Monday, October 19, 2015

ಗುರು ಪ್ರಸಾದ at my desk. Please read yourself



ಒಂದು ಯುದ್ಧದ ಸನ್ನಿವೇಶ. ಅದೊಂದು ರಣಭೂಮಿ. ಇನ್ನೇನು ಅಂತಿಮ ಕ್ಷಣಗಳು. ಒಂದು ದೇಶ ಗೆದ್ದಾಗಿತ್ತು. ಸೋತ ದೇಶದ ಸೈನಿಕರನ್ನು ಹುಡುಕಿ ಹುಡುಕಿ ಗೆದ್ದ ದೇಶದ ಸೈನಿಕರು ಕೊಲ್ಲುತ್ತಿದ್ದರು. ಅಮಾನವೀಯ, ಆದರೆ ಅದು ನಡೆಯುವುದೇ ಹಾಗೆ. ರಣಭೂಮಿಯಲ್ಲಿ ಯುದ್ಧದ ಅವಶ್ಯಕತೆಗೋಸ್ಕರ ಸೈನಿಕರು ಬಂಕರ್ಗಳನ್ನು, ಗುಹೆಗಳನ್ನು ನಿರ್ಮಿಸಿಕೊಂಡಿದ್ದರು. ಸೋತ ದೇಶದ ಸೈನಿಕರು ರಕ್ಷಣೆಗೋಸ್ಕರ ಈ ಗುಹೆಗಳಲ್ಲಿ ಅಡಗುತ್ತಿದ್ದರು. ಆದರೆ ಗೆದ್ದ ದೇಶದ ಸೈನಿಕರು ಈ ಗುಹೆಗಳನ್ನು ಹುಡುಕಿ ಹುಡುಕಿ ಸೋತವರನ್ನು ಕೊಲ್ಲುತ್ತಿದ್ದರು. ಹಾಗೇ ಇದೂ ಒಬ್ಬ ಸೈನಿಕನ ಕತೆ. ರಕ್ಷಣೆಗೆಂದು ಒಂದು ಗುಹೆಯಲ್ಲಿ ಅಡಗಿದ. ಶತ್ರುಗಳು ಹತ್ತಿರ ಹತ್ತಿರ ಬರುತ್ತಿರುವುದು ಅವರ ಬೂಟಿನ ಶಬ್ದಗಳಿಂದ ಕೇಳುತ್ತಿತ್ತು. ಸೈನಿಕನಿಗೆ ತಾನಿನ್ನು ಬದುಕಿರಲಾರೆ ಎನ್ನಿಸಿತು. ಶತ್ರುಗಳು ಕ್ರೂರವಾಗಿ ಹಿಂಸಿಸಿ ತನ್ನನ್ನು ಕೊಲ್ಲುತ್ತಾರೆ ಎಂದೆನಿಸಿತು. ದೇವರಲ್ಲಿ ತುಂಬಾ ಆರ್ತನಾಗಿ ಮೊರೆಯಿಟ್ಟ. ತನ್ನನ್ನು ಬದುಕಿಸೆಂದು ಪ್ರಾರ್ಥಿಸಿದ. ಪುರುಷ ಪ್ರಯತ್ನ ಸಂಪೂರ್ಣ ಸೋತಿದೆ. ನಿನ್ನಲ್ಲಿ ಶರಣಾದೆ. ನಿನಗೆ ನನ್ನ ಮೇಲೆ ಕರುಣೆಯಿದ್ದರೆ, ಉಳಿಸಬೇಕೆಂದೆನಿಸಿದರೆ ಉಳಿಸು ಎಂದು ದೈನ್ಯನಾಗಿ ಮೊರೆಯಿಟ್ಟ. ಮುಂದೆ ನಡೆದುದುದೆಲ್ಲಾ ಪವಾಡ. ಅದು ದೇವರ ಮಹಿಮೆಯೋ ಮತ್ತಿನ್ನೇನೋ ಬಲ್ಲವರಾರು? ಆ ಗುಹೆಯಲ್ಲಿ ಒಂದು ಚಟುವಟಿಕೆ ಪ್ರಾರಂಭವಾಯಿತು. ಅದೆಲ್ಲಿತ್ತೋ ಜೇಡವೊಂದು ಕಾಣಿಸಿತು. ಆ ಜೇಡ ಆ ಗುಹೆಯ ಬಾಗಿಲಿಗೆ ಬಲೆಯನ್ನು ಹೆಣೆಯಲು ಪ್ರಾರಂಭಿಸಿತು. ನಿಮಿಷಗಳಷ್ಟರಲ್ಲಿ ಆ ಜೇಡ ಗುಹೆಯ ಬಾಗಿಲಿಗೆ ಸಂಪೂರ್ಣವಾಗಿ ಬಲೆಯನ್ನು ಹೆಣೆದಾಗಿತ್ತು. ಶತ್ರು ಸೈನಿಕರು ಗುಹೆಗಳನ್ನು ಪರಿಶೀಲಿಸುತ್ತಾ ಬರುತ್ತಿದ್ದರು. ಈ ಗುಹೆಯನ್ನೂ ಒಳಹೊಕ್ಕು ನೋಡಬೇಕು. ಆದರೆ ಆ ಜೇಡರ ಬಲೆ ಅಡ್ಡವಾಗಿತ್ತು. ಸೈನಿಕರಿಗೆ ಅನ್ನಿಸಿತು. ಇಲ್ಲಿ ಜೇಡರ ಬಲೆ ಹಾಳಾಗದೆ ಇದೆ ಎಂದಾದರೆ ಈ ಗುಹೆಯ ಒಳಗೆ ಮನುಷ್ಯರಾರೂ ಹೋಗಿರಲು ಅಸಾಧ್ಯ. ಯಾರೂ ಇಲ್ಲದ ಮೇಲೆ ಇಲ್ಲಿ ಶೋಧನೆಯ ಅಗತ್ಯವೇನು? ಸೈನಿಕರು ಈ ಗುಹೆಯನ್ನು ಬಿಟ್ಟು ಮುಂದಿನದಕ್ಕೆ ಸಾಗಿದರು. ಆತನ ಜೀವ ಉಳಿದಿತ್ತು. ಶಸ್ತ್ರಗಳಿಂದ ಸಾಧಿಸಲಾಗದ್ದು ಒಂದು ಜೇಡರ ಬಲೆ ಸಾಧಿಸಿತ್ತು. 

ದೈವಕ್ಕೆ ಉಳಿಸಬೇಕೆಂದೆನಿಸಿದರೆ ಅಳಿಸಲಸಾಧ್ಯ. 

ಇದೊಂದು ಸತ್ಯ ಘಟನೆಯಂತೆ. 

No comments:

Post a Comment