Monday, October 12, 2015

ಗುರು ಪ್ರಸಾದ at my desk. Please help to read yourself.

ಒಬ್ಬ ರಾಜ. ಆತನಿಗೊಬ್ಬ ಕುಶಲಿ ಮಂತ್ರಿ. ರಾಜನಿಗೊಮ್ಮೆ ತನಗೆ ಯಾವಾಗಲೂ ಮಾರ್ಗದರ್ಶಿಯಾಗುವಂತಹ ವಸ್ತುವನ್ನೇನಾದರೂ, ಯಾವಾಗಲೂ ತನ್ನ ಬಳಿ ಇಟ್ಟುಕೊಂಡಿರಬೇಕೆನಿಸಿತು. ರಾಜ ತನ್ನ ಮಂತ್ರಿಯ ಬಳಿ ಸಲಹೆ ಕೇಳಿದ. ತನ್ನ ಜೀವನದುದ್ದಕ್ಕೂ ಸಹಕಾರಿಯಾಗಬಹುದಾದ ಯಾವುದಾದರೂ ಮೂರು ಪದಗಳನ್ನು ಹೇಳುವಂತೆಯೂ, ಮತ್ತೆ ಆ ಮೂರು ಪದಗಳನ್ನು ತನ್ನ ಉಂಗುರದಲ್ಲಿ ಕೆತ್ತಿಸಿ ತಾನು ಯಾವಾಗಲೂ ಧರಿಸುವುದೆಂದು ತೀರ್ಮಾನಿಸಿದ. ಅಂತೆಯೇ ಮಾಡಿದ. ಕಾಲಾಂತರದಲ್ಲಿ ಆ ರಾಜ್ಯದ ಮೇಲೆ ಶತ್ರುಗಳ ಧಾಳಿಗಳಾದವು. ಯುದ್ಧಗಳಾದವು. ಯುದ್ಧದಲ್ಲಿ ರಾಜ ಸೋತ. ತನ್ನ ರಾಜ್ಯವನ್ನು ಕಳೆದುಕೊಂಡ. ಸಂಪತ್ತನ್ನು, ತನ್ನ ಜನರನ್ನು ಕಳೆದುಕೊಂಡ. ತನ್ನೆಲ್ಲವನ್ನೂ ಕಳೆದುಕೊಂಡು ಅಕ್ಷರಶ: ನಿರ್ಗತಿಕನಾಗಿ ಕೈಚೆಲ್ಲಿ ಒಂದು ನದಿಯ ಬಳಿ ಬಂದು ಕೂತ. ಇನ್ನು ಮುಂದೇನೆಂದು ಆತನಿಗೆ ಚಿಂತಿಸಹತ್ತಿತು. ತನಗೆ ಆತ್ಮಹತ್ಯೆಯೊಂದೇ ದಾರಿಯೆಂದು ಮನಗಂಡು ಸಾಯಲು ಮುಂದಾದ. ಇದ್ದಕ್ಕಿದ್ದಂತೆ ಅತನ ಕೈ ಮೇಲೆ ಬೆಳಕು ಬಿದ್ದು ಉಂಗುರ ಮಿನುಗಿತು. ಆ ಕ್ಷಣ ಅದು ಆ ರಾಜ್ಯಭ್ರಷ್ಟ ರಾಜನ ಗಮನವನ್ನು ತನ್ನೆಡೆ ಸೆಳೆಯಿತು. ಅಲ್ಲಿ ಮೂರು ಪದಗಳು ಕೆತ್ತಲ್ಪಟ್ಟಿತ್ತು. ಅವು - "ಇದು ಹೀಗೇ ಇರದು". ರಾಜ್ಯಭ್ರಷ್ಟ ರಾಜನಿಗೆ ಈ ಮೂರು ಪದಗಳು ಆಶಾಕಿರಣಗಳಾಗಿ ಕಂಡವು. ತನ್ನ ಆತ್ಮಹತ್ಯೆಯ ಪ್ರಯತ್ನವನ್ನು ಕೈಬಿಟ್ಟು ಪುನ: ಮೇಲೆದ್ದ. ತನ್ನ ಜನರನ್ನು ಹುಡುಕಿದ, ಒಟ್ಟುಗೂಡಿಸಿದ. ತನ್ನದೇ ಗುಂಪನ್ನು ಕಟ್ಟತೊಡಗಿದ. ಒಂದು ಚಿಕ್ಕ ಸೇನೆಯನ್ನು ಕಟ್ಟುವವರೆಗೆ ತನ್ನ ಪ್ರಯತ್ನ ಮುಂದುವರೆಸಿ ಯಶಸ್ವಿಯಾದ. ಮುಂದೆ ಇದೇ ಸೇನೆಯನ್ನು ಬಳಸಿ ಪುನ: ಯುದ್ಧ ಮಾಡಿದ. ಕಳೆದುಕೊಂಡಿದ್ದ ತನ್ನ ರಾಜ್ಯವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ. ಆ ದಿನಗಳು ಮರಳಿ ಆತನಿಗೆ ದೊರೆತವು. ರಾಜನಿಗೆ ಪುನ: ಪಟ್ಟಾಭಿಷೇಕ. ಎಲ್ಲೆಡೆ ಸಂಭ್ರಮ. ನಗರವನ್ನೆಲ್ಲ ಸಿಂಗರಿಸಲಾಯಿತು. ಪಟ್ಟಾಭಿಷೇಕಕ್ಕಾಗಿ ರಾಜನನ್ನು ರಥದಲ್ಲಿ ಕುಳ್ಳರಿಸಿ ಕರೆತರಲಾಗುತ್ತಿತ್ತು. ಆ ಸಮಯದಲ್ಲಿ ಪಟ್ಟಾಭಿಷೇಕಕ್ಕಾಗಿ ಸಿಂಗರಿಸಿದ ದೀಪದ ಬೆಳಕು ಮತ್ತೆ ಆತನ ಕೈಯುಂಗುರದ ಮೇಲೆ ಬಿದ್ದು, ಉಂಗುರ ಮಿನುಗಿತು. ಆ ಸಂಭ್ರಮದ ಕ್ಷಣದಲ್ಲಿಯೂ ಒಮ್ಮೆ ಆ ಮೂರು ಪದಗಳು ರಾಜನ ಗಮನ ಸೆಳೆದವು. - "ಇದು ಹೀಗೇ ಇರದು".

No comments:

Post a Comment