Sunday, October 18, 2015

ಗುರು ಪ್ರಸಾದ at my desk. Please help to read yourself



ಅಣ್ಣ-ತಮ್ಮಂದಿರೀರ್ವರು. ಅಣ್ಣ ಸದ್ಗುಣ ಸಂಪನ್ನ. ಸದಾಚಾರಿ. ಸಮಾಜದಲ್ಲಿ ಗೌರವ, ಮನ್ನಣೆ ಗಳಿಸಿರುವವನು. ತಮ್ಮ ಪ್ರಪಂಚದಲ್ಲಿರುವ ಎಲ್ಲಾ ದುರ್ಮಾರ್ಗಗಳಲ್ಲಿ ನಡೆಯುತ್ತಿರುವವನು. ಮದ್ಯ, ಮಾನಿನಿಯರ ದಾಸ. ದುಷ್ಕೃತ್ಯಗಳಲ್ಲಿ ಸಮಾಜದಲ್ಲಿ ಹೆಸರುವಾಸಿ. ಒಬ್ಬ ಪತ್ರಕರ್ತ ಈ ಇಬ್ಬರನ್ನೂ ಸಂದರ್ಶಿಸಲು ನಿರ್ಧರಿಸಿದ. ಪತ್ರಕರ್ತರೆಂದರೆ ನಕಾರಾತ್ಮಕ ಎಂಬುದೊಂದು ಭಾವನೆ ಸಮಾಜದಲ್ಲಿ ಬೆಳೆದಿದೆ ತಾನೆ? ಈ ಪತ್ರಕರ್ತನೂ ಅದೇ ಜಾತಿಗೆ ಸೇರಿದವನಿರಬೇಕು. ಮೊದಲು ತಮ್ಮನನ್ನೇ ಸಂದರ್ಶಿಸಲು ತೀರ್ಮಾನಿಸಿದ. ಸಂದರ್ಶನದಲ್ಲಿ ತಮ್ಮನನ್ನು ಪ್ರಶ್ನಿಸಿದ. "ತಾವೇಕೆ ಹೀಗೆ? ಈ ರೀತಿಯಾಗಿ ಬೆಳೆಯಲು ಕಾರಣಗಳೇನು?" ತಮ್ಮ ಉತ್ತರಿಸಿದ- "ನಾನೇಕೆ ಹೀಗೆ? ನಾನು ಹೀಗಿರದೆ ಮತ್ತೆ ಹೇಗೆ ಇರಬೇಕು? ನಾನು ಹೀಗಿರಲು ನನ್ನಪ್ಪ ಕಾರಣ. ನನ್ನ ತಂದೆ ಒಬ್ಬ ಮದ್ಯ ವ್ಯಸನಿ. ಪ್ರತಿದಿನ ಬಂದು ನನ್ನ ತಾಯಿಗೆ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಇದನ್ನೇ ನೋಡಿ ನಾನು ಬೆಳೆದವ. ಅದನ್ನೇ ಉಂಡು ಅದೇ ಆಗಿರುವೆ ಅಷ್ಟೆ. ನನ್ನ ತಂದೆ ನನಗೊಬ್ಬ ಆದರ್ಶ." ಪತ್ರಕರ್ತನಿಗೆ ಆಶ್ಚರ್ಯವಾಯಿತು. ತಂದೆ ಹೀಗೆ. ಆದರೆ ಮಕ್ಕಳಿಬ್ಬರು ತದ್ವಿರುದ್ಧ. ಪತ್ರಕರ್ತ ಅಣ್ಣನ ಸಂದರ್ಶನ ಮಾಡಿದ. ಅಣ್ಣನನ್ನು ಪ್ರಶ್ನಿಸಿದ. "ತಾವೇಕೆ ಹೀಗೆ? ಈ ರೀತಿಯಾಗಿ ಬೆಳೆಯಲು ಕಾರಣಗಳೇನು? ನಿಮ್ಮ ತಮ್ಮ ನೋಡಿದರೆ ಹಾಗೆ. ನಿಮ್ಮ ತಂದೆ ಒಬ್ಬ ಮದ್ಯವ್ಯಸನಿಯೆಂದು ಕೇಳ್ಪಟ್ಟೆ." ಅಣ್ಣ ಉತ್ತರಿಸಿದ. "ಹೌದು. ನೀವು ಕೇಳಿದ್ದು ಸರಿ. ಆಶ್ಚರ್ಯಪಡಬೇಡಿ, ಸಂದೇಹಿಸಬೇಡಿ. ನಮ್ಮಿಬ್ಬರ ತಂದೆ ಒಬ್ಬನೇ. ಅವನು ಮದ್ಯವ್ಯಸನಿಯೂ ಹೌದು. ಪ್ರತಿದಿನ ಬಂದು ನನ್ನ ತಾಯಿಗೆ ಹೊಡೆಯುತ್ತಿದ್ದ, ಬಡಿಯುತ್ತಿದ್ದ. ಇದನ್ನೇ ನೋಡಿ ನಾನು ಬೆಳೆದವ. ಆ ತಾಯಿಯ ನೋವನ್ನು ನೋಡಿ, ನೋಡಿ ರೋಸಿ ಹೋಗಿದ್ದೆ. ನಾನು ಮಾತ್ರ ಎಂದೆಂದಿಗೂ ಅಪ್ಪನ ಹಾಗೆ ಆಗಬಾರದೆಂದು ತೀರ್ಮಾನಿಸಿದ್ದೆ. ಅದಕ್ಕೇ ನಾನು ಹೀಗೆ. ನನ್ನಮ್ಮನ ಕಷ್ಟ ಯಾರಿಗೂ ಬರದಿರಲಿ ಎಂಬುದೇ ಆಶಯ."

ಮನದ, ಬುದ್ಧಿಯ ಬೆಳವಣಿಗೆ ಸಂಗತಿಗಳನ್ನು ಗ್ರಹಿಸುವ, ಜೀರ್ಣಿಸಿಕೊಳ್ಳುವ ರೀತಿಯಲ್ಲಿದೆ.

No comments:

Post a Comment