ಒಬ್ಬ ಹರಿ ದ್ವೇಷಿ ಹರ ಭಕ್ತನಿದ್ದ. ಪ್ರತಿ ದಿನ ಶಿವನಿಗೆ ನಮಿಸದೆ ಏನನ್ನೂ ಮಾಡುತ್ತಿರಲಿಲ್ಲ. ಮನೆಯಿರಲಿ, ಬಯಲಿರಲಿ, ಪರಸ್ಥಳವಿರಲಿ, ಇನ್ನೆಲ್ಲೇ ಇರಲಿ, ಮೊದಲು ಶಿವನಿಗೆ ಪೂಜೆಯಿತ್ತು, ಶಿವನನ್ನು ಸಾಕ್ಷಾತ್ಕರಿಸಿಕೊಂಡು ಆಶೀರ್ವಾದವನ್ನು ಪಡೆದೇ ಮುಂದಿನ ಕಾರ್ಯ. ಒಮ್ಮೆ ಆತ ಸಂಚಾರದಲ್ಲಿದ್ದ. ಪರಸ್ಥಳ. ಅಲ್ಲಿ ಒಂದು ದೇವಾಲಯವಿತ್ತು. ಈತನಿಗೆ ಆ ದೇವಾಲಯದಲ್ಲಿ ಪೂಜೆಗೈಯುವ ಅವಕಾಶ ಒದಗಿಬಂತು. ಅದೊಂದು ಹರಿ-ಹರ ದೇವಾಲಯ. ಹರಿ-ಹರರೀರ್ವರೂ ಒಂದೇ ಶಿಲೆಯಲ್ಲಿ ನೆಲೆಸಿರುವಂತಹ ದೇವಾಲಯ. ಈತನಿಗೆ ಈಗ ಸಂಕಷ್ಟ ಎದುರಾಗಿತ್ತು. ಶಿವ ಭಕ್ತ ಹರಿಯನ್ನು ಅತಿಯಾಗಿ ದ್ವೇಷಿಸುತ್ತಿದ್ದ. ಅವನಿಗೆಂದೂ ಈತನ ಪೂಜೆಯಲ್ಲಿ ಸ್ಥಾನವಿಲ್ಲ. ಆದರೆ ಶಿವ ನೆಲೆಸಿರುವ ಈ ದೇವಾಲಯದಲ್ಲಿ ಪೂಜೆಗೈಯದೆ ಶಿವ ಭಕ್ತ ಮುಂದಡಿಯಿಡಲಾರ. ಹಾಗಾಗಿ ಒಂದು ಉಪಾಯ ಮಾಡಿದ. ಹರಿ-ಹರರೀರ್ವರಿರುವ ಶಿಲೆಯ ಅರ್ಧ ಭಾಗ, ಶಿವನಿರುವ ಭಾಗಕ್ಕೆ ಪೂಜೆಗೈವುದೆಂದು ತೀರ್ಮಾನಿಸಿದ. ಹಾಗೆಯೇ ಹರಿಯಿರುವ ಇನ್ನರ್ಧ ಭಾಗಕ್ಕೆ ಯಾವುದೇ ರೀತಿಯಲ್ಲೂ ಪೂಜೆ ಸಂದಬಾರದೆಂದೂ ನಿರ್ಣಯ ಕೈಗೊಂಡ. ಹೀಗೆ ಮಾಡುವುದು ಕಷ್ಟಕರವಾಗಿದ್ದಿತು. ಆವಾಹನೆ, ಆಸನ, ಪಾದ್ಯ, ಅರ್ಘ್ಯಾದಿಗಳು ಅರ್ಧ ಭಾಗಕ್ಕಷ್ಟೇ ಸಂದಬೇಕು. ಸ್ನಾನ ಶಿವನಿಗೆ ಮಾತ್ರ. ವಸ್ತ್ರ ಶಿವನಿಗೆ ಮಾತ್ರ. ಉಪವೀತ, ಆಭರಣ, ಗಂಧ, ಅಕ್ಷತೆ, ಪುಪ್ಪ, ಧೂಪ-ದೀಪಾದಿಗಳು ಶಿಲೆಯ ಅರ್ಧ ಭಾಗಕ್ಕೆ ಮಾತ್ರ. ಈ ರೀತಿಯ ಪೂಜೆಗೈಯುವಾಗ ಶಿವ ಭಕ್ತ ಕ್ಷಣ ಕ್ಷಣವೂ ಎಚ್ಚರವಾಗಿದ್ದ. ಹರಿಗೆ ಸ್ನಾನದ ನೀರು ಬೀಳದಂತೆ, ವಸ್ತ್ರ ಬೀಳದಂತೆ, ಗಂಧ ಪುಷ್ಪಾದಿಗಳು ಬೀಳದಂತೆ, ಧೂಪದ ಪರಿಮಳ ಸೂಸದಂತೆ, ದೀಪದ ಕಾಂತಿ ಬೀಳದಂತೆ ಅತಿ ಎಚ್ಚರವಹಿಸಿದ. ಪೂಜೆಯ ಕೊನೆಯಲ್ಲಿ ಪ್ರತಿನಿತ್ಯದಂತೆ ಆತನಿಗೆ ಶಿವನ ಸಾಕ್ಷಾತ್ಕಾರವಾಗಿ ಶಿವ ಅಶೀರ್ವದಿಸಬೇಕಿತ್ತು. ಆದರೆ ಇಂದೊಂದು ವಿಚಿತ್ರ. ಶಿವನ ಬದಲಾಗಿ ವಿಷ್ಣುವು ಪ್ರತ್ಯಕ್ಷನಾದ. "ನಿನ್ನ ಪೂಜೆಯಿಂದ ಸಂಪ್ರೀತನಾಗಿದ್ದೇನೆ. ನನ್ನ ಕೃಪಾಶೀರ್ವಾದ ಎಂದೆಂದೂ ನಿನಗಿರಲಿ" ಎಂದು ಹರಸಿದ. ಶಿವ ಭಕ್ತನಿಗೆ ಪರಮಾಶ್ಚರ್ಯವಾಯಿತು. ಕೇಳಿದ. "ನಿನಗೆ ಪೂಜೆ ಸಂದಬಾರದೆಂದು ಕ್ಷಣ ಕ್ಷಣವೂ ಎಚ್ಚರದಿಂದಿದ್ದೆ. ಆದರೆ ಪೂಜೆಯಿಂದ ಸಂತೃಪ್ತಿಗೊಂಡಿರುವೆ ಎನ್ನುತ್ತಿರುವೆ. ಏನೀ ಮಾಯೆ?" ವಿಷ್ಣುವು ಉತ್ತರಿಸಿದ. "ಮನವೆಲ್ಲಿಯೋ ಪೂಜೆಯಲ್ಲಿಗೆ".
No comments:
Post a Comment