ಈ ಮುದ್ದು ಮಕ್ಕಳ ಪ್ರಶ್ನೆಗಳದೇನು? ಇವರೇನು ಪ್ರಶ್ನೆಗಳ ಮೂಲಕ ತಾವು ಕಲಿಯುತ್ತವೋ ಅಥವಾ ನಮಗೆ ಕಲಿಸುತ್ತವೋ? ನಾವೂ ಕಲಿಯುವ ಹಾದಿಯಲ್ಲಿರುವವರೇ ಬಿಡಿ. ಹೆಚ್ಚೆಂದರೆ ಈ ಮಕ್ಕಳಿಗಿಂತ ಕಿಂಚಿತ್ ವರ್ಷ ಮುಂಚಿತವಾಗಿ ಈ ಭುವಿಗೆ ಬಂದಿದ್ದು ನಾವು. ನಾವೇನು ಜ್ಞಾನಿಗಳಲ್ಲ. ನಾವೇ ಹೇಳಿಕೊಡುವವರು, ನಾವು ಸರಿಯಾದದ್ದನ್ನೇ ಮಾಡುತ್ತಿದ್ದೇವೆ, ಮಕ್ಕಳೂ ಅದನ್ನೇ ಕಲಿಯಬೇಕು ಎನ್ನುವ ಅಹಂಕಾರ ಖಂಡಿತಾ ಸಲ್ಲ. ಈ ಪ್ರಸಂಗ ನೋಡಿ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು. ದೇವರ ಮುಂದಿನ ದೀಪಕ್ಕೆ ಬೆಂಕಿ ಎಂದು ಕರೆಯುತ್ತಿದ್ದಿತ್ತು. ಅದು ಕರೆದದ್ದೇನು ತಪ್ಪಲ್ಲ. ಆದರೂ ಅದಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. "ಮಗು, ಅದು ಬೆಂಕಿಯಲ್ಲ, ಅದಕ್ಕೆ ದೀಪವೆಂದು ಕರೆಯಬೇಕು" ಎಂದು. ಮಗು ಯಾಕೆ ಎಂದು ಪ್ರಶ್ನಿಸಿತು. ಉತ್ತರಿಸಬೇಕಲ್ಲ. ಹೀಗೊಂದು ಪ್ರಯತ್ನ ಮಾಡಲಾಯಿತು. ಮೂಲ ಒಂದೇ ಆದರೂ ಬಳಕೆಯ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗಿದೆ. ಕತ್ತಲೆಯನ್ನು ಓಡುಸುವ ಬೆಳಕಿಗೋಸ್ಕರ ಬಳಸಿದಾಗ ಅದನ್ನು ದೀಪವೆಂದು ಕರೆಯಬೇಕು. ಅಡುಗೆ ಮುಂತಾದವೆಡೆ ಶಾಖಕ್ಕೋಸ್ಕರ ಬಳಸಿದಾಗ ಅದನ್ನು ಬೆಂಕಿಯೆಂದು ಕರೆಯಬೇಕು. ಇಷ್ಟನ್ನು ವಿವರಿಸಿ ಆಗಿತ್ತು. ಮಕ್ಕಳೊಂದು ಅದ್ಭುತ. ಅವು ಸಂಗತಿಗಳನ್ನು ಜೋಡಿಸುವ ರೀತಿ ಅನನ್ಯ. ಈ ಮಗುವಿನ ಮುಂದಿನ ಪ್ರಶ್ನೆಯನ್ನು ಕೇಳಿ. "ಸರಿ, ನನ್ನ ಹುಟ್ಟಿದ ಹಬ್ಬದ ದಿನ ನೀನು ಮಾಡುತ್ತೀಯಲ್ಲ ಹೋಮ, ಅದು ಬೆಂಕಿಯಲ್ಲವೇ?" ಸ್ವಲ್ಪ ಯೋಚಿಸುವಂತಾದರೂ ಉತ್ತರಿಸುವ ಪ್ರಯತ್ನ ಅಷ್ಟೆ. "ಅಲ್ಲ, ಅದಕ್ಕೆ ಅಗ್ನಿಯೆಂದು ಹೆಸರು." ಮಗುವಿಗೆ ಸಮಾಧಾನವಾದಂತಿರಲಿಲ್ಲ. ಮತ್ತೆ ಪ್ರಶ್ನಿಸಿತು. "ಅದು ಬೆಂಕಿಯಲ್ಲವೇ?" ಸ್ವಲ್ಪ ವಿವರಣೆಯ ಅಗತ್ಯವಿದೆಯೆನ್ನಿಸಿತು. "ಮಗು, ನಮಗೆ ಆಯುರಾರೋಗ್ಯ, ಐಶ್ವರ್ಯಗಳನ್ನು ಕೊಡುವವರು ದೇವತೆಗಳು. ಇಂದ್ರ, ಸೂರ್ಯ, ವಾಯು, ವರುಣಾದಿ ದೇವತೆಗಳು ಕಾಲ ಕಾಲಕ್ಕೆ ಮಳೆ-ಬೆಳೆಗಳನ್ನು ಕೊಡುವವರು. ಅವರಿಗೆ ಶಕ್ತಿ ಬೇಕಲ್ಲವೇ? ಅವರು ನಮ್ಮ ಹಾಗೆ ದಿನಾ ಮೂರು ಹೊತ್ತು ಉಣ್ಣುವವರಲ್ಲ. ಅವರಿಗೆ ಶಕ್ತಿಕೊಡಬೇಕಾದವರು ನಾವು. ನಾವು ಹೋಮ, ಹವನಾದಿಗಳನ್ನು ಮಾಡಿ ಹವಿಸ್ಸುಗಳನ್ನು ಅರ್ಪಿಸಿದರೆ ಅದನ್ನು ದೇವತೆಗಳು ಸ್ವೀಕರಿಸುವರು. ಆ ಹವಿಸ್ಸುಗಳು ದೇವತೆಗಳಲ್ಲಿ ಶಕ್ತಿಯನ್ನು ತುಂಬುವವು. ಈ ಹೋಮಗಳನ್ನು ಮಾಡಬೇಕಾದರೆ ಅಲ್ಲಿ ದೇವತೆಗಳನ್ನು ಆಹ್ವಾನಿಸಲಾಗಿರುತ್ತದೆ. ಹಾಗಾಗಿ ಅದು ಬೆಂಕಿಯಾದರೂ ಅದಕ್ಕೆ ಅಗ್ನಿ ಎಂಬ ಹೆಸರಿನಿಂದ ಕರೆಯುತ್ತಾರೆ." ಇಷ್ಟು ವಿವರಿಸುವ ವೇಳೆಗೆ ಮಗು ಮುಂದಿನ ಯಾವುದೋ ಆಟಕ್ಕೆ ಓಡಿಯಾಗಿತ್ತು. ಉತ್ತರಿಸಿದವ ಕ್ಷಣಹೊತ್ತು ಶೂನ್ಯದಲ್ಲಿ ಮನಸ್ಸನ್ನು ನೆಟ್ಟ.
No comments:
Post a Comment