Monday, October 12, 2015

ಗುರು ಪ್ರಸಾದ at my desk. Please help to read yourself



ಅಕ್ಬರನ ಆಸ್ಥಾನಕ್ಕೆ ಒಬ್ಬ ಖ್ಯಾತ ಜ್ಯೋತಿಷಿ ಬರುತ್ತಾನೆ. ಆತ ಬಹಳ ನಿಖರವಾಗಿ ಜ್ಯೋತಿಷ್ಯ ಹೇಳಬಲ್ಲ. ಇಲ್ಲದುದನ್ನು ಸೃಷ್ಟಿಸಿ ಹೇಳುವ, ಇದ್ದುದ್ದನ್ನು ಮರೆಮಾಚಿ ಹೇಳುವ ಅಭ್ಯಾಸ ಆತನಿಗಿಲ್ಲ. ನೇರ. ದಿಟ್ಟ. ಸ್ಪಷ್ಟ. ಅಕ್ಬರಿನಿಗೆ ಆತನಲ್ಲಿ ತನ್ನ ಜಾತಕವನ್ನು ತೋರಿಸಿ ತನ್ನ ಭವಿಷ್ಯವನ್ನು ತಿಳಿಯುವ ಕುತೂಹಲ. ಜ್ಯೋತಿಷಿ ಅಕ್ಬರನ ಜಾತಕವನ್ನು ನೋಡಿ ಹೀಗೆಂದ - " ಪ್ರಭು, ಬಹಳ ಕೆಟ್ಟದಾಗಿದೆ. ಬಹಳ ನೋವನ್ನು ನೀವು ಉಣ್ಣಬೇಕಾಗುತ್ತದೆ. ನಿಮಗಿಂತ ಕಿರಿಯರು, ನಿಮ್ಮ ಸಂಬಂಧಿಗಳು ನಿಮ್ಮ ಕಣ್ಣೆದುರಿನಲ್ಲಿ ಸಾಯುತ್ತಾರೆ. ನಿಮಗೆ ಬಹಳ ದು:ಖವುಂಟಾಗುತ್ತದೆ". ಅಕ್ಬರನಿಗೆ ಈ ಮಾತುಗಳನ್ನು ಕೇಳಿ ಮನ ನೊಂದಿತು. ಮತ್ತು ಸಿಟ್ಟೂ ಬಂತು. ತನ್ನ ಸೇವಕರಿಗೆ ಆ ಜ್ಯೋತಿಷಿಯನ್ನು ಆಸ್ಥಾನದಿಂದ ಹೊರ ನೂಕುವಂತೆ ಆಜ್ಞಾಪಿಸಿದ. ಬೀರಬಲ್ ಇವನ್ನೆಲ್ಲಾ ಗಮನಿಸಿದ ಮತ್ತು ಆ ಜ್ಯೋತಿಷಿಯನ್ನು ನಂತರದಲ್ಲಿ ಸಂಪರ್ಕಿಸಿ ರಹಸ್ಯವಾದದ್ದೇನೋ ತಿಳಿಸಿ, ಹೀಗೆ ಮಾಡೆಂಬಂತೆ ಸೂಚಿಸಿದ. ಮಾರನೆಯ ದಿನ ಅಕ್ಬರನ ಆಸ್ಥಾನಕ್ಕೆ ಮತ್ತೊಬ್ಬ ಜ್ಯೋತಿಷಿ ಬಂದ. ಉದ್ದ ಗಡ್ಡ, ಜಟೆ ಬಿಟ್ಟವನು. ಅಕ್ಬರನು ಆತನಲ್ಲೂ ತನ್ನ ಜಾತಕ ತೋರಿಸಿ ತನ್ನ ಭವಿಷ್ಯವನ್ನರುಹುವಂತೆ ಭಿನ್ನವಿಸಿದ. ಆ ಜ್ಯೋತಿಷಿ ಹೇಳಿದ - " ಪ್ರಭು, ಅದ್ಭುತವಾದ ಜಾತಕ. ನೀವು ದೀರ್ಘಾಯುಷಿಗಳು. ನಿಮ್ಮ ಆಯುರಾರೋಗ್ಯ ಹೇಗಿದೆಯೆಂದರೆ ನಿಮ್ಮೆಲ್ಲ ಸಂಬಂಧಿಗಳಿಗಿಂತ ಹೆಚ್ಚು ದಿನ ನೀವು ಬದುಕಿರುತ್ತೀರಿ". ಅಕ್ಬರ ಅತ್ಯಂತ ಸಂತೋಷಗೊಂಡು ಜ್ಯೋತಿಷಿಯನ್ನು ಪುರಸ್ಕರಿಸಿದ. ಜ್ಯೋತಿಷಿ ಬೇರಾರೂ ಆಗಿರದೆ ನಿನ್ನೆ ಬಂದ ಅದೇ ಜ್ಯೋತಿಷಿ ವೇಷ ಬದಲಿಸಿ ಬಂದಿದ್ದ. ತನ್ನ ವಾಕ್ಯಗಳನ್ನು ಬೀರಬಲ್ಲ ಹೇಳಿಕೊಟ್ಟಂತೆ ಬದಲಿಸಿದ್ದ. ಆದರೆ ಸತ್ಯವನ್ನಲ್ಲ.

ಹಿರಿಯರು ಹೇಳಿದ್ದು ಅದನ್ನೇ. "सत्य्म् ब्रूयात् । प्रियम् ब्रूयात् । न ब्रूयात् सत्यमप्रियम् । " ಸತ್ಯವನ್ನು ಹೇಳು. ಪ್ರಿಯವನ್ನು ಹೇಳು. ಅಪ್ರಿಯವಾದ ಸತ್ಯವನ್ನು ಹೇಳದಿರು. ಇದನ್ನು ಹೀಗೂ ಹೇಳಬಹುದೇನೋ. ಅಪ್ರಿಯವಾದ ಸತ್ಯವನ್ನು ಹೇಳಲು ಪ್ರಿಯವಾದ ದಾರಿಗಳಿರಬಹುದು. ಅವನ್ನು ಹುಡುಕು ಎಂಬುದಾಗಿ. ಕಹಿಯಾದ ಔಷಧಕ್ಕೆ ಜೇನನ್ನು ಬೆರೆಸಿ ತಿನ್ನುತ್ತೇವಲ್ಲ ಹಾಗೆ. ಎಷ್ಟೋ ಬಾರಿ Straight Forward ಅನ್ನೋ ಅಹಂಕಾರದ ಭರದಲ್ಲಿ ಸತ್ಯಗಳನ್ನು ಹೇಳುವುದುಂಟು. ಕೇಳಿದವ ನೋಯುತ್ತಾನೆ. ಬೇಯುತ್ತಾನೆ. ಅದರ ತಾಪ ಹೇಳಿದವನಿಗೆ ತಟ್ಟಬಹುದು. ಬದಲಾಗಿ ಅಪ್ರಿಯವಾದ ಸತ್ಯವನ್ನು ಹೇಳಲು ವಿವೇಚಿಸಿ ಪ್ರಿಯವಾದ ದಾರಿಯನ್ನು ಹಿಡಿಯಬಹುದಲ್ಲವೇ?

No comments:

Post a Comment