ಈ ಮುದ್ದು ಮಕ್ಕಳ ಪ್ರಶ್ನೆಗಳದೇನು? ಇವರೇನು ಪ್ರಶ್ನೆಗಳ ಮೂಲಕ ತಾವು ಕಲಿಯುತ್ತವೋ ಅಥವಾ ನಮಗೆ ಕಲಿಸುತ್ತವೋ? ನಾವೂ ಕಲಿಯುವ ಹಾದಿಯಲ್ಲಿರುವವರೇ ಬಿಡಿ. ಹೆಚ್ಚೆಂದರೆ ಈ ಮಕ್ಕಳಿಗಿಂತ ಕಿಂಚಿತ್ ವರ್ಷ ಮುಂಚಿತವಾಗಿ ಈ ಭುವಿಗೆ ಬಂದಿದ್ದು ನಾವು. ನಾವೇನು ಜ್ಞಾನಿಗಳಲ್ಲ. ನಾವೇ ಹೇಳಿಕೊಡುವವರು, ನಾವು ಸರಿಯಾದದ್ದನ್ನೇ ಮಾಡುತ್ತಿದ್ದೇವೆ, ಮಕ್ಕಳೂ ಅದನ್ನೇ ಕಲಿಯಬೇಕು ಎನ್ನುವ ಅಹಂಕಾರ ಖಂಡಿತಾ ಸಲ್ಲ. ಈ ಪ್ರಸಂಗ ನೋಡಿ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು. ದೇವರ ಮುಂದಿನ ದೀಪಕ್ಕೆ ಬೆಂಕಿ ಎಂದು ಕರೆಯುತ್ತಿದ್ದಿತ್ತು. ಅದು ಕರೆದದ್ದೇನು ತಪ್ಪಲ್ಲ. ಆದರೂ ಅದಕ್ಕೆ ತಿಳಿಸಿಕೊಡುವ ಪ್ರಯತ್ನ ಮಾಡಲಾಯಿತು. "ಮಗು, ಅದು ಬೆಂಕಿಯಲ್ಲ, ಅದಕ್ಕೆ ದೀಪವೆಂದು ಕರೆಯಬೇಕು" ಎಂದು. ಮಗು ಯಾಕೆ ಎಂದು ಪ್ರಶ್ನಿಸಿತು. ಉತ್ತರಿಸಬೇಕಲ್ಲ. ಹೀಗೊಂದು ಪ್ರಯತ್ನ ಮಾಡಲಾಯಿತು. ಮೂಲ ಒಂದೇ ಆದರೂ ಬಳಕೆಯ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳನ್ನು ಸೂಚಿಸಲಾಗಿದೆ. ಕತ್ತಲೆಯನ್ನು ಓಡುಸುವ ಬೆಳಕಿಗೋಸ್ಕರ ಬಳಸಿದಾಗ ಅದನ್ನು ದೀಪವೆಂದು ಕರೆಯಬೇಕು. ಅಡುಗೆ ಮುಂತಾದವೆಡೆ ಶಾಖಕ್ಕೋಸ್ಕರ ಬಳಸಿದಾಗ ಅದನ್ನು ಬೆಂಕಿಯೆಂದು ಕರೆಯಬೇಕು. ಇಷ್ಟನ್ನು ವಿವರಿಸಿ ಆಗಿತ್ತು. ಮಕ್ಕಳೊಂದು ಅದ್ಭುತ. ಅವು ಸಂಗತಿಗಳನ್ನು ಜೋಡಿಸುವ ರೀತಿ ಅನನ್ಯ. ಈ ಮಗುವಿನ ಮುಂದಿನ ಪ್ರಶ್ನೆಯನ್ನು ಕೇಳಿ. "ಸರಿ, ನನ್ನ ಹುಟ್ಟಿದ ಹಬ್ಬದ ದಿನ ನೀನು ಮಾಡುತ್ತೀಯಲ್ಲ ಹೋಮ, ಅದು ಬೆಂಕಿಯಲ್ಲವೇ?" ಸ್ವಲ್ಪ ಯೋಚಿಸುವಂತಾದರೂ ಉತ್ತರಿಸುವ ಪ್ರಯತ್ನ ಅಷ್ಟೆ. "ಅಲ್ಲ, ಅದಕ್ಕೆ ಅಗ್ನಿಯೆಂದು ಹೆಸರು." ಮಗುವಿಗೆ ಸಮಾಧಾನವಾದಂತಿರಲಿಲ್ಲ. ಮತ್ತೆ ಪ್ರಶ್ನಿಸಿತು. "ಅದು ಬೆಂಕಿಯಲ್ಲವೇ?" ಸ್ವಲ್ಪ ವಿವರಣೆಯ ಅಗತ್ಯವಿದೆಯೆನ್ನಿಸಿತು. "ಮಗು, ನಮಗೆ ಆಯುರಾರೋಗ್ಯ, ಐಶ್ವರ್ಯಗಳನ್ನು ಕೊಡುವವರು ದೇವತೆಗಳು. ಇಂದ್ರ, ಸೂರ್ಯ, ವಾಯು, ವರುಣಾದಿ ದೇವತೆಗಳು ಕಾಲ ಕಾಲಕ್ಕೆ ಮಳೆ-ಬೆಳೆಗಳನ್ನು ಕೊಡುವವರು. ಅವರಿಗೆ ಶಕ್ತಿ ಬೇಕಲ್ಲವೇ? ಅವರು ನಮ್ಮ ಹಾಗೆ ದಿನಾ ಮೂರು ಹೊತ್ತು ಉಣ್ಣುವವರಲ್ಲ. ಅವರಿಗೆ ಶಕ್ತಿಕೊಡಬೇಕಾದವರು ನಾವು. ನಾವು ಹೋಮ, ಹವನಾದಿಗಳನ್ನು ಮಾಡಿ ಹವಿಸ್ಸುಗಳನ್ನು ಅರ್ಪಿಸಿದರೆ ಅದನ್ನು ದೇವತೆಗಳು ಸ್ವೀಕರಿಸುವರು. ಆ ಹವಿಸ್ಸುಗಳು ದೇವತೆಗಳಲ್ಲಿ ಶಕ್ತಿಯನ್ನು ತುಂಬುವವು. ಈ ಹೋಮಗಳನ್ನು ಮಾಡಬೇಕಾದರೆ ಅಲ್ಲಿ ದೇವತೆಗಳನ್ನು ಆಹ್ವಾನಿಸಲಾಗಿರುತ್ತದೆ. ಹಾಗಾಗಿ ಅದು ಬೆಂಕಿಯಾದರೂ ಅದಕ್ಕೆ ಅಗ್ನಿ ಎಂಬ ಹೆಸರಿನಿಂದ ಕರೆಯುತ್ತಾರೆ." ಇಷ್ಟು ವಿವರಿಸುವ ವೇಳೆಗೆ ಮಗು ಮುಂದಿನ ಯಾವುದೋ ಆಟಕ್ಕೆ ಓಡಿಯಾಗಿತ್ತು. ಉತ್ತರಿಸಿದವ ಕ್ಷಣಹೊತ್ತು ಶೂನ್ಯದಲ್ಲಿ ಮನಸ್ಸನ್ನು ನೆಟ್ಟ.
ವಾಗ್ವಿಲಾಸ
Tuesday, October 27, 2015
Sunday, October 25, 2015
ಗುರು ಪ್ರಸಾದ at my desk. Please help to read yourself.
ಪುರಾತನ ಕಾಲದಲ್ಲಿ ಕಾಗೆ ಮತ್ತು ಗೂಬೆಗಳು ಬೆಳ್ಳಗಿದ್ದವು. ಹಿಮದಂತೆ ಬೆಳ್ಳಗಿದ್ದವು. ಒಮ್ಮೆ ಅವುಗಳಿಗೆ ಶುದ್ಧತೆಯ ಪ್ರತೀಕವಾದ ತಮ್ಮ ಬಿಳಿ ಬಣ್ಣದ ಬಗ್ಗೆ ಜಿಗುಪ್ಸೆ ಬಂದಿತು. ಬೇರೆ ಬೇರೆ ಪಕ್ಷಿಗಳ ಬೇರೆ ಬೇರೆ ಬಣ್ಣಗಳನ್ನು ಕಂಡು ಅವು ಅಸೂಯೆಪಟ್ಟವು ಮತ್ತು ತಾವೂ ತಮ್ಮ ಬಣ್ಣಗಳನ್ನು ಬದಲಿಸಬೇಕೆಂದು ನಿರ್ಣಯಿಸಿದವು. ಕಾಗೆ ಗೂಬೆಗೆ, ಮೊದಲು ನಾನು ನಿನ್ನ ಮೈಮೇಲೆ ಬಣ್ಣಗಳನ್ನು ಬಿಡಿಸುತ್ತೇನೆ, ನಂತರ ನೀನು ನನ್ನ ಮೇಲೆ ಬಿಡಿಸು ಎಂದಿತು. ಒಪ್ಪಂದದಂತೆ ಬಿಳಿಯ ಗೂಬೆಯ ಮೇಲೆ ಕಾಗೆ ಕಪ್ಪು ಕಂದು, ದೊಡ್ಡ ಚಿಕ್ಕ ವೃತ್ತಗಳನ್ನು ಬಿಡಿಸಿತು. ಗೂಬೆಗೆ ತನ್ನ ಮೈಯನ್ನು ನೋಡಿಕೊಂಡು ಸಂತೋಷವಾಯಿತು. ಈಗ ಗೂಬೆಯ ಸರದಿ. ಕಾಗೆ ಸೂರ್ಯನಿಗೆ ಮೈಯೊಡ್ಡಿ ಕಣ್ಮುಚ್ಚಿ ಕುಳಿತಿತು. ಗೂಬೆ ಕಾಗೆಯ ಮೈಮೇಲೆ ಕಪ್ಪು ಕಪ್ಪು ಚುಕ್ಕೆಗಳನ್ನು ಬಿಡಿಸಿತು. ಬಿಡಿಸುವ ಕೆಲಸ ಪೂರ್ಣಗೊಂಡ ಮೇಲೆ ಗೂಬೆ ಕಾಗೆಯನ್ನೊಮ್ಮೆ ನೋಡಿತು. ಗೂಬೆಗೆ ಕಾಗೆ ತನಗಿಂತ ಹೆಚ್ಚು ಸುಂದರವಾಗಿ ಕಾಣಿಸುತ್ತಿದೆ ಎನ್ನಿಸಿತು. ಮುಂದಿನದು ಅಸೂಯೆ. ಅದರ ಮುಂದುವರಿಕೆ ಅದರ ಬಣ್ಣ ಕೆಡಿಸುವುದು. ಗೂಬೆಗೆ ತನ್ನನ್ನು ನೋಡಿಕೊಂಡಾಗ ಉಂಟಾದ ಸಂತೋಷ ಭಾವ ಅಳಿಸಿ ಅಸೂಯಾ ಭಾವ ಮನಸ್ಸನ್ನು ತುಂಬಿತು. ತಾನು ಹೇಗಿದ್ದರೂ ಪರವಾಗಿಲ್ಲ. ಕಾಗೆ ಮಾತ್ರ ಚೆನ್ನಾಗಿ ಕಾಣದಂತೆ ಮಾಡಬೇಕೆನ್ನಿಸಿತು. ಗೂಬೆಯು ಮೊದಲು ತನ್ನ ಮನಸ್ಸನ್ನು ಕೆಡಿಸಿಕೊಂಡಿತು. ಕಾಗೆಯನ್ನು ರೂಪದಲ್ಲಿ ಕೆಡಿಸುವ ಮನಸ್ಸು ಮಾಡಿತು. ಗೂಬೆ ತಾನು ಬಿಡಿಸಿದ ಕರಿಯ ಚುಕ್ಕೆಗಳನ್ನೆಲ್ಲ ಸೇರಿಸಿ ಸಂಪೂರ್ಣ ಕಪ್ಪು ಬಣ್ಣ ಬರುವಂತೆ ಮಾಡಿತು ಮತ್ತು ಕಾಗೆ ಕಣ್ಣು ಬಿಡುವುದಕ್ಕಿಂತ ಮುಂಚೆ ಹಾರಿಹೋಯಿತು. ಇತ್ತ ಕಾಗೆ ಕಣ್ದೆರೆತು ತನ್ನನ್ನೊಮ್ಮೆ ನೋಡಿಕೊಂಡಿತು. ಸಂಪೂರ್ಣ ಕಪ್ಪು. ಕರಿಗಪ್ಪು. ಕಾಗೆ ನೊಂದಿತು. ಮಿತ್ರ ತನಗೆ ಮೋಸ ಮಾಡಿದನೆಂದು ನೊಂದಿತು. ಅಂದಿನಿಂದ ಕಾಗೆ ಮತ್ತು ಗೂಬೆಗಳಿಗೆ ಅದೇ ಬಣ್ಣಗಳಂತೆ.
ಸ್ವತ: ಕೆಟ್ಟು, ಪರರನ್ನು ಕೆಡಿಸುವುದು ಅಸೂಯೆ.
Monday, October 19, 2015
ಗುರು ಪ್ರಸಾದ at my desk. Please read yourself
ದೈವಕ್ಕೆ ಉಳಿಸಬೇಕೆಂದೆನಿಸಿದರೆ ಅಳಿಸಲಸಾಧ್ಯ.
ಇದೊಂದು ಸತ್ಯ ಘಟನೆಯಂತೆ.
Sunday, October 18, 2015
ಗುರು ಪ್ರಸಾದ at my desk. Please help to read yourself
ಅಣ್ಣ-ತಮ್ಮಂದಿರೀರ್ವರು. ಅಣ್ಣ ಸದ್ಗುಣ ಸಂಪನ್ನ. ಸದಾಚಾರಿ. ಸಮಾಜದಲ್ಲಿ ಗೌರವ, ಮನ್ನಣೆ ಗಳಿಸಿರುವವನು. ತಮ್ಮ ಪ್ರಪಂಚದಲ್ಲಿರುವ ಎಲ್ಲಾ ದುರ್ಮಾರ್ಗಗಳಲ್ಲಿ ನಡೆಯುತ್ತಿರುವವನು. ಮದ್ಯ, ಮಾನಿನಿಯರ ದಾಸ. ದುಷ್ಕೃತ್ಯಗಳಲ್ಲಿ ಸಮಾಜದಲ್ಲಿ ಹೆಸರುವಾಸಿ. ಒಬ್ಬ ಪತ್ರಕರ್ತ ಈ ಇಬ್ಬರನ್ನೂ ಸಂದರ್ಶಿಸಲು ನಿರ್ಧರಿಸಿದ. ಪತ್ರಕರ್ತರೆಂದರೆ ನಕಾರಾತ್ಮಕ ಎಂಬುದೊಂದು ಭಾವನೆ ಸಮಾಜದಲ್ಲಿ ಬೆಳೆದಿದೆ ತಾನೆ? ಈ ಪತ್ರಕರ್ತನೂ ಅದೇ ಜಾತಿಗೆ ಸೇರಿದವನಿರಬೇಕು. ಮೊದಲು ತಮ್ಮನನ್ನೇ ಸಂದರ್ಶಿಸಲು ತೀರ್ಮಾನಿಸಿದ. ಸಂದರ್ಶನದಲ್ಲಿ ತಮ್ಮನನ್ನು ಪ್ರಶ್ನಿಸಿದ. "ತಾವೇಕೆ ಹೀಗೆ? ಈ ರೀತಿಯಾಗಿ ಬೆಳೆಯಲು ಕಾರಣಗಳೇನು?" ತಮ್ಮ ಉತ್ತರಿಸಿದ- "ನಾನೇಕೆ ಹೀಗೆ? ನಾನು ಹೀಗಿರದೆ ಮತ್ತೆ ಹೇಗೆ ಇರಬೇಕು? ನಾನು ಹೀಗಿರಲು ನನ್ನಪ್ಪ ಕಾರಣ. ನನ್ನ ತಂದೆ ಒಬ್ಬ ಮದ್ಯ ವ್ಯಸನಿ. ಪ್ರತಿದಿನ ಬಂದು ನನ್ನ ತಾಯಿಗೆ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಇದನ್ನೇ ನೋಡಿ ನಾನು ಬೆಳೆದವ. ಅದನ್ನೇ ಉಂಡು ಅದೇ ಆಗಿರುವೆ ಅಷ್ಟೆ. ನನ್ನ ತಂದೆ ನನಗೊಬ್ಬ ಆದರ್ಶ." ಪತ್ರಕರ್ತನಿಗೆ ಆಶ್ಚರ್ಯವಾಯಿತು. ತಂದೆ ಹೀಗೆ. ಆದರೆ ಮಕ್ಕಳಿಬ್ಬರು ತದ್ವಿರುದ್ಧ. ಪತ್ರಕರ್ತ ಅಣ್ಣನ ಸಂದರ್ಶನ ಮಾಡಿದ. ಅಣ್ಣನನ್ನು ಪ್ರಶ್ನಿಸಿದ. "ತಾವೇಕೆ ಹೀಗೆ? ಈ ರೀತಿಯಾಗಿ ಬೆಳೆಯಲು ಕಾರಣಗಳೇನು? ನಿಮ್ಮ ತಮ್ಮ ನೋಡಿದರೆ ಹಾಗೆ. ನಿಮ್ಮ ತಂದೆ ಒಬ್ಬ ಮದ್ಯವ್ಯಸನಿಯೆಂದು ಕೇಳ್ಪಟ್ಟೆ." ಅಣ್ಣ ಉತ್ತರಿಸಿದ. "ಹೌದು. ನೀವು ಕೇಳಿದ್ದು ಸರಿ. ಆಶ್ಚರ್ಯಪಡಬೇಡಿ, ಸಂದೇಹಿಸಬೇಡಿ. ನಮ್ಮಿಬ್ಬರ ತಂದೆ ಒಬ್ಬನೇ. ಅವನು ಮದ್ಯವ್ಯಸನಿಯೂ ಹೌದು. ಪ್ರತಿದಿನ ಬಂದು ನನ್ನ ತಾಯಿಗೆ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಇದನ್ನೇ ನೋಡಿ ನಾನು ಬೆಳೆದವ. ಆ ತಾಯಿಯ ನೋವನ್ನು ನೋಡಿ, ನೋಡಿ ರೋಸಿ ಹೋಗಿದ್ದೆ. ನಾನು ಮಾತ್ರ ಎಂದೆಂದಿಗೂ ಅಪ್ಪನ ಹಾಗೆ ಆಗಬಾರದೆಂದು ತೀರ್ಮಾನಿಸಿದ್ದೆ. ಅದಕ್ಕೇ ನಾನು ಹೀಗೆ. ನನ್ನಮ್ಮನ ಕಷ್ಟ ಯಾರಿಗೂ ಬರದಿರಲಿ ಎಂಬುದೇ ಆಶಯ."
ಮನದ, ಬುದ್ಧಿಯ ಬೆಳವಣಿಗೆ ಸಂಗತಿಗಳನ್ನು ಗ್ರಹಿಸುವ, ಜೀರ್ಣಿಸಿಕೊಳ್ಳುವ ರೀತಿಯಲ್ಲಿದೆ.
Thursday, October 15, 2015
ಗುರು ಪ್ರಸಾದ at my desk. Please help to read yourself
ಒಂದು ಊರು. ಊರಿಗೊಬ್ಬ ಸಂತ. ಸಂತನಿಗೆ ಅಪಾರವಾದ ಜ್ಞಾನವಿತ್ತು. ಗ್ರಾಮಸ್ಥರಿಗೆ ಸಂತನ ಜ್ಞಾನದ ಬಗ್ಗೆ ಅಪಾರವಾದ ಅಜ್ಞಾನವೂ ಇತ್ತು. ಒಂದಿನ ರಾತ್ರಿ ಸಂತನಿಗೊಂದು ಕನಸು ಬಿತ್ತು. ಕನಸು ಹೀಗಿತ್ತು - ಇಂದಿನಿಂದ ಸರಿಯಾಗಿ ೩ ದಿನಗಳ ನಂತರ ಈ ಊರಿನಲ್ಲಿ ಮಳೆಯಾಗುತ್ತದೆ. ಅತ್ಯಧಿಕ ಮಳೆಯಾಗಿ ಹಳ್ಳ - ಕೊಳ್ಳಗಳು ತುಂಬಿ ಹರಿಯುತ್ತವೆ. ಆದರೆ ಆ ನೀರನ್ನೇನಾದರೂ ಕುಡಿದರೆ, ಕುಡಿದವರಿಗೆ ಹುಚ್ಚು ಹಿಡಿಯುತ್ತದೆ. ಸಂತನಿಗೆ ಎಚ್ಚರವಾಯಿತು, ಭಯವಾಯಿತು. ಮಾರನೆ ದಿನದಿಂದಲೇ ಆ ಸಂತ ಊರಿನವರನ್ನು ಎಚ್ಚರಿಸಲು ಪ್ರಾರಂಭಿಸಿದ. ಇಂದಿನಿಂದ ಮೂರುದಿನಗಳ ನಂತರದ ಮಳೆ ನೀರನ್ನು ಕುಡಿಯದಿರಿ ಎಂದು ಎಲ್ಲರಿಗೆ ಹೇಳುತ್ತಾ ಬಂದ. ಈ ಊರಿನಿಂದ ಬಹುದೂರ ಒಂದು ಬೆಟ್ಟವಿದೆ. ಬನ್ನಿ, ಅಲ್ಲಿಗೆ ಹೋಗಿ ತಂಗೋಣ ಎಂದ. ಗ್ರಾಮಸ್ಥರು ಸಂತನ ಮಾತಿಗೆ ಅಷ್ಟು ಗಮನವೀಯಲಿಲ್ಲ. ಉಪೇಕ್ಷಿಸಿದರು. ಆದರೆ ಸಂತ ಊರನ್ನು ಬಿಟ್ಟು ಬೆಟ್ಟ ಹತ್ತಿದ. ಆ ದಿನ ಬಂತು. ಮಳೆ ಪ್ರಾರಂಭವಾಯಿತು. ಹಳ್ಳ-ಕೊಳ್ಳಗಳು ತುಂಬಿದವು. ಜನ ಸಂತನನ್ನು ಮರೆತು ನೀರು ಕುಡಿದರು. ಕುಡಿದವರಿಗೆಲ್ಲ ಹುಚ್ಚು ಹಿಡಿಯಿತು. ಎಲ್ಲ ಗ್ರಾಮಸ್ಥರಿಗೂ ಹುಚ್ಚು ಹಿಡಿಯಿತು.
ದಿನಗಳು ಉರುಳಿದವು. ಬೆಟ್ಟದ ಮೇಲೆ ಸಂತನೊಬ್ಬನೆ. ಆತನಿಗೂ ಕುತೂಹಲ ಬಂತು. ಯಾಕೆ ಒಮ್ಮೆ ಊರಿಗೆ ಹೋಗಿ ಪರಿಸ್ಥಿತಿ ಹೇಗಿದೆಯೆಂದು ನೋಡಿ ಬರಬಾರದು ಎನಿಸಿತು. ಬೆಟ್ಟದಿಂದಿಳಿದು ಊರಿಗೆ ಬಂದು ನೋಡಿದ. ಇಡೀ ಊರಿಗೇ ಊರೇ ಹುಚ್ಚು. ಸಂತ ಊರಿನವರನ್ನು ಕಂಡು ಮಾತನಾಡಿದ. ನಾನು ನಿಮಗೆ ಎಚ್ಚರಿಕೆ ನೀಡಿದ್ದೆ ಎಂದು ಹಲುಬಿದ. ಹಲವರಿಗೆ ಹಾಗೆ ಹೇಳಿದ. ಆದರೆ ಊರಿನವರಿಗೆಲ್ಲರಿಗೆ ಈ ಸಂತನ ವರ್ತನೆ ಸರಿ ಕಾಣಲಿಲ್ಲ. ಸಂತನಿಗೇನಾದರೂ ಹುಚ್ಚು ಹಿಡಿದಿರಬಹುದೇ ಎಂದು ಸಂಶಯಿಸಿದರು. ಬೈದರು, ಹೋಗಾಚೆ ಎಂದರು, ಕಲ್ಲು ಬೀಸಿದರು. ಸಂತ ತಪ್ಪಿಸಿಕೊಂಡು ಮತ್ತೆ ಬೆಟ್ಟ ಹತ್ತಿದ. ಹಲವಾರು ದಿನ ಕಳೆದ ನಂತರ ಸಂತನಿಗೆ ಮತ್ತೆ ಬೆಟ್ಟದಲ್ಲಿ ಒಬ್ಬನೆ ಕೂತು ಬೇಸರವಾಯಿತು. ಮತ್ತೆ ಊರು ಕರೆಯಿತು. ಮತ್ತೆ ಹೋದ. ಪುನ: ಊರಿನವರು ಇವನೊಬ್ಬ ಹುಚ್ಚನೆಂದು ಬೈದು ಓಡಿಸಿದರು. ಸಂತ ಮತ್ತೆ ಬೆಟ್ಟ ಹತ್ತಿದ. ಹಲವು ದಿನಗಳ ನಂತರ ಪುನ: ಅದೇ ಬೇಜಾರು. ಈ ಚಕ್ರಗಳು ಹಲವಾರು ಬಾರಿ ನಡೆದವು. ಕೊನೆಗೊಮ್ಮೆ ಸಂತ ದಿಕ್ಕೆಟ್ಟು ನಿರ್ಧರಿಸಿದ. ಊರಿಗೆ ಬಂದು ತಾನೂ ಕೆರೆಯ ನೀರನ್ನು ಕುಡಿದ. ಅಲ್ಲಿಗೆ ಎಲ್ಲವೂ ಸರಿಯಾದಂತಾಯಿತು.
ಸಂತನ ಪರಿಸ್ಥಿತಿ ಹಲವು ಸಂದರ್ಭಗಳಲ್ಲಿ ಬಂದೊದಗಬಹುದು. ಹತ್ತು ಜನರಾಡುವ ಮಿಥ್ಯೆಯ ನಡುವೆ ಒಬ್ಬರೆ ಸತ್ಯವನ್ನು ಪ್ರತಿಪಾದಿಸುವ ಸಂದರ್ಭ ಬರಬಹುದು. ಆ ಕ್ಷಣಗಳಲ್ಲಿ ಮಾನಸಿಕ ಸ್ಥೈರ್ಯ, ದೃಢ ನಂಬಿಕೆ, ನಿಲುವು ಅವಶ್ಯಕ.
Wednesday, October 14, 2015
ಗುರು ಪ್ರಸಾದ at my desk. Please help to read yourself
ಒಬ್ಬ ವ್ಯಾಪಾರಿ. ಆತನ ವ್ಯಾಪಾರ ದೇಶ-ದೇಶಗಳ ನಡುವೆ, ಹಡಗುಗಳ ಮೂಲಕ. ದುರದೃಷ್ಟವಶಾತ್ ಒಮ್ಮೆ ಸಮುದ್ರದಲ್ಲಿ ಬಿರುಗಾಳಿ ಎದ್ದು ಆತನ ಹಡಗುಗಳೆಲ್ಲ ಮುಳುಗಿದವು. ಅತನ ಅತಿ ದೊಡ್ಡ ಹೂಡಿಕೆ ನಷ್ಟವಾಗಿತ್ತು. ಈ ರೀತಿಯ ನಷ್ಟವನ್ನು ಅವನು ಎಂದೂ ಅನುಭವಿಸಿರಲಿಲ್ಲ. ಇದರಿಂದ ಚೇತರಿಸಿಕೊಳ್ಳುವುದು ಅಸಾಧ್ಯವೆನಿಸಿತ್ತು ಆ ವ್ಯಾಪಾರಿಗೆ. ಬೇರೆ ದಾರಿಗಾಣದೆ ಆತ್ಮಹತ್ಯೆಯ ಹಾದಿ ತುಳಿದಿದ್ದ. ಆ ಸಮಯದಲ್ಲಿ ಆ ವ್ಯಾಪಾರಿಗೆ ಒಬ್ಬ ವೃದ್ಧನ ಪರಿಚಯವಾಯಿತು. ತಾನೂ ಒಬ್ಬ ವ್ಯಾಪಾರಿಯಾಗಿದ್ದೆನೆಂದೂ, ಅತಿ ಹೆಚ್ಚು ಧನ ಸಂಪಾದನೆ ಮಾಡಿದ್ದೇನೆಂದೂ ಆ ವೃದ್ಧ ತನ್ನ ಪರಿಚಯ ಮಾಡಿಕೊಂಡ. ಈ ವ್ಯಾಪಾರಿಯ ಕಷ್ಟದ, ನಷ್ಟದ ಕತೆಯನ್ನು ಆ ವೃದ್ಧ ಆಲಿಸಿದ, ಸ್ವತ: ನೊಂದ, ಸಂತೈಸಿದ. ವೃದ್ಧನಿಗೆ ಏನೆನ್ನಿಸಿತೋ, ತನ್ನಲ್ಲಿದ್ದ ಬ್ಯಾಂಕ್ ಚೆಕ್ ವೊಂದನ್ನು ತೆಗೆದು, ತನ್ನ ಸಹಿ ಮಾಡಿ ಆ ವ್ಯಾಪಾರಿಗೆ ಕೊಟ್ಟ. "ನೀನು ಪುನ: ವ್ಯಾಪಾರವನ್ನಾರಂಭಿಸು, ಸಣ್ಣದಾಗೇ ಪ್ರಾರಂಭಿಸು, ಒಂದು ವೇಳೆ ಮತ್ತೆ ಎಂದಾದರೂ ನೀನು ನಷ್ಟವನ್ನನುಭವಿಸಿ ಸಾಯಲು ಹೊರಟೆ ಎಂದಾದರೆ, ಆ ನಿರ್ಧಾರವನ್ನು ಬದಲಿಸು. ನನ್ನ ಹತ್ತಿರ ಸಾಕಷ್ಟು ಹಣವಿದೆ. ಈ ಚೆಕ್ಕನ್ನು ಉಪಯೋಗಿಸಿ ಹಣವನ್ನು ಪಡೆದುಕೋ, ಹೊಸ ಜೀವನವನ್ನು ಪ್ರಾರಂಭಿಸು" ಎಂದು ಆ ವ್ಯಾಪಾರಿಗೆ ಹೇಳಿ ಆ ವೃದ್ಧ ಹೋದ.
ವ್ಯಾಪಾರಿಗೆ ಆ ಚೆಕ್ ಹೊಸ ಚೈತನ್ಯವನ್ನು ತುಂಬಿತು. ತಾನಿಲ್ಲಿಗೆ ಬಿಡಬಾರದೆಂದು, ಪುನ: ನಿರ್ಧರಿಸಿದ. ಮತ್ತೆ ಸೋತರೆ ಹೇಗಿದ್ದರೂ ಜೀವನಕ್ಕೆ ಈ ಚೆಕ್ ಇದ್ದೇ ಇದೆ ಎಂದು ಭಂಡ ಧೈರ್ಯ ಮಾಡಿ ಪುನ: ತನ್ನ ವ್ಯಾಪಾರವನ್ನು ಆರಂಭಿಸಿದ. ಸಣ್ಣದಾಗಿ ಶುರು ಮಾಡಿ, ಮತ್ತೆ ಲಾಭಗಳಿಸುತ್ತಾ ಸಾಗಿದ. ಆರು ತಿಂಗಳು ಕಳೆಯುವ ಹೊತ್ತಿಗೆ ಆ ವ್ಯಾಪಾರಿಗೆ ಆತ್ಮವಿಶ್ವಾಸ ಬೆಳೆದಿತ್ತು. ತಾನೀಗ ಸಮರ್ಥವಾಗಿ ತನ್ನ ವ್ಯವಹಾರ ನಿಭಾಯಿಸಬಲ್ಲೆ ಮತ್ತು ಇನ್ನೆಂದೂ ನನಗೆ ಈ ಚೆಕ್ಕಿನ ಅವಶ್ಯಕತೆ ಬರದಂತೆ ಜೀವನ ನಿರ್ವಹಿಸೆಬಲ್ಲೆನೆಂಬ ವಿಶ್ವಾಸ ವ್ಯಾಪಾರಿಗೆ ಬಂದಿತ್ತು. ಇನ್ನು ಈ ಚೆಕ್ಕನ್ನು ಆ ವೃದ್ಧನಿಗೆ ಮರಳಿಸಿ ಧನ್ಯವಾದಗಳನ್ನು ತಿಳಿಸಬೇಕೆಂದು ನಿರ್ಧರಿಸಿದ. ಆ ವೃದ್ಧನನ್ನು ಹುಡುಕತೊಡಗಿದ. ಬಹಳ ಹುಡುಕಾಟದ ನಂತರ ಒಂದು ಆಸ್ಪತ್ರೆಯಲ್ಲಿ ಆ ವೃದ್ಧನನ್ನು ಹಿಡಿಯಲು ಸಾಧ್ಯವಾಯಿತು. ಅಲ್ಲಿ ಆ ವೃದ್ಧನನ್ನು ನೋಡಿಕೊಳ್ಳುವ ದಾದಿಯ ಬಳಿ ಮಾತನಾಡಿದ. ಈ ವ್ಯಾಪಾರಿಯನ್ನು ನೋಡಿದ ದಾದಿ ಕೇಳಿದಳು - "ಏನು? ಈ ವೃದ್ಧ ನಿಮಗೂ ತಾನೊಬ್ಬ ಬಹುದೊಡ್ಡ ವ್ಯಾಪಾರಿಯೆಂದು ಗುರುತಿಸಿಕೊಂಡನೇ? ನಿಮಗೇನಾದರೂ ಖಾಲಿ ಚೆಕ್ ಗೆ ಸಹಿ ಹಾಕಿಕೊಟ್ಟನೆ?" ವ್ಯಾಪಾರಿ ಹೌದೆಂದು ತಲೆಯಲ್ಲಾಡಿಸಿದ. ದಾದಿ ಪುನ: ಹೇಳಿದಳು - "ಈತನೊಬ್ಬ ಮನೋರೋಗಿ, ಈಗ ಆರು ತಿಂಗಳ ಮೊದಲು ಈ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ. ಸಿಕ್ಕ ಸಿಕ್ಕಿದವರಿಗೆ ತಾನೊಬ್ಬ ಬಹುದೊಡ್ಡ ವ್ಯಾಪಾರಿಯೆಂದು ಗುರುತಿಸಿಕೊಳ್ಳುವುದು ಮತ್ತು ಖಾಲಿ ಚೆಕ್ಕಿಗೆ ಸಹಿಹಾಕಿ ಕೊಡುವುದು ಈತನದೊಂದು ಗೀಳು". ವ್ಯಾಪಾರಿಯ ಮೈ ಬೆವತಿತ್ತು. ಆದರೆ ಆ ಖಾಲಿ ಚೆಕ್ಕು ಆತನ ಜೀವನವನ್ನು ಬದಲಿಸಿತ್ತು.
ಜೀವನದಲ್ಲಿ ಸಂಪೂರ್ಣ ಸೋತು ಸಾಯುವ ಹಂತದಲ್ಲಿದ್ದಾಗ, ದೇವರು ಸಣ್ಣ ಅವಕಾಶವೊಂದನ್ನು ನೀಡುತ್ತಾನೆ. ಆತನನ್ನು ನಂಬಿ, ಧನಾತ್ಮಕವಾಗಿ ಚಿಂತಿಸಿ ಕೈಹಿಡಿದರೆ ಪುನ: ಮೇಲೇಳಲು ಸಾಧ್ಯವಾಗಬಹುದು.
Monday, October 12, 2015
ಝೂಂಡನ ಊಟ.
Subscribe to:
Posts (Atom)