸ್ ಅಂದ್ರೆ ಜಾಸ್ತಿ ಜನ. ನೀನು ನಿನ್ನ ಕೈಯಲ್ಲಿರೋದನ್ನ ಜಾಸ್ತಿ ಜನಕ್ಕೆ ಹಂಚಿ ತಿಂದರೆ, ನಿನಗೆ ಜಾಸ್ತಿ ಜನ ಫ್ರೆಂಡ್ಸ್ ಸಿಗುತ್ತಾರೆ ಆಟವಾಡಲು. ನಿನ್ನ ಮನಸ್ಸು ಸಿಹಿಯಾಗುತ್ತದೆ. ಕೈಯಲ್ಲಿರುವ ಸಿಹಿಯನ್ನು ಹಂಚಿ, ಇನ್ನೂ ಹೆಚ್ಚು, ಜಾಸ್ತಿ ಸಿಹಿಯನ್ನ ನೀನು ನಿನ್ನ ಬದುಕಲ್ಲಿ ಪಡೆದುಕೊಳ್ಳಬಹುದು'. 

ಮಗುವಿಗೆ ಅರ್ಥವಾಯಿತೋ, ಬಿಡ್ತೋ ಗೊತ್ತಿಲ್ಲ. ಆದರೆ ಮಕ್ಕಳೆಂದರೆ ಹಾಗೆ. ಪ್ರಶ್ನೆಗಳು. ಅವರ ಮನದ ತುಂಬಾ, ಬಾಯಿ ತುಂಬಾ ಪ್ರಶ್ನೆಗಳು. ಅವರಿಗೆ ಉತ್ತರಿಸಲು ನಮಗೊಂದಿಷ್ಟು ಸಮಯ, ಸಮಾಧಾನ ಬೇಕು ಅಷ್ಟೆ. ಕ್ಷಣಗಳು ಸುಂದರ.

ಗುರು ಪ್ರಸಾದ at my desk. Please help to read yourself



ಒಂದು ಚೇಳು ನೀರಿನಲ್ಲಿ ಬಿದ್ದು, ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಆ ದಾರಿಯಲ್ಲಿ ಒಬ್ಬ ಸಂತ ಶಿಷ್ಯರೊಡನೆ ಹೋಗುತ್ತಿದ್ದ. ಆತ ಈ ಚೇಳನ್ನು ಗಮನಿಸಿದ. ಅವನ ಮನ ಕರಗಿತು. ಅದನ್ನು ಬದುಕಿಸಬೇಕು ಎಂದು ತೀರ್ಮಾನಿಸಿದ ಮತ್ತು ತನ್ನ ಕೈಯಿಂದ ಆ ಚೇಳನ್ನು ನೀರಿನಿಂದ ಎತ್ತಿದ. ಎತ್ತಿದ ತಕ್ಷಣ ಚೇಳು ಆ ಸಂತನ ಕೈಗೆ ಕುಟುಕಿತು. ಸಂತ ತನ್ನ ಕೈಯನ್ನ ಕುಡುಗಿದ. ಕೈಯಲ್ಲಿದ್ದ ಚೇಳು ಜಾರಿ ಮತ್ತೆ ನೀರಿಗೆ ಬಿತ್ತು. ಪುನ: ಸಾವು - ಬದುಕಿನ ಹೋರಾಟ. ಸಂತನಿಗೆ ಮತ್ತೆ ಅಯ್ಯೋ ಎನಿಸಿತು. ಮತ್ತೆ ತನ್ನ ಕೈಯಿಂದ ಚೇಳನ್ನು ರಕ್ಷಿಸಲು ಪ್ರಯತ್ನಿಸಿದ. ಚೇಳನ್ನು ಎತ್ತುತ್ತಿದ್ದಂತೆಯೆ ಅದು ಮತ್ತೆ ಸಂತನ ಕೈಗೆ ಕಚ್ಚಿತು. ಉರಿ ತಾಳಲಾರದೆ ಸಂತ ಮತ್ತೆ ತನ್ನ ಕೈ ಕುಡುಗಿದ. ಆ ರಭಸಕ್ಕೆ ಮತ್ತೆ ಚೇಳು ನೀರೊಳಗೆ ಬಿತ್ತು. ಈ ಘಟನೆಗಳು ಪುನ: ಪುನ: ನಡೆದವು. ಹಲವಾರು ಬಾರಿಯ ಪ್ರಯತ್ನದ ನಂತರ ಆ ಸಂತ ನೀರಿನಲ್ಲಿ ಬಿದ್ದ ಚೇಳನ್ನು ತನ್ನ ಕೈಯಾರೆ ಎತ್ತಿ ದಡಕ್ಕೆ ಬಿಡಲು ಯಶಸ್ವಿಯಾದ. ಆದರೆ ಆ ವೇಳೆಗಾಗಲೇ ಸಂತನಿಗೆ ಚೇಳಿನ ನಂಜು ಹೆಚ್ಚಿತ್ತು. ತಾಳಲಾರದೆ ಕುಸಿದು ಕುಳಿತ. ಆತನ ಶಿಷ್ಯರು ಈ ಘಟನೆಗಳನ್ನು ವಿಚಿತ್ರವೆಂಬಂತೆ ನೋಡುತ್ತಿದ್ದರು. ಸಂತನನ್ನು ಉಪಚರಿಸಿದರು. ಆತ ಪುನ: ಮೇಲೆದ್ದ. ಮೇಲೆದ್ದ ಸಂತನಿಗೆ ಶಿಷ್ಯರು ಕೇಳಿದರು. "ಏನಿದು ಗುರುಗಳೇ? ಹೇಳಿ ಕೇಳಿ ಅದು ಚೇಳು. ಕಚ್ಚುತ್ತದೆ. ಅದನ್ನು ನೀವು ರಕ್ಷಿಸಲು ಹೊರಟಿದ್ದು ಸರಿಯೆ? ಅದನ್ನು ಆ ನೀರಿನಲ್ಲಿಯೇ ಸಾಯಲು ಬಿಡಬಾರದಿತ್ತೇ?" ಪ್ರಶ್ನೆಗೆ ಆ ಸಂತ ಮಾರ್ಮಿಕವಾಗಿ ಉತ್ತರಿಸಿದ - "ಹೌದು. ಅದು ಚೇಳು. ಕಚ್ಚುವುದು ಅದರ ಸ್ವಭಾವ. ನಾನು ಕೈಯಿಂದ ಕೆಳಗೆ ಬಿಟ್ಟರೆ ನೀರಿನಲ್ಲಿ ಬಿದ್ದು ತಾನು ಸಾಯುತ್ತೇನೆಂದು ಅದಕ್ಕೆ ಗೊತ್ತು. ಆದರೂ ಅದು ಕಚ್ಚುವ ತನ್ನ ಸ್ವಭಾವವನ್ನು ಬಿಡಲಿಲ್ಲ. ಸಾಯುವ ಸ್ಥಿತಿಯಲ್ಲಿದ್ದರೂ ತನ್ನ ಸ್ವಭಾವವನ್ನು ಬಿಡಲಿಲ್ಲ. ಇನ್ನು ನಾನು. ನನಗೆ ಅದು ಕಚ್ಚಿದರೆ ಆಗುವುದು ನೋವಷ್ಟೆ. ಸಾವಲ್ಲ. ಸಣ್ಣ ನೋವಿಗೆ ಹೆದರಿ ನಾನು ರಕ್ಷಿಸುವ ನನ್ನ ಸ್ವಭಾವವನ್ನು ಬಿಡಲೇ?"

ದೊಡ್ಡವರ ನಡೆಗಳು ದೊಡ್ಡದಾಗೇ ಇರುತ್ತವೆ.

ಗುರು ಪ್ರಸಾದ at my desk. Please help to read yourself



ಅಕ್ಬರನ ಆಸ್ಥಾನಕ್ಕೆ ಒಬ್ಬ ಖ್ಯಾತ ಜ್ಯೋತಿಷಿ ಬರುತ್ತಾನೆ. ಆತ ಬಹಳ ನಿಖರವಾಗಿ ಜ್ಯೋತಿಷ್ಯ ಹೇಳಬಲ್ಲ. ಇಲ್ಲದುದನ್ನು ಸೃಷ್ಟಿಸಿ ಹೇಳುವ, ಇದ್ದುದ್ದನ್ನು ಮರೆಮಾಚಿ ಹೇಳುವ ಅಭ್ಯಾಸ ಆತನಿಗಿಲ್ಲ. ನೇರ. ದಿಟ್ಟ. ಸ್ಪಷ್ಟ. ಅಕ್ಬರಿನಿಗೆ ಆತನಲ್ಲಿ ತನ್ನ ಜಾತಕವನ್ನು ತೋರಿಸಿ ತನ್ನ ಭವಿಷ್ಯವನ್ನು ತಿಳಿಯುವ ಕುತೂಹಲ. ಜ್ಯೋತಿಷಿ ಅಕ್ಬರನ ಜಾತಕವನ್ನು ನೋಡಿ ಹೀಗೆಂದ - " ಪ್ರಭು, ಬಹಳ ಕೆಟ್ಟದಾಗಿದೆ. ಬಹಳ ನೋವನ್ನು ನೀವು ಉಣ್ಣಬೇಕಾಗುತ್ತದೆ. ನಿಮಗಿಂತ ಕಿರಿಯರು, ನಿಮ್ಮ ಸಂಬಂಧಿಗಳು ನಿಮ್ಮ ಕಣ್ಣೆದುರಿನಲ್ಲಿ ಸಾಯುತ್ತಾರೆ. ನಿಮಗೆ ಬಹಳ ದು:ಖವುಂಟಾಗುತ್ತದೆ". ಅಕ್ಬರನಿಗೆ ಈ ಮಾತುಗಳನ್ನು ಕೇಳಿ ಮನ ನೊಂದಿತು. ಮತ್ತು ಸಿಟ್ಟೂ ಬಂತು. ತನ್ನ ಸೇವಕರಿಗೆ ಆ ಜ್ಯೋತಿಷಿಯನ್ನು ಆಸ್ಥಾನದಿಂದ ಹೊರ ನೂಕುವಂತೆ ಆಜ್ಞಾಪಿಸಿದ. ಬೀರಬಲ್ ಇವನ್ನೆಲ್ಲಾ ಗಮನಿಸಿದ ಮತ್ತು ಆ ಜ್ಯೋತಿಷಿಯನ್ನು ನಂತರದಲ್ಲಿ ಸಂಪರ್ಕಿಸಿ ರಹಸ್ಯವಾದದ್ದೇನೋ ತಿಳಿಸಿ, ಹೀಗೆ ಮಾಡೆಂಬಂತೆ ಸೂಚಿಸಿದ. ಮಾರನೆಯ ದಿನ ಅಕ್ಬರನ ಆಸ್ಥಾನಕ್ಕೆ ಮತ್ತೊಬ್ಬ ಜ್ಯೋತಿಷಿ ಬಂದ. ಉದ್ದ ಗಡ್ಡ, ಜಟೆ ಬಿಟ್ಟವನು. ಅಕ್ಬರನು ಆತನಲ್ಲೂ ತನ್ನ ಜಾತಕ ತೋರಿಸಿ ತನ್ನ ಭವಿಷ್ಯವನ್ನರುಹುವಂತೆ ಭಿನ್ನವಿಸಿದ. ಆ ಜ್ಯೋತಿಷಿ ಹೇಳಿದ - " ಪ್ರಭು, ಅದ್ಭುತವಾದ ಜಾತಕ. ನೀವು ದೀರ್ಘಾಯುಷಿಗಳು. ನಿಮ್ಮ ಆಯುರಾರೋಗ್ಯ ಹೇಗಿದೆಯೆಂದರೆ ನಿಮ್ಮೆಲ್ಲ ಸಂಬಂಧಿಗಳಿಗಿಂತ ಹೆಚ್ಚು ದಿನ ನೀವು ಬದುಕಿರುತ್ತೀರಿ". ಅಕ್ಬರ ಅತ್ಯಂತ ಸಂತೋಷಗೊಂಡು ಜ್ಯೋತಿಷಿಯನ್ನು ಪುರಸ್ಕರಿಸಿದ. ಜ್ಯೋತಿಷಿ ಬೇರಾರೂ ಆಗಿರದೆ ನಿನ್ನೆ ಬಂದ ಅದೇ ಜ್ಯೋತಿಷಿ ವೇಷ ಬದಲಿಸಿ ಬಂದಿದ್ದ. ತನ್ನ ವಾಕ್ಯಗಳನ್ನು ಬೀರಬಲ್ಲ ಹೇಳಿಕೊಟ್ಟಂತೆ ಬದಲಿಸಿದ್ದ. ಆದರೆ ಸತ್ಯವನ್ನಲ್ಲ.

ಹಿರಿಯರು ಹೇಳಿದ್ದು ಅದನ್ನೇ. "सत्य्म् ब्रूयात् । प्रियम् ब्रूयात् । न ब्रूयात् सत्यमप्रियम् । " ಸತ್ಯವನ್ನು ಹೇಳು. ಪ್ರಿಯವನ್ನು ಹೇಳು. ಅಪ್ರಿಯವಾದ ಸತ್ಯವನ್ನು ಹೇಳದಿರು. ಇದನ್ನು ಹೀಗೂ ಹೇಳಬಹುದೇನೋ. ಅಪ್ರಿಯವಾದ ಸತ್ಯವನ್ನು ಹೇಳಲು ಪ್ರಿಯವಾದ ದಾರಿಗಳಿರಬಹುದು. ಅವನ್ನು ಹುಡುಕು ಎಂಬುದಾಗಿ. ಕಹಿಯಾದ ಔಷಧಕ್ಕೆ ಜೇನನ್ನು ಬೆರೆಸಿ ತಿನ್ನುತ್ತೇವಲ್ಲ ಹಾಗೆ. ಎಷ್ಟೋ ಬಾರಿ Straight Forward ಅನ್ನೋ ಅಹಂಕಾರದ ಭರದಲ್ಲಿ ಸತ್ಯಗಳನ್ನು ಹೇಳುವುದುಂಟು. ಕೇಳಿದವ ನೋಯುತ್ತಾನೆ. ಬೇಯುತ್ತಾನೆ. ಅದರ ತಾಪ ಹೇಳಿದವನಿಗೆ ತಟ್ಟಬಹುದು. ಬದಲಾಗಿ ಅಪ್ರಿಯವಾದ ಸತ್ಯವನ್ನು ಹೇಳಲು ವಿವೇಚಿಸಿ ಪ್ರಿಯವಾದ ದಾರಿಯನ್ನು ಹಿಡಿಯಬಹುದಲ್ಲವೇ?

ಗುರು ಪ್ರಸಾದ at my desk. Please help to read yourself

ಒಂದು ಘನ ಘೋರವಾದ ಕಾಡು. ಅಲ್ಲೊಬ್ಬ ಭಯಂಕರ ರಾಕ್ಷಸ. ಕೋರೆ ಹಲ್ಲುಗಳು, ಉರಿಗಣ್ಣುಗಳು, ಉದ್ದುದ್ದ ಉಗುರುಗಳು, ಭಯಾನಕ ಬಾಹುಗಳು, ಕೆದರಿದ ಕೂದಲು... ಒಟ್ಟಾರೆ ಭಯಾನಕ. ಆ ಕಾಡಿನ ದಾರಿಯಲ್ಲಿ ಬರುವ ಜೀವಿಗಳು ಆತನ ಆಹಾರ. ಆ ದಾರಿಯಲ್ಲಿ ಬರುವ ಜೀವಿಗಳನ್ನು ಆತ ತನ್ನ ಭಯಾನಕ ವ್ಯಕ್ತಿತ್ವದಿಂದ ಹೆದರಿಸುತ್ತಿದ್ದ. ಅವರು ಹೆದರುವುದನ್ನು ಕಂಡು ಖುಷಿ ಪಡುತ್ತಿದ್ದ. ಇನ್ನಷ್ಟು, ಮತ್ತಷ್ಟು ಹೆದರಿಸಿ, ಓಡಿಸಿ, ಭಯ ಹುಟ್ಟಿಸಿ ಸಾಯಿಸಿ ತಿನ್ನುತ್ತಿದ್ದ ಆ ಭಯೋತ್ಪಾದಕ. ಆ ದಾರಿಯಲ್ಲಿ ಒಬ್ಬ ಯುವಕ ನಡೆದು ಬರುತ್ತಿದ್ದ. ಈ ರಾಕ್ಷಸನಿಗೆ ಆ ಯುವಕ ಇಂದಿನ ಆಹಾರ. ಎಂದಿನಂತೆ ಮರೆಯಿಂದ ಧುತ್ತೆಂದು ಯುವಕನ ಮುಂದೆ ರಾಕ್ಷಸ ಪ್ರತ್ಯಕ್ಷನಾದ. ಒಮ್ಮೆಲೆ ಹೆದರಿಸುವುದು ರಾಕ್ಷಸನ ಉದ್ದೇಶ. ಆದರೆ ಆದಿನ ಎಂದಿನ ದಿನವಾಗಿರಲಿಲ್ಲ. ಯುವಕನಿಗೆ ಒಳಗೆ ಒಮ್ಮೆಲೆ ಭಯವಾದರೂ ಅದನ್ನು ವ್ಯಕ್ತಪಡಿಸಲಿಲ್ಲ. ಆ ಕ್ಷಣವನ್ನು ಆ ಯುವಕ ಎಂದಿನಂತೆ ಸ್ವೀಕರಿಸಿದ. ರಾಕ್ಷಸನ ಮುಂದೆ ತಲೆ ಎತ್ತಿ ನಿಂತ. ರಾಕ್ಷಸನಿಗೆ ಇದು ಅನಿರೀಕ್ಷಿತ. ಅಂತ ಭಯೋತ್ಪಾದಕನೂ ಒಮ್ಮೆ ಈ ಯುವಕನ ಧೈರ್ಯ ಮೆಚ್ಚಿ ಮಾತನಾಡಲುತ್ಸುಕನಾದ.

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರದೇ ಹೋದರೆ ಕ್ರಿಯೆಯ ಮುಂದಿನ ನಡಿಗೆಯೇ ಬೇರೆಯದ್ದಾಗಿರುತ್ತದೆ. ಹೆಚ್ಚಿನ ಸಮಸ್ಯೆ ಕ್ರಿಯೆಯನ್ನು ಸ್ವೀಕರಿಸುವ ರೀತಿ, ಜೀರ್ಣಿಸಿಕೊಳ್ಳುವ ರೀತಿ, ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿದೆ. ಸಂಬಂಧಗಳು ಹಳಸಲು ಇದು ಕಾರಣವಾಗಬಹುದು. ಯಾವುದೇ ಹಳಸಿದ ಸಂಬಂಧಗಳ ಹಿಂದೆ ಈ ರೀತಿಯ ಒಂದು ಕ್ರಿಯೆ-ಪ್ರತಿಕ್ರಿಯೆಗಳ ಸರಣಿ ಇರುತ್ತದೆ. ದೇಹದ ಆರೋಗ್ಯದ ಸಮಸ್ಯೆಗೂ ಇದೇ ಕಾರಣ. ಬಯ್ದಾಟ, ದ್ವೇಷ ಸಾಧನೆ ಇವೇ ಅಲ್ಲವೆ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಮೂಲ ಕಾರಣಗಳು? ಎಷ್ಟೋ ದೊಡ್ಡ ಸಾಧನೆಗಳನ್ನು ಮಾಡಿದವರು ಈ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಗುಣವುಳ್ಳವರು. ಮತ್ತೆಷ್ಟೋ ರೋಗಗಳಿಗೆ ಮೊದಲ ಮದ್ದು ಮಾನಸಿಕ ಸ್ಥೈರ್ಯ. 

ಗುರು ಪ್ರಸಾದ at my desk. Please help to read yourself.



ಒಬ್ಬ ಹರಿ ದ್ವೇಷಿ ಹರ ಭಕ್ತನಿದ್ದ. ಪ್ರತಿ ದಿನ ಶಿವನಿಗೆ ನಮಿಸದೆ ಏನನ್ನೂ ಮಾಡುತ್ತಿರಲಿಲ್ಲ. ಮನೆಯಿರಲಿ, ಬಯಲಿರಲಿ, ಪರಸ್ಥಳವಿರಲಿ, ಇನ್ನೆಲ್ಲೇ ಇರಲಿ, ಮೊದಲು ಶಿವನಿಗೆ ಪೂಜೆಯಿತ್ತು, ಶಿವನನ್ನು ಸಾಕ್ಷಾತ್ಕರಿಸಿಕೊಂಡು ಆಶೀರ್ವಾದವನ್ನು ಪಡೆದೇ ಮುಂದಿನ ಕಾರ್ಯ. ಒಮ್ಮೆ ಆತ ಸಂಚಾರದಲ್ಲಿದ್ದ. ಪರಸ್ಥಳ. ಅಲ್ಲಿ ಒಂದು ದೇವಾಲಯವಿತ್ತು. ಈತನಿಗೆ ಆ ದೇವಾಲಯದಲ್ಲಿ ಪೂಜೆಗೈಯುವ ಅವಕಾಶ ಒದಗಿಬಂತು. ಅದೊಂದು ಹರಿ-ಹರ ದೇವಾಲಯ. ಹರಿ-ಹರರೀರ್ವರೂ ಒಂದೇ ಶಿಲೆಯಲ್ಲಿ ನೆಲೆಸಿರುವಂತಹ ದೇವಾಲಯ. ಈತನಿಗೆ ಈಗ ಸಂಕಷ್ಟ ಎದುರಾಗಿತ್ತು. ಶಿವ ಭಕ್ತ ಹರಿಯನ್ನು ಅತಿಯಾಗಿ ದ್ವೇಷಿಸುತ್ತಿದ್ದ. ಅವನಿಗೆಂದೂ ಈತನ ಪೂಜೆಯಲ್ಲಿ ಸ್ಥಾನವಿಲ್ಲ. ಆದರೆ ಶಿವ ನೆಲೆಸಿರುವ ಈ ದೇವಾಲಯದಲ್ಲಿ ಪೂಜೆಗೈಯದೆ ಶಿವ ಭಕ್ತ ಮುಂದಡಿಯಿಡಲಾರ. ಹಾಗಾಗಿ ಒಂದು ಉಪಾಯ ಮಾಡಿದ. ಹರಿ-ಹರರೀರ್ವರಿರುವ ಶಿಲೆಯ ಅರ್ಧ ಭಾಗ, ಶಿವನಿರುವ ಭಾಗಕ್ಕೆ ಪೂಜೆಗೈವುದೆಂದು ತೀರ್ಮಾನಿಸಿದ. ಹಾಗೆಯೇ ಹರಿಯಿರುವ ಇನ್ನರ್ಧ ಭಾಗಕ್ಕೆ ಯಾವುದೇ ರೀತಿಯಲ್ಲೂ ಪೂಜೆ ಸಂದಬಾರದೆಂದೂ ನಿರ್ಣಯ ಕೈಗೊಂಡ. ಹೀಗೆ ಮಾಡುವುದು ಕಷ್ಟಕರವಾಗಿದ್ದಿತು. ಆವಾಹನೆ, ಆಸನ, ಪಾದ್ಯ, ಅರ್ಘ್ಯಾದಿಗಳು ಅರ್ಧ ಭಾಗಕ್ಕಷ್ಟೇ ಸಂದಬೇಕು. ಸ್ನಾನ ಶಿವನಿಗೆ ಮಾತ್ರ. ವಸ್ತ್ರ ಶಿವನಿಗೆ ಮಾತ್ರ. ಉಪವೀತ, ಆಭರಣ, ಗಂಧ, ಅಕ್ಷತೆ, ಪುಪ್ಪ, ಧೂಪ-ದೀಪಾದಿಗಳು ಶಿಲೆಯ ಅರ್ಧ ಭಾಗಕ್ಕೆ ಮಾತ್ರ. ಈ ರೀತಿಯ ಪೂಜೆಗೈಯುವಾಗ ಶಿವ ಭಕ್ತ ಕ್ಷಣ ಕ್ಷಣವೂ ಎಚ್ಚರವಾಗಿದ್ದ. ಹರಿಗೆ ಸ್ನಾನದ ನೀರು ಬೀಳದಂತೆ, ವಸ್ತ್ರ ಬೀಳದಂತೆ, ಗಂಧ ಪುಷ್ಪಾದಿಗಳು ಬೀಳದಂತೆ, ಧೂಪದ ಪರಿಮಳ ಸೂಸದಂತೆ, ದೀಪದ ಕಾಂತಿ ಬೀಳದಂತೆ ಅತಿ ಎಚ್ಚರವಹಿಸಿದ. ಪೂಜೆಯ ಕೊನೆಯಲ್ಲಿ ಪ್ರತಿನಿತ್ಯದಂತೆ ಆತನಿಗೆ ಶಿವನ ಸಾಕ್ಷಾತ್ಕಾರವಾಗಿ ಶಿವ ಅಶೀರ್ವದಿಸಬೇಕಿತ್ತು. ಆದರೆ ಇಂದೊಂದು ವಿಚಿತ್ರ. ಶಿವನ ಬದಲಾಗಿ ವಿಷ್ಣುವು ಪ್ರತ್ಯಕ್ಷನಾದ. "ನಿನ್ನ ಪೂಜೆಯಿಂದ ಸಂಪ್ರೀತನಾಗಿದ್ದೇನೆ. ನನ್ನ ಕೃಪಾಶೀರ್ವಾದ ಎಂದೆಂದೂ ನಿನಗಿರಲಿ" ಎಂದು ಹರಸಿದ. ಶಿವ ಭಕ್ತನಿಗೆ ಪರಮಾಶ್ಚರ್ಯವಾಯಿತು. ಕೇಳಿದ. "ನಿನಗೆ ಪೂಜೆ ಸಂದಬಾರದೆಂದು ಕ್ಷಣ ಕ್ಷಣವೂ ಎಚ್ಚರದಿಂದಿದ್ದೆ. ಆದರೆ ಪೂಜೆಯಿಂದ ಸಂತೃಪ್ತಿಗೊಂಡಿರುವೆ ಎನ್ನುತ್ತಿರುವೆ. ಏನೀ ಮಾಯೆ?" ವಿಷ್ಣುವು ಉತ್ತರಿಸಿದ. "ಮನವೆಲ್ಲಿಯೋ ಪೂಜೆಯಲ್ಲಿಗೆ".

ಗುರು ಪ್ರಸಾದ at my desk. Please help to read yourself.

ಒಬ್ಬ ರಾಜ. ಆತನಿಗೊಬ್ಬ ಕುಶಲಿ ಮಂತ್ರಿ. ರಾಜನಿಗೊಮ್ಮೆ ತನಗೆ ಯಾವಾಗಲೂ ಮಾರ್ಗದರ್ಶಿಯಾಗುವಂತಹ ವಸ್ತುವನ್ನೇನಾದರೂ, ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿರಬೇಕೆನಿಸಿತು. ರಾಜ ತನ್ನ ಮಂತ್ರಿಯ ಬಳಿ ಸಲಹೆ ಕೇಳಿದ. ತನ್ನ ಜೀವನದುದ್ದಕ್ಕೂ ಸಹಕಾರಿಯಾಗಬಹುದಾದ ಯಾವುದಾದರೂ ಮೂರು ಪದಗಳನ್ನು ಹೇಳುವಂತೆಯೂ, ಮತ್ತೆ ಆ ಮೂರು ಪದಗಳನ್ನು ತನ್ನ ಉಂಗುರದಲ್ಲಿ ಕೆತ್ತಿಸಿ ತಾನು ಯಾವಾಗಲೂ ಧರಿಸುವುದೆಂದು ತೀರ್ಮಾನಿಸಿದ. ಅಂತೆಯೇ ಮಾಡಿದ. ಕಾಲಾಂತರದಲ್ಲಿ ಆ ರಾಜ್ಯದ ಮೇಲೆ ಶತ್ರುಗಳ ಧಾಳಿಗಳಾದವು. ಯುದ್ಧಗಳಾದವು. ಯುದ್ಧದಲ್ಲಿ ರಾಜ ಸೋತ. ತನ್ನ ರಾಜ್ಯವನ್ನು ಕಳೆದುಕೊಂಡ. ಸಂಪತ್ತನ್ನು, ತನ್ನ ಜನರನ್ನು ಕಳೆದುಕೊಂಡ. ತನ್ನೆಲ್ಲವನ್ನೂ ಕಳೆದುಕೊಂಡು ಅಕ್ಷರಶ: ನಿರ್ಗತಿಕನಾಗಿ ಕೈಚೆಲ್ಲಿ ಒಂದು ನದಿಯ ಬಳಿ ಬಂದು ಕೂತ. ಇನ್ನು ಮುಂದೇನೆಂದು ಆತನಿಗೆ ಚಿಂತಿಸಹತ್ತಿತು. ತನಗೆ ಆತ್ಮಹತ್ಯೆಯೊಂದೇ ದಾರಿಯೆಂದು ಮನಗಂಡು ಸಾಯಲು ಮುಂದಾದ. ಇದ್ದಕ್ಕಿದ್ದಂತೆ ಅತನ ಕೈ ಮೇಲೆ ಬೆಳಕು ಬಿದ್ದು ಉಂಗುರ ಮಿನುಗಿತು. ಆ ಕ್ಷಣ ಅದು ಆ ರಾಜ್ಯಭ್ರಷ್ಟ ರಾಜನ ಗಮನವನ್ನು ತನ್ನೆಡೆ ಸೆಳೆಯಿತು. ಅಲ್ಲಿ ಮೂರು ಪದಗಳು ಕೆತ್ತಲ್ಪಟ್ಟಿತ್ತು. ಅವು - "ಇದು ಹೀಗೇ ಇರದು". ರಾಜ್ಯಭ್ರಷ್ಟ ರಾಜನಿಗೆ ಈ ಮೂರು ಪದಗಳು ಆಶಾಕಿರಣಗಳಾಗಿ ಕಂಡವು. ತನ್ನ ಆತ್ಮಹತ್ಯೆಯ ಪ್ರಯತ್ನವನ್ನು ಕೈಬಿಟ್ಟು ಪುನ: ಮೇಲೆದ್ದ. ತನ್ನ ಜನರನ್ನು ಹುಡುಕಿದ, ಒಟ್ಟುಗೂಡಿಸಿದ. ತನ್ನದೇ ಗುಂಪನ್ನು ಕಟ್ಟತೊಡಗಿದ. ಒಂದು ಚಿಕ್ಕ ಸೇನೆಯನ್ನು ಕಟ್ಟುವವರೆಗೆ ತನ್ನ ಪ್ರಯತ್ನ ಮುಂದುವರೆಸಿ ಯಶಸ್ವಿಯಾದ. ಮುಂದೆ ಇದೇ ಸೇನೆಯನ್ನು ಬಳಸಿ ಪುನ: ಯುದ್ಧ ಮಾಡಿದ. ಕಳೆದುಕೊಂಡಿದ್ದ ತನ್ನ ರಾಜ್ಯವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ. ಆ ದಿನಗಳು ಮರಳಿ ಆತನಿಗೆ ದೊರೆತವು. ರಾಜನಿಗೆ ಪುನ: ಪಟ್ಟಾಭಿಷೇಕ. ಎಲ್ಲೆಡೆ ಸಂಭ್ರಮ. ನಗರವನ್ನೆಲ್ಲ ಸಿಂಗರಿಸಲಾಯಿತು. ಪಟ್ಟಾಭಿಷೇಕಕ್ಕಾಗಿ ರಾಜನನ್ನು ರಥದಲ್ಲಿ ಕುಳ್ಳರಿಸಿ ಕರೆತರಲಾಗುತ್ತಿತ್ತು. ಆ ಸಮಯದಲ್ಲಿ ಪಟ್ಟಾಭಿಷೇಕಕ್ಕಾಗಿ ಸಿಂಗರಿಸಿದ ದೀಪದ ಬೆಳಕು ಮತ್ತೆ ಆತನ ಕೈಯುಂಗುರದ ಮೇಲೆ ಬಿದ್ದು, ಉಂಗುರ ಮಿನುಗಿತು. ಆ ಸಂಭ್ರಮದ ಕ್ಷಣದಲ್ಲಿಯೂ ಒಮ್ಮೆ ಆ ಮೂರು ಪದಗಳು ರಾಜನ ಗಮನ ಸೆಳೆದವು. - "ಇದು ಹೀಗೇ ಇರದು".