ಸುಮಾರು ಮೂರು - ಮೂರೂವರೆ ವರ್ಷದ ಬಾಲಕ. ಬೆಳಗ್ಗೆ ಶಾಲೆಗೆ ಹೊರಟಿದ್ದ. ಶಾಲಾ ವಾಹನ ಬರುವುದಕ್ಕಿನ್ನೂ ಸಮಯವಿತ್ತು. ಆತನ ಅಪ್ಪ ತಿನ್ನಲಿಕ್ಕೆಂದು ಅವನ ಮುಷ್ಟಿಗೆ ಒಂದಷ್ಟು ದ್ರಾಕ್ಷಿ, ಬಾದಾಮಿಗಳನ್ನು ಕೊಟ್ಟರು. ಸರಿ. ಶಾಲಾ ವಾಹನ ಬಂತು. ಆತನ ತಾಯಿ ಹತ್ತಿಸಿ ಕಳಿಸಿದ್ದಾಯಿತು. ಸಂಜೆ ಮನೆಗೆ ಬಂದ ತಂದೆಗೆ ತಾಯಿ ಕೇಳಿದಳು. 'ನೀವೇನೋ ದ್ರಾಕ್ಷಿ, ಬಾದಾಮಿ ಕೊಟ್ಟು ಕಳಿಸಿದಿರಿ. ಅಲ್ಲಿ ವಾಹನದಲ್ಲಿ ಹಲವಾರು ಮಕ್ಕಳಿದ್ದರು. ಅವರೆದುರಿಗೆ ಇವನೊಬ್ಬನೇ ಹೇಗೆ ತಿನ್ನಬೇಕು?' ತಂದೆ ಮಗನನ್ನು ಕರೆದು ಹೇಳಿದರು, 'ಮಗು, ಕೈಯಲ್ಲಿ ಏನಾದರೂ ತಿನ್ನುವ ವಸ್ತುವಿದ್ದರೆ, ಸುತ್ತಲೂ ಬೇರೆಯವರಿದ್ದರೆ, ಅವರಿಗೆ ಒಂದಷ್ಟು ಕೊಟ್ಟು, ನೀನು ತಿನ್ನಬೇಕು'. ಮಗು ಕೇಳಿತು. 'ಯಾಕಪ್ಪಾ'? ಆ ಮಗು ಹಾಗೆಯೇ. ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುವುದು ಅದಕ್ಕೆ ಅಭ್ಯಾಸ. ತಂದೆ ತುಂಬಾ ಸ್ವಾಭಾವಿಕವೆಂಬಂತೆ ಉತ್ತರಿಸಿದರು. 'ಮಗು, ನೀನು ನಿನ್ನ ಕೈಯಲ್ಲಿರುವ ತಿನ್ನುವ ವಸ್ತುವನ್ನು ಮತ್ತೊಬ್ಬನಿಗೆ ಕೊಟ್ಟರೆ, ಅವರು ನಿನ್ನ ಫ್ರೆಂಡ್ (ಈಗಿನ ಮಕ್ಕಳಿಗೆ ಸ್ನೇಹಿತ ಶಬ್ದದ ಪರಿಚಯ ಅಷ್ಟಾಗಿ ಇಲ್ಲ) ಆಗುತ್ತಾರೆ. ನಿನಗೆ ಆಡಲು ಒಬ್ಬ ಗೆಳೆಯ ಸಿಗುತ್ತಾನೆ'. ಬಹುಷ: ಆ ಮಗುವಿಗೆ ಶಾಲೆಯಲ್ಲಿ ಏಕವಚನ, ಬಹುವಚನ ಹೇಳಿ ಕೊಟ್ಟಿರಬೇಕು. ಮಗು ತನ್ನ ಕೈ ತೋರಿಸಿ ಹೇಳಿತು. 'ಫ್ರೆಂಡ ಅಂದ್ರೆ ಒಬ್ಬ. ಫ್ರೆಂಡ್ಸ ಅಂದ್ರೆ ಜಾಸ್ತಿ ಜನ' ಅಲ್ವೇನಪ್ಪ? ತಂದೆಗೆ ಈಗ ಮುಗ್ಧ ನಗು. ಅವರೆಂದರು. 'ಹೌದು ಮಗು. ಫ್ರೆಂಡ್ಸ್ ಅಂದ್ರೆ ಜಾಸ್ತಿ ಜನ. ನೀನು ನಿನ್ನ ಕೈಯಲ್ಲಿರೋದನ್ನ ಜಾಸ್ತಿ ಜನಕ್ಕೆ ಹಂಚಿ ತಿಂದರೆ, ನಿನಗೆ ಜಾಸ್ತಿ ಜನ ಫ್ರೆಂಡ್ಸ್ ಸಿಗುತ್ತಾರೆ ಆಟವಾಡಲು. ನಿನ್ನ ಮನಸ್ಸು ಸಿಹಿಯಾಗುತ್ತದೆ. ಕೈಯಲ್ಲಿರುವ ಸಿಹಿಯನ್ನು ಹಂಚಿ, ಇನ್ನೂ ಹೆಚ್ಚು, ಜಾಸ್ತಿ ಸಿಹಿಯನ್ನ ನೀನು ನಿನ್ನ ಬದುಕಲ್ಲಿ ಪಡೆದುಕೊಳ್ಳಬಹುದು'.
ಮಗುವಿಗೆ ಅರ್ಥವಾಯಿತೋ, ಬಿಡ್ತೋ ಗೊತ್ತಿಲ್ಲ. ಆದರೆ ಮಕ್ಕಳೆಂದರೆ ಹಾಗೆ. ಪ್ರಶ್ನೆಗಳು. ಅವರ ಮನದ ತುಂಬಾ, ಬಾಯಿ ತುಂಬಾ ಪ್ರಶ್ನೆಗಳು. ಅವರಿಗೆ ಉತ್ತರಿಸಲು ನಮಗೊಂದಿಷ್ಟು ಸಮಯ, ಸಮಾಧಾನ ಬೇಕು ಅಷ್ಟೆ. ಕ್ಷಣಗಳು ಸುಂದರ.
No comments:
Post a Comment