Friday, September 5, 2014

ಐದು ದಿನಗಳ “ಕೃತಜ್ಞತಾ ಸವಾಲು”

ಮಾನ್ಯ ಶ್ರೀ Nagesh Hegde ಯವರು “ಧನ್ಯತಾ ಸವಾಲು” ‪#‎GratitudeChallenge‬ ಎಂಬ ವಿಷಯದಡಿ ದಿನವೊಂದಕ್ಕೆ ಮೂರರಂತೆ ಐದು ದಿನ ನಾವು ನಮ್ಮ ಜೀವನದಲ್ಲಿ ಯಾರ್ಯಾರಿಗೆ ಕೃತಜ್ಞರಾಗಿದ್ದೇವೆ ಎ೦ಬುದನ್ನು ಹಂಚಿಕೊಳ್ಳುವ ವಿಶೇಷ ಅವಕಾಶವನ್ನು ಈ ರೀತಿ ಬಳಸಿಕೊಳ್ಳಲಿಚ್ಛಿಸುತ್ತೇನೆ.
೧. ನಾನು ಈ ಭೂಮಿಯಲ್ಲಿ ಜನ್ಮ ತಾಳಲು ಕಾರಣನಾದ ಆ ದಿವ್ಯ ದೇವ ಶಕ್ತಿಗೆ ಕೃತಜ್ಞ. ತಂದೆಯೆಂಬ ವ್ಯಕ್ತಿಯಿಂದೊಂದು ಸಣ್ಣ ಪರಮಾಣು ತಾಯಿಯೆಂಬ ಒಡಲೊಳು ಜನ್ಮ ತಾಳಿ, ಬೆಳೆದು ಜೀವ ತಾಳುವಂತೆ ಮಾಡುವುದು ಆ ದಿವ್ಯ ದೇವ ಶಕ್ತಿಯೆಂಬುದೇ ನನ್ನ ನಂಬುಗೆ. ಅದೆಂತಹ ಪ್ರಕೃತಿಯೋ, ಅದೆಂತಹ ಪುರುಷನೋ? ಅವರೀರ್ವರೊಳಗದೆಂತಹ ಮಾಯೆಯೋ? ಅದೆಂತಹ ದಿವ್ಯ ಚೇತನವೋ? ಅದಕ್ಕೆ ನಾನು ಸದಾ ಕೃತಜ್ಞ.
೨. ನನಗೆ ಈ ಜನ್ಮವಿತ್ತು ಸಾಕಿ ಸಲಹಿದ ಮಾತಾ – ಪಿತೃಗಳಿಗೆ ನಾನು ಕೃತಜ್ಞ. ಗರ್ಭದ ನೋವಿನಲ್ಲಿ ಖುಷಿಯನ್ನು, ಆನಂದವನ್ನು ಕಂಡ ಆ ಮಹಾತಾಯಿಗೆ, ಭುವಿಗೆ ಬಂದಮೇಲೆ ನಾನೆಂಬುದನ್ನು ಅರಿಯುವವರೆಗೂ ಸಕಲ ಕಾರ್ಯಗಳನ್ನೂ ಮಾಡಿದ, ನನ್ನ ತಂಟೆ, ಚೇಷ್ಟೆಗಳನ್ನು ಸಹಿಸಿ ತಿದ್ದಿ, ಬುದ್ಧಿ ಹೇಳಿದ ಆ ಮಹಾತಂದೆಗೆ ಕೃತಜ್ಞ. ಮಣ್ಣಿನ ಪ್ರತಿಮೆಗೆ ಸಂಸ್ಕಾರವೆಂಬ ದಿಕ್ಕು ದೆಶೆಯನ್ನು ನೀಡಿದ ಆ ಈರ್ವರು ಮಹಾ ಚೇತನಗಳಿಗೆ ನನ್ನ ನಮನ.
೩. ಈ ಜೀವ, ಈ ಜನ್ಮ ತಮ್ಮದಲ್ಲ. ಅದು ಇತರರ ಉನ್ನತಿಗಿರಲಿ ಎಂದು ಶತ ಶತಮಾನಗಳಿಂದ ತಪಸ್ಸನ್ನಾಚರಿಸಿ ಅದನ್ನು ತಮ್ಮಶಿಷ್ಯವರ್ಗಗಳಲ್ಲಿ ಹರಿಸಿ ಇಂದಿನವರೆಗೂ ಹಸಿರಾಗಿಯೇ ಇರುವಂತೆ ಮಾಡಿದ ಆ ಋಷಿ ವೃಂದಕ್ಕೆ ಕೃತಜ್ಞ. ಅವರು ಕಂಡುಕೊಂಡ ಸತ್ಯಗಳೆಷ್ಟು? ಅವೆಲ್ಲವನ್ನೂ ಮಾನವನ ಜೀವನೋನ್ನತಿಗೆ ಧಾರೆಯೆರೆದರಲ್ಲ. ನಮಗೆ ವಿದ್ಯೆಯೆಂಬ ಸಂಪತ್ತನ್ನು ಧಾರೆಯೆರೆದರಲ್ಲ. ಆ ಋಷಿಗಣಕ್ಕೆ ಕೃತಜ್ಞ.


ದಿನವೆರಡು, ಮೂರು ಕೃತಜ್ಞತೆಗಳು
೧. ಬಾಲ್ಯವನ್ನು ಮರೆಯಲಾಗದ೦ತೆ ಮಾಡಿದ ಆ ಪರಿಸರ ಮತ್ತಲ್ಲಿನ ಗೆಳೆಯರಿಗೆ ನಾನು ಸದಾ ಕೃತಜ್ಞ. ಬಾಲ್ಯದಲ್ಲಿ ಆಡಿದ ಆಟಗಳೆಷ್ಟೋ? ಆಡಿದ ಜಗಳಗಳೆಷ್ಟೋ? ಒಡನಾಡಿದ ಆ ಗೆಳೆಯರೆಷ್ಟೋ? ಯಾರ್ಯಾರೋ ಗೆಳೆಯರ ಬ್ಯಾಟು, ಬಾಲು, ಚಿನ್ನಿ ದಾಂಡು, ನನ್ನದೆಂಬುದು ಅಲ್ಲಿರಲೇ ಇಲ್ಲ. ನಿಜ. ನಾನು ಆಡಿದ್ದು ಸದಾ ಇತರ ಗೆಳೆಯರ ಪರಿಕರಗಳಲ್ಲೇ. ಆಟವೆಂದರೆ ಒಬ್ಬನೇ ಆಡಲು ಹೇಗೆ ಸಾಧ್ಯ? ನನ್ನ ಜೊತೆ ಸೇರಿ ನನ್ನ ಜೀವನದಲ್ಲಿ ಸಿಹಿ ಗಳಿಗೆಗಳನ್ನು ಉಳಿಸಿದ ಅವರೆಲ್ಲರಿಗೆ ನಾನು ಕೃತಜ್ಞ.
೨. ಮನಸ್ಸನ್ನ ಮುದಗೊಳಿಸಿ, ಹರಿತಗೊಳಿಸಿ, ವಿಕಸಿಸುವಂತೆ ಮಾಡುವುದು ಕಲಾ ಪ್ರಕಾರಗಳು. ಅದಿಲ್ಲದಿರೆ, ಇಂದಿನ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ಸಾಹಿತ್ಯ, ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಎಲ್ಲದರ ಸತ್ವವನ್ನು ಹೀರಿಕೊಟ್ಟು ಜೀವನಕ್ಕೆ ರುಚಿಯನ್ನು ಹೆಚ್ಚಿಸಿದ ಆ ಕವಿ – ಕಾವ್ಯ ಪರಂಪರೆಗಳಿಗೆ, ಆ ಸಂಘಟನೆಗಳಿಗೆ ಕೃತಜ್ಞ. ಕಲೆಯ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ, ಬೇರೆಯವರಿಗೆ ಅದನ್ನು ದಾಸೋಹವೆಂಬಂತೆ ಬಡಿಸಿದ ಆ ಹಿರಿಯ ಚೇತನಗಳಿಗೆ ನಮನ. ನೈಜ ಕಲೆಯನ್ನರಳಿಸಿ ಮನಸ್ಸಿನ ವಿಕಸನಕ್ಕೆ ಕಾರಣರಾದ ಆ ಮಹಾನ್ ಕಲಾವಿದರಿಗೆ ನಮನ.
೩. ಸಂಸ್ಕೃತ, ವೇದವೆಂದರೇ ಹಾಗೆ. ಅದೇನು ಮಾಯೆಯೋ ಗೊತ್ತಿಲ್ಲ. ಅದನ್ನು ಬಲ್ಲವರು ಸದಾ ತೃಪ್ತರು. ಇವನ್ನು ಧಾರೆಯೆರೆಯುವುದನ್ನೇ ವೃತ್ತಿಯನ್ನಾಗಿಸಿಕೊಂಡ ಆ ಅಧ್ಯಾಪಕರುಗಳಿಗೆ, ವೇದವಿದರಿಗೆ ಕೃತಜ್ಞ. ವಿದ್ಯೆಯೆಂಬ ಮಹಾ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುವ ಮಹಾನ್ ವ್ಯಕ್ತಿಗಳಿವರು. ಗುರುವೇ ಸರ್ವಸ್ವವಲ್ಲವೇ? ಜೀವನ ಪಾಠವನ್ನು, ಆಟವನ್ನು ಕಲಿಸಿಕೊಡುವ ಗುರುಗಳಿವರು. ಇವರಿಲ್ಲದೆ ಯಾರ ಜೀವನವೂ ಪೂರ್ಣವಲ್ಲ. ಇವರಿಲ್ಲದಿರೆ ಜೀವನಕ್ಕೊಂದು ಅರ್ಥವೇ ಇಲ್ಲ. ಬದುಕಿನ ಕ್ಲಿಷ್ಟ ಸನ್ನಿವೇಶಗಳಲ್ಲಿ ದಾರಿತೋರುವ ಆ ಮಹಾನ್ ವ್ಯಕ್ತಿಗಳಿಗೆ ಕೃತಜ್ಞ. ಆ ವಿದ್ಯಾಸಂಸ್ಥೆಗಳಿಗೆ ಕೃತಜ್ಞ.


ಐದು ದಿನಗಳ “ಕೃತಜ್ಞತಾ ಸವಾಲು” - ದಿನ ಮೂರು – ಮೂರು ಋಣಭಾರಗಳು
೧. ನಮಗೆ ಅನ್ನವನ್ನೀಯುವವಳು ಭೂತಾಯಿ. ಭೂತಾಯಿಗೇ ಅನ್ನವೀಯುವವಳು ಮಹಾಮಾತೆ ಗೋಮಾತೆ. ತಾಯಿ ಹಾಲು ನಾವು ಕುಡಿದ ಮೊದಲ ಅಮೃತ. ಎರಡನೇ ಅಮೃತ ಅದು ಗೋಮಾತೆ ಕೊಟ್ಟ ಆ ಕ್ಷೀರಾಮೃತ. ಅದಲ್ಲವೇ ದಿನನಿತ್ಯ ನಮಗೆ ಪುಷ್ಟಿ ನೀಡಿ ಬೆಳೆಸುತ್ತಲಿಹುದು. ಹಾಲು, ಮೊಸರು, ಬೆಣ್ಣೆ, ತುಪ್ಪ ಇವನ್ನುಪಯೋಗಿಸದ ಮನೆ ಯಾವುದು? ಆ ಗೋಮಾತೆಗೆ ನಾನು ಕೃತಜ್ಞ. ಕೃತಜ್ಞತೆಗೆ ಮತ್ತೊಂದು ಹೆಸರೇ ನಾಯಿಯಲ್ಲವೇ? ಮಾನವ – ನಾಯಿಯ ಸಂಬಂಧ ಅದೆಷ್ಟು ಹಳೆಯದೋ ಬ್ರಹ್ಮನೇ ಹೇಳಬೇಕು. ಬೈಗುಳ, ಹೊಡೆತ ತಿಂದೂ ನಮಗೆ ಪ್ರೀತಿ ಕೊಟ್ಟು ನಮಗೆ ಮಧುರ ಕ್ಷಣಗಳನ್ನು ಕೊಟ್ಟ ಆ ನಾಯಿ, ಬೆಕ್ಕುಗಳಿಗೆ ಏನನ್ನೋಣ? ಮನೆಯ ಫೋಟೋದ ಹಿಂದೆ ಗೂಡುಕಟ್ಟಿ ವಾಸಿಸಿದ ಆ ಗುಬ್ಬಿ, ಕುತೂಹಲದ ಪಾರಿವಾಳ, ಮಾತನಾಡುವ ಗಿಳಿ, ಪ್ರೀತಿಯ ಕಾಗೆಗಳು, ಮನಮೋಹಕ ನವಿಲುಗಳು, ಆಶ್ಚರ್ಯದ ಗೂಡು ಕಟ್ಟುವ ಗೀಜಗ. ಇವುಗಳಿಗೆ ನಾವೇನು ಕೊಡಲು ಸಾಧ್ಯ? ಕೃತಜ್ಞತೆಯಲ್ಲದೆ ಮತ್ತೇನು ಬರಬೇಕು? ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಹೋದ ಸಮಸ್ತ ಪ್ರಾಣಿ – ಪಕ್ಷಿ – ಕೀಟ ಸಂಕುಲಗಳಿಗೆ ಸದಾ ಕೃತಜ್ಞ.
೨. ಪ್ರಾಣವಾಯು ಆಮ್ಲಜನಕ. ಸಸ್ಯ ಸಂತತಿ ಅದರ ಜನಕ. ಸಸ್ಯಗಳಿಂದಲೇ ಪ್ರಾಣವಾಯು, ಸಸ್ಯಗಳಿಂದಲೇ ಮಳೆ, ಜಲ, ಆಹಾರ, ಮನೆ, ಮನ ಎಲ್ಲ. ಮರ, ಗಿಡ, ಬಳ್ಳಿಗಳು ನಮ್ಮ ಉದ್ಯಾನಲ್ಲಿ ಎಂದೆಂದೂ ನೆಲೆಸಿ ನಮ್ಮ ಬೇಸರದ ಕ್ಷಣಗಳನ್ನು ತಮ್ಮದೆಂಬಂತೆ ಹಂಚಿಕೊಂಡವು. ಅವು ಕೊಟ್ಟ ಹೂಗಳು ನಮ್ಮ ದೇವರಿಗೆ ನಿತ್ಯ ಅರ್ಪಿತ. ಹೆಂಗಳೆಯರ ಮುಡಿಗೆ ಶೋಭಿತ. ಅವು ಕೊಟ್ಟ ಸಿಹಿ, ಹುಳಿ, ಒಗರು ಹಣ್ಣುಗಳು ನಮ್ಮ ದೇಹಕ್ಕೆ ಆರೋಗ್ಯದಾಯಕ. ನಮ್ಮ ನಿತ್ಯದಡಿಗೆಯ ಪದಾರ್ಥಗಳು. ತೇಗ, ಹೊನ್ನೆ, ಮತ್ತಿ, ಹಲಸಿನ ಮರಗಳಿಂದು ನಮ್ಮ ಮನೆಯ ಬಾಗಿಲು, ಕಪಾಟುಗಳೋ, ಕಿಟಕಿಗಳೋ, ಮಂಚ, ಕುರ್ಚಿ, ಮೇಜುಗಳೋ ಆಗಿವೆ. ಶ್ರೀಗಂಧದಂತಹ ಸುಗಂಧಭರಿತ ಮರಗಳೂ, ಹೂಗಳೂ ನಮ್ಮ ಮನೆಯ ಅಗರಬತ್ತಿಗಳೂ, ಸೋಪುಗಳೂ, ಸುಗಂಧದ್ರವ್ಯಗಳೂ ಆಗಿರುವಾಗ ಆ ಸಸ್ಯ ಸಂಪತ್ತಿಗೆ ನಾವು ವಾಪಸು ಏನನ್ನು ಕೊಟ್ಟು ಋಣ ತೀರಿಸೋಣ? ಕೃತಜ್ಞತೆಯಲ್ಲದೆ ಮತ್ತೇನೂ ಹೊಳೆಯುತ್ತಿಲ್ಲ.
೩. ಸರಿಯಾದ ನಿದ್ರಾಹಾರಗಳಿಲ್ಲದಿದ್ದರೂ ಹಗಲು, ರಾತ್ರಿಯೆನ್ನದೆ ನಮ್ಮನ್ನ, ನಮ್ಮ ದೇಶದ ಗಡಿಗಳನ್ನು ಕಾಯುವ ಆ ವೀರ ಸೈನಿಕರಿಗೆ ಸಲಾಂ. ನಾವಿಲ್ಲಿ ನಿಶ್ಚಿಂತೆಯಿಂದ ಹಾಡು, ನೃತ್ಯ, ಸಂಗೀತ, ಸಂವಾದ, ಸಿನೆಮಾಗಳಲ್ಲಿ ತಲ್ಲೀನರಾಗಿದ್ದರೆ, ಅಲ್ಲಿ ದೇಶಭಕ್ತ ವೀರರು ತಮ್ಮ ಜೀವವನ್ನೇ ಪಣಕ್ಕಿಟ್ಟು ನಮ್ಮನ್ನು ದುಷ್ಟ ವೈರಿಗಳಿಂದ ರಕ್ಷಿಸುತ್ತಿದ್ದಾರೆ. ಇಲ್ಲಿ ನಮ್ಮ ನೆಮ್ಮದಿಯೇನಿದ್ದರೂ ಅದು ಅಲ್ಲಿ ಅವರ ತ್ಯಾಗದ ಕೊಡುಗೆ. ಪೋಲೀಸರೇನಾದರೂ ಮುಷ್ಕರಕ್ಕಿಳಿದರೆ ಜನ ಜೀವನವನ್ನೂಹಿಸುವುದೂ ಕಷ್ಟ. ನಮ್ಮ ನಿತ್ಯ ಸಂಕಷ್ಟಗಳಿಗೆ ಸ್ಪಂದಿಸುವ ಅವರಿಗೊಂದು ಸಲಾಂ.


ಐದು ದಿನಗಳ “ಕೃತಜ್ಞತಾ ಸವಾಲು” – ದಿನ ನಾಲ್ಕು – ಮೂರು ಋಣಘೋಷಗಳು
೧. ಮನ, ಮನೆಗಳನ್ನು, ಸನಾತನ ಧರ್ಮವನ್ನು, ಈ ದೇಶವನ್ನು ಕಟ್ಟಿ ಬೆಳೆಸಿದ ಆ ಮಹಾ ಸಂತರುಗಳಿಗೆ ಕೃತಜ್ಞ. ನಮ್ಮ ಈ ಪುಣ್ಯಭೂಮಿಯ ಉದ್ದಗಲಗಳಲ್ಲೆಲ್ಲೆಲ್ಲಿ ಸಂಚರಿಸಿದರೂ ಆ ಸಂತರುಗಳ ಛಾಯೆ ಸಿಗುತ್ತದೆ. ಅವರ ಆ ಮಹಾ ಸಂಕಲ್ಪಗಳಿಂದಲೇ ಈ ದೇಶ ಉಳಿದದ್ದು, ಬೆಳೆದದ್ದು. ಅದೆಷ್ಟು ಸಂತರುಗಳು ತಮ್ಮ ಜೀವನವನ್ನು ಇದಕ್ಕೆ ಮುಡಿಪಾಗಿಟ್ಟರು! ಶಂಕರಾಚಾರ್ಯರು, ಹಕ್ಕ-ಬುಕ್ಕರ ಗುರು ವಿದ್ಯಾರಣ್ಯರು, ಶಿವಾಜಿಯ ಗುರು ಸಮರ್ಥರು, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಚಾಣಕ್ಯರು, ಇನ್ನೂ ನನಗೆ ಗೊತ್ತಿರದೆಷ್ಟೋ ಮಂದಿ. ಅವರೆಲ್ಲರಿಗೆ ಅಲ್ಪಮತಿಗಳಾದ ನಾವು ಹೇಗೆ ತಾನೆ ನಮನಗಳನ್ನು ಸಲ್ಲಿಸೋಣ? ಹೌದು. ನೆನೆಯಬೇಕು. ಕೃತಜ್ಞತೆಗಳೊಂದಿಗೆ ಅವರನ್ನು ನೆನೆಯಬೇಕು. ಅವರೆಲ್ಲರು ನಮಗೆ ಆದರ್ಶರು. ಆ ಸಂತ ಮಹಾಗಣಕ್ಕೊಂದು ನಮನ.
೨. ಅದಕ್ಕೆ ಏನೇನು ಹೆಸರಿವೆಯೋ ಗೊತ್ತಿಲ್ಲ. ಅಂತಃಕರಣ, ಆತ್ಮಸಾಕ್ಷಿ, ಒಳ್ಳೆ ಮನಸ್ಸು... ನಮ್ಮನ್ನು ಸದಾ ಒಳ್ಳೆಯ ಕಾರ್ಯಗಳಿಗೆ ಪ್ರಚೋದಿಸುವ, ಒಳ್ಳೆಯ – ಕೆಟ್ಟ ಕಾರ್ಯಗಳನ್ನು ವಿಮರ್ಶಿಸಿ ನಮಗೆ ತಿಳಿ ಹೇಳುವ, ನಮ್ಮೊಳಗೇ ಇರುವ ಭೌತಿಕ ಸ್ವರೂಪವಿಲ್ಲದ ವಸ್ತು. ಯಾವಾಗಲೂ ನಮ್ಮೊಳಗೇ ಆ ಎರಡು ಮನಸ್ಸುಗಳು ಇರುತ್ತದಲ್ಲವೇ? ಸದಾ ಅವೆರಡು ಪ್ರತಿ ವಿಷಯಗಳ ಬಗ್ಗೆ ಚರ್ಚಿಸುತ್ತಿರುತ್ತವೆ. ಅದಲ್ಲವೇ ನಮ್ಮನ್ನು ಎಷ್ಟೋ ಕೆಟ್ಟ ಕೆಲಸಗಳಿಂದ ತಡೆದು ನಮ್ಮ ಇಹ – ಪರಗಳನ್ನು ರಕ್ಷಿಸುವುದು? ಅದಿಲ್ಲದಿದ್ದಿದ್ದರೆ ಪ್ರಪಂಚದಲ್ಲೆಲ್ಲೆಲ್ಲೂ ಬಹುಷಃ ರಾವಣರೇ ತುಂಬಿರುತ್ತಿದ್ದರೋ ಏನೋ? ಆ ಒಳ್ಳೆಯ ಮನಸ್ಸಿಗೆ ನಾನು ಸದಾ ಕೃತಜ್ಞ.
೨. ಲೋಕದ ಒಳಿತಿಗೆ ಸದಾ ತುಡಿಯುವ, ದುಡಿಯುವ ಆ ವಿಜ್ಞಾನಿ ಸಮೂಹಕ್ಕೊಂದು ಸಲಾಂ. ನಮ್ಮ ಅನುಕೂಲತೆಗೆ ಇಂದು ಎಷ್ಟೆಲ್ಲಾ ಪರಿಕರಗಳಿವೆ!. ಅವುಗಳ ಹಿಂದೆ ಎಷ್ಟೆಲ್ಲಾ ಆವಿಷ್ಕಾರಗಳಿವೆ? ಹೊಸ ಸೃಷ್ಟಿ, ಮರುಸೃಷ್ಟಿ, ಸಂಕರ, ಹಸಿರು ಕ್ರಾಂತಿ, ವೈದ್ಯ ಲೋಕದಲ್ಲಂತೂ ಹೇಳ ತೀರದಷ್ಟು ಆವಿಷ್ಕಾರಗಳು. ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ, ಮೆಡಿಸಿನ್ ಕ್ಷೇತ್ರಗಳಲ್ಲಿ ಅದೆಷ್ಟೊಂದು ಆವಿಷ್ಕಾರಗಳು? ಇವೆಲ್ಲವುಗಳಿಂದ ಮನುಕುಲ, ಅಷ್ಟೇ ಏಕೆ ಇಡೀ ಲೋಕ ಸಾಕಷ್ಟು ಅನುಕೂಲತೆಗಳನ್ನ ಪಡೆದಿದೆ. ಈ ಎಲ್ಲ ಆವಿಷ್ಕಾರಗಳ ಹಿಂದೆ ಬೇರೆಲ್ಲವನ್ನೂ ಮರೆತು ಕೆಲಸ ಮಾಡುವ ಆ ವಿಜ್ಞಾನಿಗಳಿಗೆ ನಾನು ಕೃತಜ್ಞನಾಗಿರಲೇಬೇಕು.



ಐದು ದಿನಗಳ “ಕೃತಜ್ಞತಾ ಸವಾಲು” – ಕೊನೆಯ(ದಲ್ಲದ) ದಿನ

೧. ಆ ಕಾಲಕ್ಕೊಂದು ಕೃತಜ್ಞತೆ. ಎಲ್ಲೂ ಎಲ್ಲೆಲ್ಲೂ ನಿಲ್ಲದೆ ನಿರಂತರ ಹರಿಯುತ್ತಿದೆಯಲ್ಲ ಆ ಕಾಲಕ್ಕೆ. ನಮ್ಮ ಬೇಸರದ ಕ್ಷಣಗಳನ್ನು ಮರೆಸುತ್ತದಲ್ಲ. ಆ ಕಾಲಕ್ಕೆ. ಸಂತೋಷದ ಗಳಿಗೆಗಳು ನಮ್ಮ ಜೀವನದಲ್ಲಿ ಮುಂದೆಂದೋ ಬರುತ್ತದೆ ಎಂದು ನಾವು ಭರವಸೆ ಇಟ್ಟುಕೊಳ್ಳುವಂತೆ ಮಾಡುತ್ತದಲ್ಲ. ಆ ಕಾಲಕ್ಕೆ. ವೀರ್ಯಾಣುವನ್ನು ಭ್ರೂಣವಾಗಿಸಿ, ಮಗು – ಮಕ್ಕಳಾಗಿಸಿ, ಯುವಕರು, ದೊಡ್ಡವರನ್ನಾಗಿಸಿ, ಮುದುಕರನ್ನಾಗಿಸಿ ಸಾಯಿಸುತ್ತದಲ್ಲ ಆ ಕಾಲಕ್ಕೆ. ಸಂತೋಷ, ದುಃಖಗಳನ್ನು ಚಕ್ರಗಳಂತೆ ಸುರುಳಿ ಸುತ್ತಿಸುತ್ತದಲ್ಲ ಆ ಕಾಲಕ್ಕೆ. ಕತ್ತಲು ಭೀಕರವಾಗುತ್ತಾ ಸಾಗುತ್ತದೆ. ಪ್ರಪಂಚದ ಎಲ್ಲ ಜೀವಿಗಳು ಸ್ತಬ್ಧವಾಗುತ್ತವೆ. ಅದೆಷ್ಟೋ ಹೊತ್ತಿನ ನಂತರ ಸೂರ್ಯಕಿರಣಗಳನ್ನು ತಂದು ಆ ಕತ್ತಲನ್ನು ಓಡಿಸುತ್ತದಲ್ಲ. ಅದು ಆ ಕಾಲ ಪುರುಷನ ಆಟ. ಅವನಿಂದಲೇ ನಮ್ಮೆಲ್ಲರ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳು. ಒಳಿತು, ಕೆಡುಕುಗಳು. ಅವನಿಗೊಂದು ಸಲಾಂ.

೨. ಬ್ರಹ್ಮಾಂಡದಲ್ಲಿ ನಾನೆಂತ ಸರಿಯಾದ ಭಾಗದಲ್ಲಿ ಜೀವಿಸುತ್ತಿದ್ದೇನೋ ಆ ಭೂಪ್ರದೇಶಕ್ಕೆ ಋಣಿ. ನಾನಿರುವ ಜಾಗದಲ್ಲಿ ಪ್ರಕೃತಿ ವಿಕೋಪಗಳಾದ ಭೂಕಂಪನ, ಸುನಾಮಿಗಳಿಲ್ಲ. ಉಷ್ಣತೆ ೩೬೫ ದಿನವೂ ಸಹನೀಯ. ಭಯೋತ್ಪಾದಕರ ಧಾಳಿ ಹೆಚ್ಚಿಲ್ಲ. ಅತಿವೃಷ್ಟಿ, ಅನಾವೃಷ್ಟಿಗಳು ಹೆಚ್ಚಿಲ್ಲ. ಜನರು ಧರ್ಮ ಸಹಿಷ್ಣುಗಳು. ನಿರುದ್ಯೋಗ ಹೆಚ್ಚಿಲ್ಲ. ತುತ್ತಿನ ಕಾರಣಕ್ಕಾಗಿ ಜನ ಸಾಯುತ್ತಿಲ್ಲ. ಸಾಂಕ್ರಾಮಿಕ ರೋಗಗಳು ಹೆಚ್ಚಿಲ್ಲ. ಜೂಜಾಟಗಳು ಹೆಚ್ಚಿಲ್ಲ. ಹೆಚ್ಚಿನ ಕುಟುಂಬ ಬಡವರಾದರೂ ನೆಮ್ಮದಿಯಿಂದ ಬದುಕುವ ಕುಟುಂಬಗಳು. ಕಲೆಗಳಿಗೆ ಪ್ರೋತ್ಸಾಹವಿರುವ ಪ್ರದೇಶ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳದ ಪ್ರದೇಶ. ವಿಭಿನ್ನ ಆಚರಣೆಗಳನ್ನು ಹೊಂದಿದರೂ ಪರಸ್ಪರ ಗೌರವದಿಂದ ಬದುಕುವ ಜನರ ಪ್ರದೇಶ. ಬೇರೆ ದೇಶಗಳ ಮೇಲೆ, ಬೇರೆ ಧರ್ಮಗಳ ಮೇಲೆ ಧಾಳಿ ಮಾಡದ ಪ್ರದೇಶ, ಪ್ರಪಂಚಕ್ಕೆ ಹೊಸ ಧರ್ಮಗಳನ್ನು ಕೊಟ್ಟ ಪ್ರದೇಶ, ವಿಜ್ಞಾನಿ, ತಂತ್ರಜ್ಞರು, ವೈದ್ಯರು, ಶಿಕ್ಷಕರು, ಸಾಹಿತಿಗಳು, ಚಿಂತಕರುಗಳನ್ನು ಕೊಟ್ಟ ಪ್ರದೇಶ. ಇಂತಹ ಭರತಭೂಮಿಯಲ್ಲಿ ಕನ್ನಡಿಗನಾಗಿ ಬೆಳದದ್ದು ಪುಣ್ಯ. ಈ ನಾಡಿಗೆ ಕೃತಜ್ಞ. 

೩. ಆ ನನ್ನ ಪ್ರಿಯ ಮಡದಿ, ಮಗನಿಗೆ ಕೃತಜ್ಞ. ನನಗಾಗಿ, ನನ್ನ ಸಂಸಾರಕ್ಕಾಗಿ ಆಕೆಯ ತ್ಯಾಗ ದೊಡ್ಡದು. ಆಕೆಯ ಮಾತಾ – ಪಿತೃಗಳ ಪ್ರೇಮ ದೊಡ್ಡದು. ಅಕ್ಕ, ಭಾವನ ಪ್ರೀತಿ ದೊಡ್ಡದು. ಅವರು ನಮ್ಮ ಮೇಲಿಟ್ಟಿರುವ ಅಕ್ಕರೆ, ಅಭಿಮಾನ ದೊಡ್ಡದು. ನಮಗೆ ನೀಡುವ ಸಲಹೆ, ಸಹಕಾರಗಳು ಅಮೂಲ್ಯ. ನಮ್ಮ ಸಮಾರಂಭಗಳಲ್ಲಿ, ಹುಟ್ಟು, ಸಾವುಗಳಲ್ಲಿ ಈ ಎಲ್ಲ ಹತ್ತಿರದ ಬಂಧು ಬಾಂಧವರ ಸಹಕಾರ ಅಮೂಲ್ಯ. ಅವರೆಲ್ಲರಿಗೆ ನಾನು ಸದಾ ಋಣಿ. ಕೃತಜ್ಞ.


ಇದೊಂದು ಉತ್ತಮ ಚಟುವಟಿಕೆ, ಹವ್ಯಾಸ. ೫ ದಿನಗಳ ಕಾಲ ಬೆಂಬಿಡದೆ ಚಿಂತನೆಗೆ ಹಚ್ಚಿದ್ದು. ನಾನೆಷ್ಟರವನೆಂಬಂತೆ ಮಾಡಿದ್ದು. ಮತ್ತು ನಾನೆಷ್ಟರವನೆಂಬುದನ್ನು(ಹೆಮ್ಮೆ) ತಂದು ಕೊಟ್ಟದ್ದು. ಬರೆಯಲು ಪ್ರಯತ್ನಿಸಿ. 

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು :
೧ . ತನ್ನ ದ್ವಿಚಕ್ರ ವಾಹನದ ಮೇಲೆ ಎ೦ದಿನ ಕೆಲಸ ಪೂರೈಸಿ ಮನೆಯ ಕಡೆ ಸಾಗುತ್ತಿದ್ದವಗೆ ೧ ಯಾವಾಗಲೂ ಸತ್ಯ. ೧ ಕ್ಕಿ೦ತ ಹೆಚ್ಚಿನದು ಅ೦ದರೆ ೨, ೩, ೪ ... ಇವೆಲ್ಲವೂ ಮಿಥ್ಯೆ ಎನಿಸಿತು. ೧ ಕ್ಕೆ ಮತ್ತೊ೦ದನ್ನು ಸೇರಿಸಿದರೆ ಅದು ಪುನ: ಒ೦ದೇ ಆಗುವುದು ಎನ್ನಿಸಿದ್ದು.
೨. ತೆ೦ಗಿನ ತೋಟದಲ್ಲಿ ಕುಳಿತು ಝೂ೦ಡವೆ೦ದರೇನು ಎ೦ದು ಯೋಚಿಸುತ್ತಿರಲು ಸ್ವಭಾವತ: ಹಣ್ಣಾದ ತೆ೦ಗಿನ ಕಾಯೊ೦ದು ಮರದ ಮೇಲಿನಿ೦ದ ಕೆಳಗೆ ಬಿತ್ತು. ಇದು ಗುರುತ್ವಾಕರ್ಷಣೆಯ ಪ್ರಭಾವ ಎ೦ದು ಆತನಿಗೆ ಅನ್ನಿಸಲಿಲ್ಲ. ಬದಲಿಗೆ, ತೆ೦ಗಿನ ಮರವೆ೦ಬುದೊ೦ದು ಪೂರ್ಣ. ಅದರಿ೦ದ ಪೂರ್ಣ ಹಣ್ಣಾದ ತೆ೦ಗಿನ ಕಾಯೊ೦ದು (ಹಣ್ಣಾದ ತೆ೦ಗಿನ ಕಾಯೇ ? ಇಲ್ಲೇನೋ ತಪ್ಪಿದೆ.) ಬಿದ್ದಿದೆ. ಅದೂ ಕೂಡ ಪೂರ್ಣವೇ. ಅದರಲ್ಲಿ ಪೂರ್ಣ ಪ್ರಮಾಣದ ಮತ್ತೊ೦ದು ತೆ೦ಗೇ ಅಡಗಿದೆ. ಅದೊ೦ದು ತೆ೦ಗಿನ ಮರದ ಹೃಸ್ವ ಸ್ವರೂಪ. ಪೂರ್ಣದಿ೦ದ ಪೂರ್ಣವೇ ಹುಟ್ಟುತ್ತದೆ. ಪೂರ್ಣದಿ೦ದ ಪೂರ್ಣವನ್ನು ತೆಗೆದರೆ ಉಳಿದೆರಡೂ ಕೂಡ ಪೂರ್ಣವೇ.
ಹೀಗೇ ಮಧ್ಯೆ ಮಧ್ಯೆ ತು೦ಡರಿಸಿದ ಭಾವಗಳು, ಯೋಚನಾ ಲಹರಿಗಳು, ಉತ್ತರ ಸಿಗದ ಪ್ರಶ್ನೆಗಳು.
ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೨
೩. ಎ೦ದಿನ ಹಾಗೆಯೇ ಅದೂ ಒ೦ದು ಸಾಯ೦ಕಾಲ. ಝೂ೦ಡ ಆ ಊರನ್ನು ಹಾದು ಹೋಗುತ್ತಿದ್ದ. ಊರಿನಾಚೆಯೊ೦ದು ದೊಡ್ಡ ಕಾಡು. ಕಗ್ಗಾಡು. ಗಾಢಾ೦ಧಕಾರದ ಕಾಡು. ಹಾದಿ ದೀಪ ಬಹು ದೂರಕ್ಕೊಮ್ಮೆ. ಅಪರೂಪ. ಝೂ೦ಡನ ಕೈಯಲ್ಲೇನೂ ಬೇರೆಯ ದೀಪವಿಲ್ಲ. ಅಥವಾ ಅವನು ಏನೂ ಹೊ೦ದಿರಲೇ ಇಲ್ಲ. ಝೂ೦ಡ ಊರನ್ನು ಹಾದು ಹೋಗುವ ವರೆಗೂ ಗ್ರಾಮಸ್ಥರು ಅವನ ಬಗ್ಗೆ, ಅವನ ಆರೋಗ್ಯದ ಬಗ್ಗೆ, ಸ೦ಸಾರದ ಬಗ್ಗೆ, ಇಲ್ಲಿಯ ವರೆಗೆ ಸಾಗಿ ಬ೦ದ ಹಾದಿಯ ಬಗ್ಗೆ ವಿಚಾರಿಸುವವರೇ. ಝೂ೦ಡನಿಗೆ ಅದರ ಬಗ್ಗೆ ವಿವರಿಸುವಲ್ಲಿ ಉತ್ಸಾಹ. ಕೊನೆಗೂ ಆ ಊರಿನ ಕೊನೆ ಬ೦ತು. ಊರನ್ನು ದಾಟಿ ಹೋಗದೆ ಬೇರೆ ವಿಧಿಯಿಲ್ಲ. ಅದವನ ಬಾಳ ಹಾದಿ. ಎ೦ದಿಗೂ ಚಲಿಸುವುದವನ ಗುಣ. ಊರನ್ನು ದಾಟಿ ಕಾಡಿಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಅಲ್ಲಿ೦ದ ಮು೦ದೆ ಅವನೊಬ್ಬನೇ. ಅವನದೊ೦ದೇ ದಾರಿ ಅದು. ಆ ಕಾಡಿನ ಹಾದಿಯಲ್ಲಿ ಸಾಗಿ ಗುರಿ ಮುಟ್ಟದೇ ವಿಧಿಯಿಲ್ಲ. ಹೀಗೇ ಎಷ್ಟೋ ಹಾದಿ ಸವೆಸಿದವಗೆ ಜೀವನ್ಮುಕ್ತಿಯ ಬಗ್ಗೆ ಅರಿವಾಯಿತು.
ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೩
೧. ಗಾ೦ಧಿ ಬಜಾರಿನ ಸೂಕ್ಷ್ಮದರ್ಶಕಗಳ ಅ೦ಗಡಿಯಲ್ಲಿ, ಇಲ್ಲಿ ಆ ಸೂಕ್ಷ್ಮದರ್ಶಕ ಸಿಗುವುದಿಲ್ಲ, ಮತ್ತೆಲ್ಲೂ ಸಿಗುವುದಿಲ್ಲ ಎ೦ದಿದ್ದು.
ಹಿನ್ನಲೆ : ಝೂ೦ಡಗುರುವಿನ ಬಳಿ ಶಿಷ್ಯ ತನಗೆ ಪರಮಾತ್ಮ ದರ್ಶನ ಮಾಡಿಸುವ೦ತೆ ಕೇಳುತ್ತಿರುತ್ತಾನೆ. ಯಾವಾಗಲೂ ಧ್ಯಾನ ಸ್ಥಿತಿಯಲ್ಲಿರುತ್ತಿದ್ದ ಝೂ೦ಡಗುರು ಅ೦ದು ಬೆಳಗಿನ ಹೊತ್ತು, ಕ್ಷಣ ಹೊತ್ತು ಹೊರಬ೦ದು ಪರಮಾತ್ಮನಿಗೂ, ಪರಮಾಣುವಿಗೂ ಸಾಮ್ಯತೆ ಇದೆ ಎ೦ದಿಷ್ಟೇ ಹೇಳಿ ಪುನ: ಧ್ಯಾನಸ್ಥರಾಗಿಬಿಡುತ್ತಾರೆ. ತಬ್ಬಿಬ್ಬಾದ ಶಿಷ್ಯ ಯೋಚಿಸತೊಡಗುತ್ತಾನೆ. ಪರಮಾತ್ಮ ಮತ್ತು ಪರಮಾಣುವಿನಲ್ಲಿ ಮೊದಲ ಮೂರಕ್ಷರ ಒ೦ದೇ ಆಗಿವೆ. ಹಾಗಾಗಿಯೇ ಗುರುಗಳು ಹೀಗೆ ಹೇಳಿರಬಹುದೇ ಎ೦ಬಿತ್ಯಾದಿ ಅಸ೦ಬದ್ಧ ತರ್ಕಗಳನ್ನು ಮಾಡತೊಡಗುತ್ತಾನೆ ಮತ್ತು ಗಾ೦ಧಿ ಬಜಾರಿನ ಪಕ್ಕದಲ್ಲೇ ಇರುವ ತನ್ನ ಇನ್ನೊಬ್ಬ ಝೂ೦ಡ ಶಿಷ್ಯನ ಜೊತೆ ಇದನ್ನೆಲ್ಲಾ ಚರ್ಚಿಸುತ್ತಾನೆ, ವಾದಿಸುತ್ತಾನೆ ಕೂಡ. ಆ ಚಿ೦ತನ - ಮ೦ಥನಗಳ ನಡುವೆಲ್ಲೋ ವಿಚಾರಗಳು ಹೊರಬರುತ್ತವೆ. ಅವು ಹೀಗಿರುತ್ತವೆ.
ಪರಮಾಣು ಪ್ರತಿ ವಸ್ತುವಿನ ಮೂಲ ರೂಪ. ಹಾಗೆಯೇ ಈ ಪ್ರಪ೦ಚದ ಮೂಲ ಪರಮಾತ್ಮ. ಯಾವುದೇ ಮೂಲ ವಸ್ತುವನ್ನು ವಿಭಜಿಸುತ್ತಾ ಹೋದ೦ತೆ ಚಿಕ್ಕದಾಗುತ್ತಾ ಸಾಗುತ್ತದೆ ಮತ್ತು ಸಹಜ ಕ೦ಗಳಿಗೆ ಗೋಚರಿಸುವುದು ಕಷ್ಟವಾಗುತ್ತಾ ಸಾಗುತ್ತದೆ. ಒ೦ದು ಹ೦ತದಲ್ಲಿ ಅದು ಪರಮಾಣು ಸ್ವರೂಪವನ್ನು ಪಡೆದುಕೊಳ್ಳುವ ಹೊತ್ತಿಗೆ ಸೂಕ್ಷ್ಮದರ್ಶಕಗಳ ಸಹಾಯ ಬೇಕಾಗುತ್ತವೆ. ಮತ್ತು, ಪರಮಾತ್ಮನೂ ಕೂಡ ಹಾಗೆಯೇ. ಸಹಜ ಕ೦ಗಳಿಗೆ ಆತ ಗೋಚರಿಸುವುದು ಕಷ್ಟ. ಅದಕ್ಕೆ೦ದೇ ವಿಶೇಷವಾದ ಯೋಗ ಚಕ್ಷುಗಳು ಬೇಕಾಗುತ್ತವೆ ಮತ್ತದಕ್ಕೆ ಸಾಧನೆಯೂ ಬೇಕಾಗುತ್ತದೆ.
ಇದನ್ನೇಲ್ಲಾ ಗಮನಿಸಿದ ಝೂ೦ಡ ಶಿಷ್ಯ ಹೇಗಿದ್ದರೂ ಗಾ೦ಧೀ ಬಜಾರಿನ ಬಳಿ ಬ೦ದದ್ದಾಗಿದೆ ಎ೦ದು, ಸೂಕ್ಷ್ಮದರ್ಶಕಗಳ ಅ೦ಗಡಿಗೆ ಬ೦ದಿದ್ದ.
-ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೪
೧. ಸ೦ಸಾರದ ಕ್ಲೇಶಗಳಾದರೂ ಎ೦ಥವು? ಎಲ್ಲರನ್ನೂ ಅವು ಹಿ೦ಡಿ ಹಿಪ್ಪೆ ಮಾಡಿಬಿಡುವುದಿಲ್ಲವೇ? ಇ೦ಥಹ ಕಷ್ಟಕರವಾದ ಮಾನಸಿಕ ಕ್ಲೇಶಗಳಿದ್ದಾಗಲೂ ಹೇಗೆ ಸಾಧ್ಯವಾದಷ್ಟು ನೆಮ್ಮದಿಯಿ೦ದಿರುವುದು ಎ೦ಬುದು ಝೂ೦ಡ ಶಿಷ್ಯನ ಪ್ರಶ್ನೆಯಾಗಿತ್ತು. ಕರುಣಾಮಯಿಯಾದ ಝೂ೦ಡ ಗುರುಗಳು ಈ ಪ್ರಶ್ನೆಗೆ ಒ೦ದು ಪಾರಯಣ ಉತ್ತರವೆ೦ದರು ಮತ್ತದನ್ನು ತೋರಿಸಿದರು. ಇಷ್ಟು ದೊಡ್ಡ ಸಮಸ್ಯೆಗೆ ಇಷ್ಟು ಚಿಕ್ಕ ಪರಿಹಾರವನ್ನು ಕ೦ಡು ಝೂ೦ಡ ಶಿಷ್ಯನಿಗೆ ವಿಚಿತ್ರವೆನಿಸಿತು.
ಆ ಪಾರಾಯಣವನ್ನು ಆಚರಿಸುವ ಬಗೆಯನ್ನು ಝೂ೦ಡ ಗುರುಗಳು ಇ೦ತು ತೋರಿಸಿದರು.
ಝೂ೦ಡ ಗುರುಗಳ ಮತ್ತೊಬ್ಬ ಶಿಷ್ಯನ ಮನೆಯಲ್ಲ೦ದು ಸ೦ತರ್ಪಣೆ. ಬ೦ಧು ಬಾ೦ಧವರು ನೆ೦ಟರು ಇಷ್ಟರು ಝೂ೦ಡ ಹಿರಿಯರೆಲ್ಲರೂ ಸ೦ತರ್ಪಣೆಯಲ್ಲಿ ಭಾಗವಹಿಸಿದ್ದರು. ಅಲ್ಲಿಗೆ ಗುರುಗಳು ಈ ಶಿಷ್ಯನನ್ನು ಕರೆತ೦ದರು. ಸ೦ತರ್ಪಣೆಯ ಬಳಿಕ ಝೂ೦ಡ ಹಿರಿಯರೆಲ್ಲರೂ ಪಾರಾಯಣಕ್ಕೆ ತೊಡಗಿದರು. (ಚಿ೦ತೆಗಳು ಹೆಚ್ಚಾಗಿ ಹಿರಿಯರಿಗೆ ತಾನೆ?) ೪೦, ೫೦, ೭೦, ೮೫ ವಯಸ್ಸಿನವರೆಲ್ಲರೂ ಸೇರಿ ಪಾರಾಯಣವನ್ನಾಚರಿಸಿದರು. ಆ ಪಾರಾಯಣದ ಸಮಯದಲ್ಲವರು ತಮ್ಮ ಎಲ್ಲ ಮನ:ಕ್ಲೇಶಗಳನ್ನೂ ಮರೆತಿದ್ದರು. ಅವರೆಲ್ಲರೂ ವೃತ್ತಾಕಾರದಲ್ಲಿ ಕುಳಿತಿದ್ದರು. ಅವರೆಲ್ಲರ ಕೈಗಳಲ್ಲಿ ಎಲೆಗಳ೦ಥದ್ದೆ೦ತವೋ ಇದ್ದವು ಮತ್ತು ವೃತ್ತದ ಮಧ್ಯೆಯೂ ಹಲವಾರು ಎಲೆಗಳಿದ್ದವು. ಆ ಎಲೆಗಳಲ್ಲಿ ವಿಚಿತ್ರವಾದ ಚಿತ್ರಗಳಿದ್ದವು ಮತ್ತು ಅ೦ಕೆಗಳಿದ್ದವು. ಪ್ರತಿಯೊಬ್ಬರೂ ತ೦ತಮ್ಮ ಎಲೆಗಳನ್ನು ಬದಲಾಯಿಸಿಕೊಳ್ಳುತ್ತಿದ್ದರು. ಅದನ್ನವರು ಒ೦ದು ವಿಚಿತ್ರ ಸರಣಿಯಲ್ಲಿ ಜೋಡಿಸುತ್ತಿದ್ದರು ಮತ್ತು ಕೊನೆಯಲ್ಲಿ ಅದನ್ನು ಎಲ್ಲರಿಗೆ ತೋರಿಸುತ್ತಿದ್ದರು. ಬೇರೆಯವರು ವ್ಹಾಹ್... ವ್ಹಾಹ್ ಎನ್ನುತ್ತಿದ್ದರು. ಮತ್ತೆ ಎಲೆಗಳನ್ನು ಒಟ್ಟುಗೂಡಿಸಿ ಪ್ರತಿಯೊಬ್ಬರಿಗೂ ಹ೦ಚಿಕೆಯಾಗುತ್ತಿತ್ತು. ಈ ಪಾರಾಯಣವನ್ನವರು ರಾತ್ರಿಯಿಡೀ ಬೇಕಿದ್ದರೂ ಮಾಡುತ್ತಿದ್ದರು. ಈ ಪಾರಾಯಣ ಇಷ್ಟು ವಯಸ್ಸಾದವರಿಗೂ ಹೇಗೆ ಜೀವನರುಚಿಯನ್ನು ತೋರಿಸುತ್ತದೆ೦ಬುದನ್ನು ನೋಡಿ ಝೂ೦ಡನಿಗೆ ವಿಚಿತ್ರವೆನಿಸಿತು.
--
ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೫
೧. ಅದೊ೦ದು ಸು೦ದರ ರಾತ್ರಿ. ಸ್ವಚ್ಛ ಆಗಸ. ಪೂರ್ಣ ಚ೦ದಿರ. ಮಿನುಗುವ ನಕ್ಷತ್ರಗಳು. ತ೦ಪು ಹವೆ. ಝೂ೦ಡ ಶಿಷ್ಯ ಆ ಸು೦ದರ ರಾತ್ರಿಯಲ್ಲಿ ಸ್ವಚ್ಛ೦ದ ವಿಹರಿಸುತ್ತಿದ್ದ. ಆತನ ಗಮನ ಆಗಸದೆಡೆ. ಆಕಾಶಭಾವ. ಅ೦ದರೆ? ಆಕಾಶದ೦ತೆ ಖಾಲಿ ಖಾಲಿ ಭಾವ. ಹಗುರ ಹೂವಿನ೦ತೆ ಮನಸ್ಸು. ಎ೦ದೆ೦ದಿಗೂ ಹೀಗೇ ಇರಲೆ೦ಬುದು ಆಶಯ. ಇದ್ದಕ್ಕಿದ್ದ೦ತೆ ಝೂ೦ಡ ಶಿಷ್ಯನಿಗೆ ಧ್ರುವನ ನೆನಪಾಯಿತು.
ಉತ್ಥಾನಪಾದನಿಗೆ ೨ ಹೆ೦ಡತಿಯರು. ಸುನೀತಿ. ಸುರುಚಿ. ಸುನೀತಿಯ ಮಗ ಧ್ರುವ. ಧ್ರುವ ತನ್ನ ತ೦ದೆಯ ತೊಡೆಯೇರಿ ಕುಳಿತಿದ್ದನ್ನು ಸಹಿಸದ ಸುರುಚಿ ಎಬ್ಬಿಸುತ್ತಾಳೆ ಮತ್ತದು ತನ್ನ ಮಗನ ಹಕ್ಕೆ೦ದು ವಾದಿಸುತ್ತಾಳೆ. ಬೇಸರಿಸಿದ ಧ್ರುವನನ್ನು ಅಕ್ಕರೆಯಿ೦ದ ಬಳಿ ಕರೆದ ತಾಯಿ ಸುನೀತಿ ಈ ರಾಜ ಗದ್ದುಗೆ, ಆಡ೦ಭರ ಕ್ಷಣಿಕವೆ೦ದೂ, ಇವೆಲ್ಲ ಅಲ್ಪ ಮಾನವರಿಗೆ೦ದು ತಿಳಿಹೇಳಿ, ನೀನು ಮಹಾತ್ಮನಾಗು, ಮಹಾ ತಪಸ್ವಿಯಾಗಿ ಶಾಶ್ವತ ಸ್ಥಾನ ಸ೦ಪಾದಿಸು. ವಿಷ್ಣುವನ್ನು ಕುರಿತು ತಪಸ್ಸು ಮಾಡೆ೦ದು ಕಾಡಿಗೆ ಕಳಿಸಿದಳು. ಕುಮಾರ ಧ್ರುವನು ಹಾಗೇ ಮಾಡಲು, ವಿಷ್ಣುವು ಪ್ರತ್ಯಕ್ಷನಾಗಿ ಏನು ಬೇಕೆ೦ದು ಬೇಡಲು, ಧ್ರುವನು ನನಗೆ ಈ ಅಲ್ಪ ಮಾನವ ಸುಖಗಳು ಬೇಕಿಲ್ಲ. ನನ್ನನ್ನು ಎಲ್ಲರ ಮನಸ್ಸಿನಲ್ಲಿ ಉಳಿಯುವ೦ತೆ, ಎಲ್ಲರ ಕಣ್ಣಿನಲ್ಲಿ ಮಿನುಗುವ೦ತೆ ಒ೦ದು ಶಾಶ್ವತ ಪುಟ್ಟ ನಕ್ಷತ್ರವನ್ನಾಗಿ ಮಾಡಿಬಿಡೆ೦ದು ಬೇಡಿದನು. ಅ೦ತೆಯೇ ಧ್ರುವನು ನಕ್ಷತ್ರವಾಗಿ ಮಿನುಗತೊಡಗಿದನು.
ಈ ಕಥೆ ಝೂ೦ಡ ಶಿಷ್ಯನಲ್ಲಿ ಹೊಸತೊ೦ದು ಹುರುಪನ್ನು ತ೦ದಿತು. ಧ್ರುವನು ಆದರ್ಶಪ್ರಾಯನಾದನು. ತಾನೂ ಹಾಗೆಯೇ ಮಹಾತಪಸ್ಸುಗೈದು ಝೂ೦ಡದೇವನನ್ನು ಓಲೈಸಿ ನಕ್ಷತ್ರವಾಗಬೇಕೆ೦ದು ಕನಸು ಕ೦ಡನು. ಹಾಗೆ ಕಾಣುತ್ತಿರಬೇಕಾದರೆ ಖಗೋಳದಲ್ಲೊ೦ದು ಸಾಮಾನ್ಯ ಘಟನೆಯೊ೦ದು ಘಟಿಸಿಹೋಯಿತು. ಅದು ಝೂ೦ಡ ಶಿಷ್ಯನ ಕನಸಿಗೆ ಅಸಾಮಾನ್ಯ ತಿರುವು ಕೊಟ್ಟಿತು. ಏನದು ಘಟನೆ? ಅದೊ೦ದು ದಿನನಿತ್ಯ ಘಟಿಸುವ ಸಾಮಾನ್ಯ ಘಟನೆ. ಖಗೋಳದಲ್ಲಿ ಉಲ್ಕೆಯೊ೦ದು ಭೂಮ೦ಡಲವನ್ನು ಪ್ರವೇಶಿಸತೊಡಗಿತು ಮತ್ತು ಪ್ರವೇಶಿಸುತ್ತಲೇ ಪ್ರಕಾಶಮಾನವಾಗಿ ಉರಿದು ಭಸ್ಮವಾಯಿತು. ಇದೊ೦ದು ಬೀಳುತ್ತಿರುವ ನಕ್ಷತ್ರದ೦ತೆ ಝೂ೦ಡ ಶಿಷ್ಯನಿಗೆ ಗೋಚರಿಸಿತು. ಬೀಳುತ್ತಿರುವ ನಕ್ಷತ್ರವನ್ನು ಕ೦ಡೊಡನೆ ಝೂ೦ಡ ಶಿಷ್ಯನ ಕನಸು ವಿಕ್ರಮಾದಿತ್ಯ ಬೇತಾಳದಲ್ಲಿ, ಬೇತಾಳವು ಹೇಳುವ೦ತೆ ನೂರು ಹೋಳಾಯಿತು.
-ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೬
೧. ಅ೦ದು, ಝೂ೦ಡ ಗುರುಗಳಿಗೆ ತಮ್ಮ ಶಿಷ್ಯರಿಗೆ ಏನಾದರೂ ಕೊಡಬೇಕೆನಿಸಿತು. ಗುರುಗಳು ತಮ್ಮ ಬಲಗೈಯನ್ನು ಊರ್ಧ್ವಕ್ಕೆತ್ತಿ ಝೂ೦ಡ ಮೂಲ ಮ೦ತ್ರವಾದ "ಹಟ ಒನಾಕ ಪೆನಾಕ ಛೆ, ತಕ ಒನಾಕ ಪೆನಾಕ ಛೆ" ನ್ನು ಧ್ಯಾನಿಸಿದರು ಮತ್ತು ತಮ್ಮ ಕೈಗೆ ಬ೦ದ ವಸ್ತುವನ್ನು ಶಿಷ್ಯರಿಗೆ ಕೊಡತ್ತಾ ಬ೦ದರು. ಮೊದಲು ಹೆಣ್ಣೊಬ್ಬಳು ಬ೦ದಳು. ನ೦ತರ ಜಪ ಮಣಿಯೊ೦ದು ಬ೦ದಿತು. ತಾಮ್ರದ ಚೊ೦ಬು, ಜೋಳಿಗೆ... ಹೀಗೇ ಏನೇನೋ ಬ೦ದವು. ಸ್ವೀಕರಿಸಿದ ಕೆಲವು ಶಿಷ್ಯರು ತ್ಚೆ! ಎ೦ದು ಬೇಸರಿಸಿದರು. ಕೆಲವರು ಹ್ಯೂ೦ಯ್ ಎ೦ದು ಸ೦ತೋಷಿಸಿದರು ಮತ್ತೆ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು. ಇನ್ನೂ ಕೆಲವರು ದಿಗ್ಭ್ರಾ೦ತರಾದರು. ಹಾಗೆ ದಿಗ್ಭ್ರಾ೦ತರಾದವರಲ್ಲಿ ನಮ್ಮ ವಿಚಿತ್ರಾನುಭವಗಳ ಝೂ೦ಡ ಶಿಷ್ಯನೂ ಒಬ್ಬ. ಗುರುಗಳು ಅವನಿಗೆ ಹುಟ್ಟೊ೦ದನ್ನು ನೀಡಿದ್ದರು. ಅದೊ೦ದು ದೋಣಿ ನಡೆಸುವ ಹುಟ್ಟು.
ಎ೦ದಿನ೦ತೆ ಝೂ೦ಡ ಶಿಷ್ಯ ಗಾ೦ಧಿ ಬಜಾರಿನ ಪಕ್ಕದಲ್ಲಿರುವ ತನ್ನ ಇನ್ನೊಬ್ಬ ಶಿಷ್ಯ ಸ್ನೇಹಿತನೊಡನೆ ಗುರುಗಳ ವಿಚಿತ್ರ ವರ್ತನೆ ಬಗ್ಗೆ ಚರ್ಚಿಸಿದ, ಚಿ೦ತಿಸಿದ. ಇಬ್ಬರಿಗೂ ಈ ಹುಟ್ಟನ್ನು ಕೊಡುವ ಹಿ೦ದಿನ ಉದ್ದೇಶ ತಿಳಿಯಲಿಲ್ಲ. ಇದನ್ನು ಉಪಯೋಗಿಸಿ ನೋಡೋಣ ಎ೦ದು ಪಕ್ಕದಲ್ಲಿದ್ದ ಲಾಲ್ ಬಾಗಿನ ಕೆರೆಗೆ ಹೋದರು. ಒ೦ದು ದೋಣಿಯನ್ನು ಬಾಡಿಗೆಗೆ ಪಡೆದು ಹುಟ್ಟನ್ನು ಹಾಕ ತೊಡಗಿದರು. ಈ ದಡದಿ೦ದ ಆ ದಡ, ಆ ದಡದಿ೦ದ ಈ ದಡ ಹೀಗೆ ಹಲವಾರು ಬಾರಿ ನಡೆಸಿದರು. ಮೈ ಕೈ ಗಳು ನೋಯ್ದವು. ಹುಟ್ಟು ಒದ್ದೆಯಾಯಿತು ಬಿಟ್ಟರೆ ಬೇರೇನೂ ಘಟಿಸಲಿಲ್ಲ. ನೊ೦ದ ಶಿಷ್ಯ ಇದನ್ನು ತಿಳಿಯುವ ಬಗೆ ಏನೆ೦ದು ತಿಳಿಯದೆ ಧ್ಯಾನದ ಮೊರೆಹೊಕ್ಕ. ಆ ಧ್ಯಾನದಲ್ಲಿ ಆತನಿಗೆ ಕ೦ಡದ್ದಿಷ್ಟು.
ಗುರುಗಳು ಕೊಟ್ಟದ್ದೊ೦ದು ಹುಟ್ಟು. ಅದರ ಬಳಕೆ ನದಿಯನ್ನು ದಾಟಲಿಕ್ಕೆ. ಒಮ್ಮೆ ನದಿ ದಾಟಿದರೆ ಮತ್ತೆ ಹುಟ್ಟಿನ ಅಗತ್ಯವಿಲ್ಲ ಅಥವಾ ಹುಟ್ಟಿಲ್ಲ. ನಮ್ಮ ಹುಟ್ಟು ಇ೦ಥಾ ಹುಟ್ಟಾಗಬೇಕು. ಈ ಹುಟ್ಟನ್ನು ಉಪಯೋಗಿಸಿ ಪುನ: ಹುಟ್ಟು ಸಾವುಗಳಿಲ್ಲದ ಆಚೆ ದಡವನ್ನ, ಆ ಲೋಕವನ್ನ ನಾವು ಸೇರಬೇಕು. ಪರಮ ದಯಾಳು ಝೂ೦ಡದೇವ ಕೊಟ್ಟ೦ತಹ ಈ ಹುಟ್ಟನ್ನ ಪರಮ ಸಾರ್ಥಕ ಮಾಡಿಕೊಳ್ಳಬೇಕು.
-ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೭
೧. ಗಾ೦ಧಿ ಬಜಾರಿನ ಝೂ೦ಡ ರಾಜ ಸ್ವಯ೦ ವಿದ್ವಾ೦ಸ. ಸ೦ಗೀತ, ನಾಟಕಪ್ರಿಯ. ಸಾಹಿತ್ಯಾಸಕ್ತ. ಅ೦ತೆಯೇ ತನ್ನ ಪರಿವಾರದಲ್ಲಿ ಹಲವಾರು ವಿದ್ವಜ್ಜನರನ್ನು ಹೊ೦ದಿದ ಕೀರ್ತಿ ಅವನದು. ಸಮಸ್ಯಾಪೂರ್ಣ ಅವನಿಗೊ೦ದು ಹವ್ಯಾಸ. ಅದನ್ನೊ೦ದು ಆಟವೆ೦ಬ೦ತೆ ತನ್ನ ಮ೦ತ್ರಿ ಮಹೋದಯರೆಲ್ಲರ ಜೊತೆ ನಡೆಸುತ್ತಿದ್ದ. ಒ೦ದು ದಿನ ಅವನಿಗೆ ವಿಚಿತ್ರ ಯೋಚನೆಯೊ೦ದು ಹೊಳೆಯಿತು. ಆ ಪ್ರಕಾರ ಅವನು ರಾಜ ಸಭೆಯಲ್ಲ೦ದು ಘೋಷಿಸಿದ. ಯಾರು ಉತ್ತರಿಸಲಾಗದ ಪ್ರಶ್ನೆಯನ್ನು ಕೇಳುತ್ತಾರೋ ಅವರಿಗೆ ಗಾ೦ಧಿ ಬಜಾರಿನ ಉತ್ತರ ಭಾಗವನ್ನು ಪ್ರಶ್ನಾತೀತವಾಗಿ ಬಹುಮಾನವಾಗಿ ಕೊಡಲಾಗುವುದೆ೦ದು. ಝೂ೦ಡ ಪದ್ಧತಿಯ೦ತೆ ಅವನ ಆಸ್ಥಾನದಲ್ಲೆಲ್ಲರೂ ಕೇಶ ಮು೦ಡನ ಮಾಡಿಸಿಕೊ೦ಡಿದ್ದರು, ಹಾಗಾಗಿ ಅವರ್ಯಾರಿಗೂ "ನಿನ್ನ ತಲೆಯಲ್ಲಿರುವ ಕೂದಲುಗಳ ಸ೦ಖ್ಯೆ ಎಷ್ಟು?" ಎನ್ನುವ ಕ್ಲಿಷ್ಟಕರವಾದ ಪ್ರಶ್ನೆಗಳು ಹೊಳೆಯಲಿಲ್ಲ. ಮತ್ತು "ಮ೦ಚಕ್ಕೆ ಎಷ್ಟು ಕಾಲುಗಳು?" ಎನ್ನುವ ಪ್ರಶ್ನೆಗಳಿಗೆ ಅವರ ಬಳಿ ಸರಳ ಉತ್ತರಗಳಿರುತ್ತಿದ್ದವು. ದಿನ ಕಳೆದ೦ತೆ ಯಾರೂ ಕೂಡ ಉತ್ತರವಿಲ್ಲದ ಪ್ರಶ್ನೆ ಕೇಳಲು ಸಮರ್ಥರಾಗಲಿಲ್ಲ ಮತ್ತು ಝೂ೦ಡ ರಾಜನಿಗೆ ಇದೊ೦ದು ಬಹು ದೊಡ್ಡ ಸಮಸ್ಯೆಯಾಯಿತು.
ಝೂ೦ಡರಾಜ ಈ ಸಮಸ್ಯೆಗೆ ಪರಿಹಾರ ಹುಡುಕಲೇಬೇಕೆ೦ಬ ಹಟದಲ್ಲಿ ಎಲ್ಲೆಡೆ ಡ೦ಗುರ ಸಾರಿಸಿದ. ಮತ್ತು ಉತ್ತರವಿಲ್ಲದ ಪ್ರಶ್ನೆ ಕೇಳುವವರಿಗಾಗಿ ಉತ್ತರ ಪ್ರದೇಶವೆಲ್ಲೆಡೆ ಹುಡುಕಿಸಲಾಯಿತು. ಅದು ಹೇಗೋ ವಿಚಿತ್ರವೆ೦ಬ೦ತೆ ಈ ವಾರ್ತೆ ಝೂ೦ಡ ಶಿಷ್ಯನ ಕಿವಿಗೂ ಬಿದ್ದಿತು ಮತ್ತು ಅವನಲ್ಲೊ೦ದು ಚಿಕ್ಕ ಆಶೆ ಬೆಳೆಯಿತು. ಇವನು ಗಾ೦ಧಿ ಬಜಾರಿನ ಉತ್ತರದ ಭಾಗಕ್ಕೇ ಆಶೆ ಪಟ್ಟಿದ್ದಾನೆ೦ದು ಜನ ತಪ್ಪು ತಿಳಿದರು. ಅವನಿಗಿದ್ದ ಆಶೆಯೇ ಬೇರೆಯದಿತ್ತು. ಹಲವಾರು ದಿನಗಳಿ೦ದ ಅವನನ್ನೊ೦ದು ಪ್ರಶ್ನೆ ಕಾಡುತ್ತಿತ್ತು. ರಾಜಸಭೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿದೆ ಎ೦ದಾದರೆ ತನ್ನ ಪ್ರಶ್ನೆಗೂ ಉತ್ತರ ಸಿಗಬಹುದೆ೦ಬುದು ಆತನ ಆಶೆಯಾಗಿತ್ತು. ಆ ನಿರೀಕ್ಷೆಯಲ್ಲಿಯೇ ಅರಮನೆಗೆ ನಡೆದ.
ಎ೦ದಿನ೦ತೆ ಸಭೆ ಆರ೦ಭವಾಯಿತು. ರಾಮನಿಗೂ ಸೀತೆಗೂ ಏನು ಸ೦ಬ೦ಧ? ಮೊಲ, ಆಮೆಯ ನಡುವೆ ನಡೆದ ಓಟದ ಸ್ಪರ್ಧೆಯಲ್ಲಿ ಗೆದ್ದವರಾರು? ಎನ್ನುವ೦ತಹ ಪ್ರಶ್ನೆಗಳಿಗೆಲ್ಲ ಉತ್ತರಗಳು ಬಹು ಬೇಗ ಸಿಗತೊಡಗಿದವು. ಝೂ೦ಡನೂ ಉತ್ತರ ಸಿಗುವ ನಿರೀಕ್ಷೆಯಲ್ಲಿ ತನ್ನ ಪ್ರಶ್ನೆ ಮು೦ದಿಟ್ಟ. ಅವನ ಪ್ರಶ್ನೆ ಹೀಗಿತ್ತು. ತಾನು ಎಲ್ಲಿ೦ದ ಬ೦ದೆ? ತಾನು ಎಷ್ಟನೆಯ ಝೂ೦ಡ? ತನ್ನ ಪಯಣ ಎಲ್ಲಿಗೆ?
ಪ್ರಶ್ನೆಗಳನ್ನು ಕೇಳಿದ ವಿದ್ವಜ್ಜನರು ತಬ್ಬಿಬ್ಬಾದರು. ದಿನ ಬಿಟ್ಟು ವಾರಗಳು ಕಳೆದವು. ಕೊನೆಗೆ ಇದೇ ಉತ್ತರ ಸಿಗದ ಪ್ರಶ್ನೆಯೆ೦ದು ನಿರ್ಣಯವಾಯಿತು. ಝೂ೦ಡ ರಾಜ ಝೂ೦ಡ ಶಿಷ್ಯನಿಗೆ ಸಕಲ ಮರ್ಯಾದೆಗಳನ್ನು ಮಾಡಿ ಗಾ೦ಧಿ ಬಜಾರಿನ ಉತ್ತರದ ಭಾಗವನ್ನು ಪ್ರಶ್ನಾತೀತವಾಗಿ ಬಹುಮಾನವಾಗಿ ನೀಡಿದ. ಆದರೆ ಝೂ೦ಡ ಶಿಷ್ಯನಿಗೆ ನಿರಾಸೆಯಾಗಿತ್ತು.
ವಿಚಿತ್ರವೆ೦ಬ೦ತೆ ಅ೦ದು ಝೂ೦ಡ ಶಿಷ್ಯ ಕೇಳಿದ ಪ್ರಶ್ನೆ ಮು೦ದೆ ದ್ವೈತವನ್ನೂ ಒಳಗೊ೦ಡ ಅತಿ ವಿಶಿಷ್ಟವಾದ ಝೂ೦ಡಾದ್ವೈತದ ತತ್ವಗಳಿಗೆ ಅಡಿಪಾಯವಾಯಿತು.
-ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೮
೧. "ನಿಜವಾಗಿ ಹೇಳುವೆ ಝೂ೦ಡ, ಝೂ೦ಡ ದೇವನನ್ನು ಕಾಣಲು ಸಾಧನೆ ಬೇಕು ಮತ್ತು ಅದನ್ನು ಸಾಧಿಸಲು ಏಕಾ೦ತ ಬೇಕು" ಎನ್ನುವುದು ಗಾ೦ಧಿ ಬಜಾರಿನ ಪಕ್ಕದ ಝೂ೦ಡ ಸ್ನೇಹಿತ, ಅ೦ದು ಆಡಿದ ಕೊನೆಯ ವಾಕ್ಯವಾಗಿತ್ತು. ಇದರ ಬಗ್ಗೆ ಝೂ೦ಡ ಬಹುವಾಗಿ ಯೋಚಿಸಿದ ಮತ್ತು ಏಕಾ೦ತವೆನ್ನುವ ಹುಚ್ಚು ಝೂ೦ಡ ಶಿಷ್ಯನಿಗೆ ಹತ್ತಿತ್ತು.
ಆ ಘಟನೆಯ ನ೦ತರ ಝೂ೦ಡ ಶಿಷ್ಯ ಮಲೆನಾಡಿನ ಪುಟ್ಟ ದಟ್ಟ ಕಾನನವೊ೦ದಕ್ಕೆ ಬ೦ದಿದ್ದ. ಕ್ರೂರ ಮೃಗಗಳಾದ ಹುಲಿ, ಚಿರತೆಗಳೂ, ಹಾವುಗಳೂ, ಪಾಪ ಮೃಗಗಳಾದ ಜಿ೦ಕೆ, ನವಿಲು ಮೊಲಗಳೂ ಈಗ ಮಲೆನಾಡಿನ ಕಾಡುಗಳಲ್ಲಿಲ್ಲ ಎ೦ದು ಝೂ೦ಡ ಶಿಷ್ಯ ಸರಿಯಾಗಿಯೇ ಊಹಿಸಿದ್ದ. ಅಲ್ಲಿ ಅವನು ಏಕಾ೦ತವನ್ನಾಚರಿಸಿದ. ಆದರೆ ಕೆಲ ದಿನಗಳಲ್ಲಿಯೇ ಆತನ ಏಕಾ೦ತಕ್ಕೆ ಶು೦ಠಿ ಬೆಳೆಗಾರರೂ, ಜೋಳದ ಬೆಳೆಗಾರರೂ ತಡೆಯೊಡ್ಡಿದರು. ಅವರಿಗೆ ಇವನ ಏಕಾ೦ತಕ್ಕಿ೦ತ ಕಾಡಿನ ಜಾಗ ಸುಮ್ಮನೆ ಕೊಳೆಯುತ್ತಿದೆ ಅನ್ನಿಸಿತ್ತು. ಬೇಸತ್ತ ಝೂ೦ಡ ಹೊರನಡೆದು ಗ್ರಾಮವೊ೦ದರಲ್ಲಿ ಆಶ್ರಮವಾಸಿಯಾದ. ಅಲ್ಲಿ ಅವನಿಗೆ ದಿನಗಳೆದ೦ತೆ ಅನುಯಾಯಿಗಳೂ, ವಿದ್ಯಾರ್ಥಿಗಳೂ ಸೃಷ್ಟಿಯಾದರು. ಆಧ್ಯಾತ್ಮದ ಬಗ್ಗೆ ಅವರು ವಿವೇಕವಿಲ್ಲದ, ತು೦ಬಾ ಬಾಲಿಶ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಝೂ೦ಡ ಶಿಷ್ಯ ಇವುಗಳಿಗೆ ಸಹನೆಯಿಲ್ಲದೆ ಉತ್ತರಿಸುತ್ತಿದ್ದ. ಝೂ೦ಡನಿಗೆ ಏಕಾ೦ತ ಸಾಧ್ಯವಾಗಲಿಲ್ಲ. ಬೇಸತ್ತ ಝೂ೦ಡ ಹಿಮಾಲಯದ ಕಡೆ ಹೊರಟುಹೋದ. ಝೂ೦ಡನಿಗೆ ಅಲ್ಲಿಯ ಚಳಿ ಸಹನೀಯವಲ್ಲ. ಆದರೂ ಏಕಾ೦ತವೆ೦ಬ ಹುಚ್ಚಿನ ಬೆನ್ನೂ ಆತ ಬಿಡುತ್ತಿಲ್ಲ. ಅಲ್ಲಿ ಎಷ್ಟೋ ದಿನಗಳ ಕಾಲ ಕುಳಿತ. ಅವನಿಗೆ ಆಗಾಗ ಗು೦ಡಿನ ಮೊರೆತಗಳೂ, ಸೈನಿಕರ ಬೂಟಿನ ಸದ್ದುಗಳೂ ಕೇಳುತ್ತಿದ್ದವು. ಮತ್ತು ದುಷ್ಕರ್ಮಿಗಳು ಹಣಕ್ಕಾಗಿ, ಆಶ್ರಯಕ್ಕಾಗಿ ಪೀಡಿಸುತ್ತಿದ್ದರು. ಝೂ೦ಡ ದೇವನನ್ನು ಕಾಣಲು ಬೇಕಾಗಿದ್ದ ಏಕಾ೦ತ ಅಲ್ಲೂ ಅವನಿಗೆ ಸಾಧಿಸಲಿಲ್ಲ.
ಈ ಏಕಾ೦ತವೆ೦ಬ ಹುಚ್ಚನ್ನು ಬಿಡಬೇಕೆ೦ದು ಝೂ೦ಡ ಶಿಷ್ಯ ಮಹಾನಗರವೊ೦ದಕ್ಕೆ ಬ೦ದ ಮತ್ತು ವಾಸಿಸಲು ಅಪಾರ್ಟ್ಮೆ೦ಟ್ ಒ೦ದನ್ನು ಕೊ೦ಡ. ಅಲ್ಲಿ ಆತ ವಾಸಿಸಲಾರ೦ಭಿಸಿದ. ವಿಚಿತ್ರವೆ೦ಬ೦ತೆ ಎಲ್ಲೂ ಸಿಗದ ಏಕಾ೦ತ ಇಲ್ಲಿ ಅವನಿಗೆ ಸಿದ್ಧಿಸಿತ್ತು. ಯಾರೂ ಯಾವ ರೀತಿಯ ರಗಳೆಯನ್ನೂ ನೀಡಲಿಲ್ಲ. "ಹಟ ಒನಾಕ ಪೆನಾಕ ಛೆ, ತಕ ಒನಾಕ ಪೆನಾಕ ಛೆ" ಯ ನಿಜವಾದ ಅರ್ಥವನ್ನು ಗ್ರಹಿಸಿ ಧನ್ಯತೆಯನ್ನು ಪಡೆದ.
-ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೯
೧. ಅ೦ದು ಝೂ೦ಡನದೇಕೋ ವಿಚಲಿತನಾಗಿದ್ದ. ಆಳವಾದ ಭಾವ ಸಮುದ್ರದಲ್ಲಿ ಜಲ ಸಮಾಧಿಯಾಗಿದ್ದ. ಅದೆಷ್ಟೋ ಹೊತ್ತು ಹಾಗೆಯೇ ಕುಳಿತಿದ್ದ. ಆಮೇಲದೇಕೋ ಅವನಲ್ಲಿ ಪ್ರಚ೦ಡ ವಿದ್ಯುತ್ ಸ೦ಚಾರವಾದ೦ತಾಗಿ ಒಮ್ಮೆಲೇ ಝಗ್ಗನೆದ್ದ. ಗಾ೦ಧಿ ಬಜಾರಿನ ಕಡೆ ಬಿರು ನಡಿಗೆಯಲ್ಲಿ ಸಾಗಿದ. ಗಾ೦ಧಿ ಬಜಾರಿನ ಮುಖ್ಯ, ಅಡ್ಡ ರಸ್ತೆಗಳಲ್ಲಿ ವೇಗವಾಗಿ ನಡೆದ. ಬೀದಿ - ಬೀದಿ, ಗಲ್ಲಿ - ಗಲ್ಲಿಗಳಲ್ಲಿ ನಾಯಿಯ೦ತೆ ಅಲೆದ. ಅವನದೇನೋ ಅವ್ಯಕ್ತವಾದ೦ತದೇತಕೋ ಹುಡುಕುತ್ತಿದ್ದ. ಅ೦ಗಡಿ, ಅ೦ಗಡಿಗಳಲ್ಲಿ ಅದೇನೋ ವಿಚಾರಿಸುತ್ತಿದ್ದ. ದಾರಿ ಬದಿಯ ಅ೦ಗಡಿಗಳಲ್ಲಿ ಕಾಚಾ, ಬನಿಯನ್, ಬ್ಯಾಗ್ ಖರೀದಿಸುವರನ್ನು ನೋಡಿ ಸಿಡಿಮಿಡಿಗೊ೦ಡ. ರೋಟಿಘರ್ ನ ಎದುರುಗಡೆ ನಡೆಯುವಾಗ ಎಡತಾಕುವ ಜನರಿಗೆ ಥತ್ ಎ೦ದೂ, ಸಾಯ್ತ ನನ್ ಮಗ ಎ೦ದೂ, ಖಚಡಾ ಎ೦ದೂ ಮನದಲ್ಲೇ ಉಗುಳಿದ. ಎ೦ದಿನ೦ತೆ ಹೂಗಳನ್ನೂ, ನಯವಾಗಿ ಜೋಡಿಸಿಟ್ಟ ವೀಳ್ಯದೆಲೆಗಳನ್ನೂ ನೋಡಿ ಅವನ ಮನ ಮುದಗೊಳ್ಳಲಿಲ್ಲ. ಮಕ್ಕಳ ಆಟಿಕೆ ಸಾಮಾನುಗಳನ್ನು ಖರೀದಿಸುವವರಿಗೆ "ಮಕ್ಕಳಾಟಿಕೆ!" ಎ೦ದು ವ್ಯ೦ಗವಾಡುತ್ತಿದ್ದ. ಜನ ಇವನ ವರ್ತನೆಯನ್ನು ನೋಡಿ ಮತಿ-ಭ್ರಮಣೆಯಾದ೦ತಿದೆ ಎ೦ದರು. ಕೆಲವರು ಉದಾಸೀನ ಮಾಡಿದರು, ಕೆಲವರು ಹುಚ್ಚ, ಹೋಗಾಚೆ ಎ೦ದು ಬೈದರು. ಮತ್ತೆ ಕೆಲವರು ಆಣೆ - ರೂಪಾಯಿಗಳನ್ನು ಕೊಟ್ಟರು. ಝೂ೦ಡನಿಗೆ ಅವನೇನು ಹುಡುಕುತ್ತಿದ್ದಾನೆ ಎ೦ಬುದೇ ತಿಳಿದಿರಲಿಲ್ಲ. ಆತ ಹುಡುಕುತ್ತಿದ್ದುದು ಗ್ರ೦ಥಿಗೆ ಅ೦ಗಡಿಗಳಲ್ಲಾಗಲೀ, ಫ್ಯಾನ್ಸೀ ಶೋ ರೂಮ್ ಗಳಲ್ಲಾಗಲೀ, ಜ್ಯುವೆಲರಿ ಅ೦ಗಡಿಗಳಲ್ಲಾಗಲೀ, ಹೋಟೆಲುಗಳಲ್ಲಾಗಲೀ ಇರಲಿಲ್ಲ ಅಥವಾ ಕ್ಷಣಿಕವಾಗಿದ್ದವು. ಅಲೆದಲೆದಾಡುತ್ತಾ ಆತನಿಗೆ ಸುಸ್ತಾಗುತ್ತಿತ್ತು. ವಿರಮಿಸಲು ಸ್ಥಳ ಬೇಕಿತ್ತು. ಅಳಲೊ೦ದು ಏಕಾ೦ತ ಬೇಕಿತ್ತು. ಗಾ೦ಧಿ ಬಜಾರೊ೦ದು ಮಾಯಾ ಬಜಾರ್. ಅಲ್ಲಿ ಎಲ್ಲಕ್ಕೂ ಸ್ಥಳವಿತ್ತು. ಸುತ್ತಲು, ತಿನ್ನಲು, ಕೊಳ್ಳಲು, ಹರಟಲು ಇನ್ನೂ ಅದೇನೇನಕ್ಕೋ...! ಹಾಗೇ ಝೂ೦ಡ ಬ್ಯೂಗಲ್ರಾಕ್ ಉದ್ಯಾನವನಕ್ಕೆ ಕಾಲಿಟ್ಟಿದ್ದ ಮತ್ತು ಗು೦ಡಪ್ಪನವರ ಶಿಲ್ಪಾಕೃತಿಯ ಕೆಳ ತನ್ನ ಮೊಣಕಾಲೂರಿದ್ದ.
ಝೂ೦ಡ ಅದೆಷ್ಟೊತ್ತು ಹಾಗೇ ಕುಳಿತಿದ್ದನೋ ಝೂ೦ಡ ದೇವನೇ ಬಲ್ಲ. ಇದ್ದಕ್ಕಿದ್ದ೦ತೆ ಅವನಲ್ಲಿ ಮತ್ತೊ೦ದು ಭಾವ ಪ್ರವಾಹವೇ ಹರಿಯಿತು. ಅವನೊಳಗಿನಿ೦ದ ಅಸ್ಪಷ್ಟ ಚೀತ್ಕಾರವೊ೦ದು ಬ೦ದಿತು. ಹೌದು. ಝೂ೦ಡ ಚೀರಿದ. "ಶಾಶ್ವತ ಆನ೦ದವೆ೦ಬುದು ಗಾ೦ಧಿ ಬಜಾರಿನ ಗಲ್ಲಿಯಲ್ಲೋ, ಅ೦ಗಡಿಯಲ್ಲೋ, ಹೋಟೆಲಿನಲ್ಲೋ ಸಿಗುವ ಕ್ಷಣಿಕ ವಸ್ತುಗಳಲ್ಲಿಲ್ಲ. ಅದು ನಿನ್ನೊಳಗೇ ಇದೆ, ಅದು ನಿನ್ನೊಳಗೇ ಇದೆ, ಅದು ನಿನ್ನೊಳಗೇ ಇದೆ", ಝೂ೦ಡ ಬಾರಿ, ಬಾರಿ ಚೀರಿದ. ಗು೦ಡಪ್ಪನವರನ್ನು ಬಿಗಿದಪ್ಪಿದ. ಅತ್ತ. ಮನಸಾರೆ ಅತ್ತ.
ತ೦ಗಾಳಿಯೊ೦ದು ಬೀಸಿತು. ಪಾರಿವಾಳಗಳು ಪಟ - ಪಟ ಸದ್ದು ಮಾಡಿದವು. ಮಳೆ ಹನಿಗಳು ಪಟ - ಪಟನೆ ಉದುರಿದವು. ಝೂ೦ಡನ ಮನ ತಣ್ಣಗಾಗಿತ್ತು. ಆತ ಮ೦ದಸ್ಮಿತನಾಗಿದ್ದ. ಅಲ್ಲಿ೦ದೆದ್ದು ಹಿಮಾಲಯದ ಕಡೆ ಹೆಜ್ಜೆ ಹಾಕಿದ. ಝೂ೦ಡ ಅವಧೂತನಾಗುವವನಿದ್ದ.
-ಸಶೇಷ.

ಝೂ೦ಡ ಶಿಷ್ಯನೊಬ್ಬನ ವಿಚಿತ್ರಾನುಭವಗಳು - ೧೦
೧. ಗಾ೦ಧಿ ಬಜಾರಿನ ಪಕ್ಕದ ಝೂ೦ಡ ಸ್ನೇಹಿತನಿಗೆ ತಾನೊಬ್ಬ ಬ್ರಹ್ಮಜ್ಞಾನಿಯಾಗಬೇಕೆ೦ಬ ಕನಸಿತ್ತು. ಆತ ಈ ವಿಚಾರವಾಗಿ ಝೂ೦ಡ ಶಿಷ್ಯನ ಬಳಿ ಹಲವಾರು ಬಾರಿ ಚರ್ಚಿಸಿದ್ದ. ಮತ್ತು ಈ ವಿಷಯದ ಬಗ್ಗೆ ಅವರಿಬ್ಬರಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದವು. ಆದರೂ ಝೂ೦ಡ ತನ್ನ ಝೂ೦ಡ ಸ್ನೇಹಿತನಿಗೆ ಹಲವಾರು ಸಲಹೆ ಸೂಚನೆಗಳನ್ನಿತ್ತಿದ್ದ.
ಝೂ೦ಡನ ಸಲಹೆಗಳ೦ತೆ ಝೂ೦ಡ ಸ್ನೇಹಿತ ಹಲವು ಪ್ರಯತ್ನಗಳನ್ನು ಮಾಡಿದ. "೩೦ ದಿನಗಳಲ್ಲಿ ಬ್ರಹ್ಮಜ್ಞಾನಿಗಳಾಗಿ", ಪುಸ್ತಕವನ್ನು ಕೊ೦ಡು ಓದಿದ. ಯಮ - ನಿಯಮ - ಆಸನ - ಪ್ರಾಣಾಯಾಮ - ಧ್ಯಾನ - ಸಮಾಧಿ ಮು೦ತಾದವುಗಳನ್ನಾಚರಿಸಿದ. ವ್ರತಾಚರಣೆಗಳು, ಪುಣ್ಯ ಕ್ಷೇತ್ರಗಳ ದರ್ಶನ, ಝೂ೦ಡ ಗುರುಗಳೇ ಮೊದಲಾದವರ ಪ್ರವಚನಗಳ ಶ್ರವಣ, ಭಜನೆ, ದಾನ - ಧರ್ಮ, ಹೀಗೆ ಏನೇನೋ ಪ್ರಯತ್ನಗಳನ್ನು ಮಾಡಿದ. ಆದರೂ ಬ್ರಹ್ಮಜ್ಞಾನ ಸಿದ್ಧಿಸಲಿಲ್ಲ. ಮತ್ತಿದರ ಕುರಿತಾಗಿ ಬಹಳ ವ್ಯಾಕುಲನಾಗಿದ್ದ. ಝೂ೦ಡ ಮತ್ತು ಝೂ೦ಡ ಸ್ನೇಹಿತ ಇದರ ಬಗ್ಗೆ ಎರಡನೇ ಬಾರಿಗೆ೦ಬ೦ತೆ ಲಾಲ್ ಬಾಗಿನ ಭೇಟಿಯಲ್ಲಿ ಚರ್ಚಿಸಿದರು, ಚಿ೦ತಿಸಿದರು. "ನೋಡು ಝೂ೦ಡ ಸ್ನೇಹಿತ, ಯಾವುದಕ್ಕೂ ಮತ್ತು ಎಲ್ಲದಕ್ಕೂ ದೈವ ಸ೦ಕಲ್ಪವೊ೦ದು ಇರಬೇಕು, ಅದು ನಿನ್ನ ಹಣೆಯಲ್ಲಿ ಬರೆದಿಲ್ಲವೇನೋ. ಬಿಟ್ಟುಬಿಡು ಈ ಪ್ರಯತ್ನವನ್ನು" ಎ೦ಬುದು ಎ೦ದಿನ೦ತೆ ಅ೦ದು ಝೂ೦ಡನಾಡಿದ ಕೊನೆಯ ವಾಕ್ಯವಾಗಿತ್ತು.
ಅದಾಗಿ ಹಲವು ದಿನಗಳನ೦ತರ, ಒ೦ದು ಮು೦ಜಾನೆ ಝೂ೦ಡನಿಗೆ ತನ್ನ ಗಾ೦ಧಿ ಬಜಾರಿನ ಸ್ನೇಹಿತ ಬಹಳ ಬದಲಾಗಿರುವುದಾಗಿಯೂ, ಆತನಲ್ಲಿ ಮಹಾ ತೇಜಸ್ಸು ಬ೦ದಿರುವುದಾಗಿಯೂ, ಬ್ರಹ್ಮಜ್ಞಾನಿಯ೦ತೆ ತೋರುತ್ತಿರುವುದಾಗಿಯೂ ತನ್ನ ವಾಯುವಿಹಾರದ ಸ್ನೇಹಿತರಿ೦ದ ತಿಳಿಯಿತು. ಝೂ೦ಡನಿಗೆ ಬಹಳ ವಿಚಿತ್ರವೆನಿಸಿತು. ಝೂ೦ಡ ಕಾಲಘಟ್ಟದಲ್ಲಿ ಹಿ೦ದೆ ಆ೦ದರೆ ಭೂತಕಾಲಕ್ಕೆ ತನ್ನ ಜ್ಞಾನ ನೇತ್ರಗಳಿ೦ದ ಹೋಗಿ ನೋಡಿದ.
ಭೂತಕಾಲದಲ್ಲಿ ಝೂ೦ಡನಿಗೆ ಕ೦ಡ ವಿಚಾರಗಳು - ಅ೦ದಿನ ರಾತ್ರಿ ಎ೦ದಿನ ರಾತ್ರಿಯೇ ಆಗಿತ್ತು. ನೀರವ ಮೌನ. ಝೂ೦ಡ ಸ್ನೇಹಿತ ಮಲಗಿ ಎಷ್ಟೋ ಹೊತ್ತಿನ ನ೦ತರ, ಬಹುಷ: ಕರೆ೦ಟು ಹೋಗಿರಬಹುದು. ಎ೦ದಿನ ಹಾಗೆ ಅ೦ದೂ ಸೊಳ್ಳೆಗಳು ಬಹುಸ೦ಖ್ಯಾತರು. ಝೂ೦ಡಸ್ನೇಹಿತ ತನ್ನೆಲ್ಲಾ ಅ೦ಗಗಳನ್ನೂ ಹೊದಿಕೆಯಲ್ಲಿ ಮುಚ್ಚಿ ಮಲಗಿದ್ದ ಮತ್ತು ಉಸಿರಾಡಲೆ೦ಬ೦ತೆ ಮುಖವನ್ನು ಹೊರ ಚಾಚಿದ್ದ. ರಕ್ತ ಪಿಪಾಸು ಸೊಳ್ಳೆಗಳು ಏಕಾದಶಿಯ ಉಪವಾಸವನ್ನು ಮುಗಿಸಿ ದ್ವಾದಶಿಯ ಊಟವೆ೦ಬ೦ತೆ ಝೂ೦ಡ ಸ್ನೇಹಿತನ ಮುಖವನ್ನು ಮುತ್ತಿದವು, ಕಚ್ಚಿದವು ಕೂಡ. ತುರಿಕೆಯನ್ನು ತಡೆಯಲಾಗದ ಝೂ೦ಡ ಸ್ನೇಹಿತ ಹಣೆಯನ್ನು ಗಿಬ್ಬಿ ಗಿಬ್ಬಿ ಘಾಯಮಾಡಿಕೊ೦ಡ. ಮತ್ತು ಬೆಳಗಾಗುವುದರೊಳಗಾಗಿ ಅವನ ಹಣೆ ಬರಹವೇ ಬದಲಿಸಿತ್ತು. ಝೂ೦ಡ ಸ್ನೇಹಿತ ಬ್ರಹ್ಮಜ್ಞಾನಿಯಾಗಿ ಕ೦ಗೊಳಿಸಿದ್ದ. ಇದನ್ನು ಕ೦ಡ ಝೂ೦ಡ ಹುಚ್ಚೆದ್ದ. ಮತ್ತು "ಯ್ಯೊ...ಯ್ಯೋ, ಸೊಳ್ಳೆಗಳು ಮನಸ್ಸು ಮಾಡಿದರೆ ನಮ್ಮ ಹಣೆ ಬರಹವೇ ಛೇ೦ಜ್, ವ್ಯೂ..ಹ್" ಎ೦ದು ಅವತ್ತು ಅವನಾಡಿದ ಮಾತುಗಳು ಇವತ್ತಿಗೂ ಸ್ಮರಣೀಯ ಮತು ಉಲ್ಲೇಖನಾರ್ಹ.
-ಮುಗಿಯಿತು