ಮಾನ್ಯ ಶ್ರೀ Nagesh Hegde ಯವರು “ಧನ್ಯತಾ ಸವಾಲು” #GratitudeChallenge ಎಂಬ ವಿಷಯದಡಿ ದಿನವೊಂದಕ್ಕೆ ಮೂರರಂತೆ ಐದು ದಿನ ನಾವು ನಮ್ಮ ಜೀವನದಲ್ಲಿ ಯಾರ್ಯಾರಿಗೆ ಕೃತಜ್ಞರಾಗಿದ್ದೇವೆ ಎ೦ಬುದನ್ನು ಹಂಚಿಕೊಳ್ಳುವ ವಿಶೇಷ ಅವಕಾಶವನ್ನು ಈ ರೀತಿ ಬಳಸಿಕೊಳ್ಳಲಿಚ್ಛಿಸುತ್ತೇನೆ.
೧. ನಾನು ಈ ಭೂಮಿಯಲ್ಲಿ ಜನ್ಮ ತಾಳಲು ಕಾರಣನಾದ ಆ ದಿವ್ಯ ದೇವ ಶಕ್ತಿಗೆ ಕೃತಜ್ಞ. ತಂದೆಯೆಂಬ ವ್ಯಕ್ತಿಯಿಂದೊಂದು ಸಣ್ಣ ಪರಮಾಣು ತಾಯಿಯೆಂಬ ಒಡಲೊಳು ಜನ್ಮ ತಾಳಿ, ಬೆಳೆದು ಜೀವ ತಾಳುವಂತೆ ಮಾಡುವುದು ಆ ದಿವ್ಯ ದೇವ ಶಕ್ತಿಯೆಂಬುದೇ ನನ್ನ ನಂಬುಗೆ. ಅದೆಂತಹ ಪ್ರಕೃತಿಯೋ, ಅದೆಂತಹ ಪುರುಷನೋ? ಅವರೀರ್ವರೊಳಗದೆಂತಹ ಮಾಯೆಯೋ? ಅದೆಂತಹ ದಿವ್ಯ ಚೇತನವೋ? ಅದಕ್ಕೆ ನಾನು ಸದಾ ಕೃತಜ್ಞ.
೨. ನನಗೆ ಈ ಜನ್ಮವಿತ್ತು ಸಾಕಿ ಸಲಹಿದ ಮಾತಾ – ಪಿತೃಗಳಿಗೆ ನಾನು ಕೃತಜ್ಞ. ಗರ್ಭದ ನೋವಿನಲ್ಲಿ ಖುಷಿಯನ್ನು, ಆನಂದವನ್ನು ಕಂಡ ಆ ಮಹಾತಾಯಿಗೆ, ಭುವಿಗೆ ಬಂದಮೇಲೆ ನಾನೆಂಬುದನ್ನು ಅರಿಯುವವರೆಗೂ ಸಕಲ ಕಾರ್ಯಗಳನ್ನೂ ಮಾಡಿದ, ನನ್ನ ತಂಟೆ, ಚೇಷ್ಟೆಗಳನ್ನು ಸಹಿಸಿ ತಿದ್ದಿ, ಬುದ್ಧಿ ಹೇಳಿದ ಆ ಮಹಾತಂದೆಗೆ ಕೃತಜ್ಞ. ಮಣ್ಣಿನ ಪ್ರತಿಮೆಗೆ ಸಂಸ್ಕಾರವೆಂಬ ದಿಕ್ಕು ದೆಶೆಯನ್ನು ನೀಡಿದ ಆ ಈರ್ವರು ಮಹಾ ಚೇತನಗಳಿಗೆ ನನ್ನ ನಮನ.
೩. ಈ ಜೀವ, ಈ ಜನ್ಮ ತಮ್ಮದಲ್ಲ. ಅದು ಇತರರ ಉನ್ನತಿಗಿರಲಿ ಎಂದು ಶತ ಶತಮಾನಗಳಿಂದ ತಪಸ್ಸನ್ನಾಚರಿಸಿ ಅದನ್ನು ತಮ್ಮಶಿಷ್ಯವರ್ಗಗಳಲ್ಲಿ ಹರಿಸಿ ಇಂದಿನವರೆಗೂ ಹಸಿರಾಗಿಯೇ ಇರುವಂತೆ ಮಾಡಿದ ಆ ಋಷಿ ವೃಂದಕ್ಕೆ ಕೃತಜ್ಞ. ಅವರು ಕಂಡುಕೊಂಡ ಸತ್ಯಗಳೆಷ್ಟು? ಅವೆಲ್ಲವನ್ನೂ ಮಾನವನ ಜೀವನೋನ್ನತಿಗೆ ಧಾರೆಯೆರೆದರಲ್ಲ. ನಮಗೆ ವಿದ್ಯೆಯೆಂಬ ಸಂಪತ್ತನ್ನು ಧಾರೆಯೆರೆದರಲ್ಲ. ಆ ಋಷಿಗಣಕ್ಕೆ ಕೃತಜ್ಞ.
ದಿನವೆರಡು, ಮೂರು ಕೃತಜ್ಞತೆಗಳು
೧. ಬಾಲ್ಯವನ್ನು ಮರೆಯಲಾಗದ೦ತೆ ಮಾಡಿದ ಆ ಪರಿಸರ ಮತ್ತಲ್ಲಿನ ಗೆಳೆಯರಿಗೆ ನಾನು ಸದಾ ಕೃತಜ್ಞ. ಬಾಲ್ಯದಲ್ಲಿ ಆಡಿದ ಆಟಗಳೆಷ್ಟೋ? ಆಡಿದ ಜಗಳಗಳೆಷ್ಟೋ? ಒಡನಾಡಿದ ಆ ಗೆಳೆಯರೆಷ್ಟೋ? ಯಾರ್ಯಾರೋ ಗೆಳೆಯರ ಬ್ಯಾಟು, ಬಾಲು, ಚಿನ್ನಿ ದಾಂಡು, ನನ್ನದೆಂಬುದು ಅಲ್ಲಿರಲೇ ಇಲ್ಲ. ನಿಜ. ನಾನು ಆಡಿದ್ದು ಸದಾ ಇತರ ಗೆಳೆಯರ ಪರಿಕರಗಳಲ್ಲೇ. ಆಟವೆಂದರೆ ಒಬ್ಬನೇ ಆಡಲು ಹೇಗೆ ಸಾಧ್ಯ? ನನ್ನ ಜೊತೆ ಸೇರಿ ನನ್ನ ಜೀವನದಲ್ಲಿ ಸಿಹಿ ಗಳಿಗೆಗಳನ್ನು ಉಳಿಸಿದ ಅವರೆಲ್ಲರಿಗೆ ನಾನು ಕೃತಜ್ಞ.
೨. ಮನಸ್ಸನ್ನ ಮುದಗೊಳಿಸಿ, ಹರಿತಗೊಳಿಸಿ, ವಿಕಸಿಸುವಂತೆ ಮಾಡುವುದು ಕಲಾ ಪ್ರಕಾರಗಳು. ಅದಿಲ್ಲದಿರೆ, ಇಂದಿನ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ. ಸಾಹಿತ್ಯ, ನಾಟಕ, ಯಕ್ಷಗಾನ, ಸಂಗೀತ, ನೃತ್ಯ ಎಲ್ಲದರ ಸತ್ವವನ್ನು ಹೀರಿಕೊಟ್ಟು ಜೀವನಕ್ಕೆ ರುಚಿಯನ್ನು ಹೆಚ್ಚಿಸಿದ ಆ ಕವಿ – ಕಾವ್ಯ ಪರಂಪರೆಗಳಿಗೆ, ಆ ಸಂಘಟನೆಗಳಿಗೆ ಕೃತಜ್ಞ. ಕಲೆಯ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ, ಬೇರೆಯವರಿಗೆ ಅದನ್ನು ದಾಸೋಹವೆಂಬಂತೆ ಬಡಿಸಿದ ಆ ಹಿರಿಯ ಚೇತನಗಳಿಗೆ ನಮನ. ನೈಜ ಕಲೆಯನ್ನರಳಿಸಿ ಮನಸ್ಸಿನ ವಿಕಸನಕ್ಕೆ ಕಾರಣರಾದ ಆ ಮಹಾನ್ ಕಲಾವಿದರಿಗೆ ನಮನ.
೩. ಸಂಸ್ಕೃತ, ವೇದವೆಂದರೇ ಹಾಗೆ. ಅದೇನು ಮಾಯೆಯೋ ಗೊತ್ತಿಲ್ಲ. ಅದನ್ನು ಬಲ್ಲವರು ಸದಾ ತೃಪ್ತರು. ಇವನ್ನು ಧಾರೆಯೆರೆಯುವುದನ್ನೇ ವೃತ್ತಿಯನ್ನಾಗಿಸಿಕೊಂಡ ಆ ಅಧ್ಯಾಪಕರುಗಳಿಗೆ, ವೇದವಿದರಿಗೆ ಕೃತಜ್ಞ. ವಿದ್ಯೆಯೆಂಬ ಮಹಾ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುವ ಮಹಾನ್ ವ್ಯಕ್ತಿಗಳಿವರು. ಗುರುವೇ ಸರ್ವಸ್ವವಲ್ಲವೇ? ಜೀವನ ಪಾಠವನ್ನು, ಆಟವನ್ನು ಕಲಿಸಿಕೊಡುವ ಗುರುಗಳಿವರು. ಇವರಿಲ್ಲದೆ ಯಾರ ಜೀವನವೂ ಪೂರ್ಣವಲ್ಲ. ಇವರಿಲ್ಲದಿರೆ ಜೀವನಕ್ಕೊಂದು ಅರ್ಥವೇ ಇಲ್ಲ. ಬದುಕಿನ ಕ್ಲಿಷ್ಟ ಸನ್ನಿವೇಶಗಳಲ್ಲಿ ದಾರಿತೋರುವ ಆ ಮಹಾನ್ ವ್ಯಕ್ತಿಗಳಿಗೆ ಕೃತಜ್ಞ. ಆ ವಿದ್ಯಾಸಂಸ್ಥೆಗಳಿಗೆ ಕೃತಜ್ಞ.
ಐದು ದಿನಗಳ “ಕೃತಜ್ಞತಾ ಸವಾಲು” - ದಿನ ಮೂರು – ಮೂರು ಋಣಭಾರಗಳು
೧. ನಮಗೆ ಅನ್ನವನ್ನೀಯುವವಳು ಭೂತಾಯಿ. ಭೂತಾಯಿಗೇ ಅನ್ನವೀಯುವವಳು ಮಹಾಮಾತೆ ಗೋಮಾತೆ. ತಾಯಿ ಹಾಲು ನಾವು ಕುಡಿದ ಮೊದಲ ಅಮೃತ. ಎರಡನೇ ಅಮೃತ ಅದು ಗೋಮಾತೆ ಕೊಟ್ಟ ಆ ಕ್ಷೀರಾಮೃತ. ಅದಲ್ಲವೇ ದಿನನಿತ್ಯ ನಮಗೆ ಪುಷ್ಟಿ ನೀಡಿ ಬೆಳೆಸುತ್ತಲಿಹುದು. ಹಾಲು, ಮೊಸರು, ಬೆಣ್ಣೆ, ತುಪ್ಪ ಇವನ್ನುಪಯೋಗಿಸದ ಮನೆ ಯಾವುದು? ಆ ಗೋಮಾತೆಗೆ ನಾನು ಕೃತಜ್ಞ. ಕೃತಜ್ಞತೆಗೆ ಮತ್ತೊಂದು ಹೆಸರೇ ನಾಯಿಯಲ್ಲವೇ? ಮಾನವ – ನಾಯಿಯ ಸಂಬಂಧ ಅದೆಷ್ಟು ಹಳೆಯದೋ ಬ್ರಹ್ಮನೇ ಹೇಳಬೇಕು. ಬೈಗುಳ, ಹೊಡೆತ ತಿಂದೂ ನಮಗೆ ಪ್ರೀತಿ ಕೊಟ್ಟು ನಮಗೆ ಮಧುರ ಕ್ಷಣಗಳನ್ನು ಕೊಟ್ಟ ಆ ನಾಯಿ, ಬೆಕ್ಕುಗಳಿಗೆ ಏನನ್ನೋಣ? ಮನೆಯ ಫೋಟೋದ ಹಿಂದೆ ಗೂಡುಕಟ್ಟಿ ವಾಸಿಸಿದ ಆ ಗುಬ್ಬಿ, ಕುತೂಹಲದ ಪಾರಿವಾಳ, ಮಾತನಾಡುವ ಗಿಳಿ, ಪ್ರೀತಿಯ ಕಾಗೆಗಳು, ಮನಮೋಹಕ ನವಿಲುಗಳು, ಆಶ್ಚರ್ಯದ ಗೂಡು ಕಟ್ಟುವ ಗೀಜಗ. ಇವುಗಳಿಗೆ ನಾವೇನು ಕೊಡಲು ಸಾಧ್ಯ? ಕೃತಜ್ಞತೆಯಲ್ಲದೆ ಮತ್ತೇನು ಬರಬೇಕು? ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಹೋದ ಸಮಸ್ತ ಪ್ರಾಣಿ – ಪಕ್ಷಿ – ಕೀಟ ಸಂಕುಲಗಳಿಗೆ ಸದಾ ಕೃತಜ್ಞ.
೨. ಪ್ರಾಣವಾಯು ಆಮ್ಲಜನಕ. ಸಸ್ಯ ಸಂತತಿ ಅದರ ಜನಕ. ಸಸ್ಯಗಳಿಂದಲೇ ಪ್ರಾಣವಾಯು, ಸಸ್ಯಗಳಿಂದಲೇ ಮಳೆ, ಜಲ, ಆಹಾರ, ಮನೆ, ಮನ ಎಲ್ಲ. ಮರ, ಗಿಡ, ಬಳ್ಳಿಗಳು ನಮ್ಮ ಉದ್ಯಾನಲ್ಲಿ ಎಂದೆಂದೂ ನೆಲೆಸಿ ನಮ್ಮ ಬೇಸರದ ಕ್ಷಣಗಳನ್ನು ತಮ್ಮದೆಂಬಂತೆ ಹಂಚಿಕೊಂಡವು. ಅವು ಕೊಟ್ಟ ಹೂಗಳು ನಮ್ಮ ದೇವರಿಗೆ ನಿತ್ಯ ಅರ್ಪಿತ. ಹೆಂಗಳೆಯರ ಮುಡಿಗೆ ಶೋಭಿತ. ಅವು ಕೊಟ್ಟ ಸಿಹಿ, ಹುಳಿ, ಒಗರು ಹಣ್ಣುಗಳು ನಮ್ಮ ದೇಹಕ್ಕೆ ಆರೋಗ್ಯದಾಯಕ. ನಮ್ಮ ನಿತ್ಯದಡಿಗೆಯ ಪದಾರ್ಥಗಳು. ತೇಗ, ಹೊನ್ನೆ, ಮತ್ತಿ, ಹಲಸಿನ ಮರಗಳಿಂದು ನಮ್ಮ ಮನೆಯ ಬಾಗಿಲು, ಕಪಾಟುಗಳೋ, ಕಿಟಕಿಗಳೋ, ಮಂಚ, ಕುರ್ಚಿ, ಮೇಜುಗಳೋ ಆಗಿವೆ. ಶ್ರೀಗಂಧದಂತಹ ಸುಗಂಧಭರಿತ ಮರಗಳೂ, ಹೂಗಳೂ ನಮ್ಮ ಮನೆಯ ಅಗರಬತ್ತಿಗಳೂ, ಸೋಪುಗಳೂ, ಸುಗಂಧದ್ರವ್ಯಗಳೂ ಆಗಿರುವಾಗ ಆ ಸಸ್ಯ ಸಂಪತ್ತಿಗೆ ನಾವು ವಾಪಸು ಏನನ್ನು ಕೊಟ್ಟು ಋಣ ತೀರಿಸೋಣ? ಕೃತಜ್ಞತೆಯಲ್ಲದೆ ಮತ್ತೇನೂ ಹೊಳೆಯುತ್ತಿಲ್ಲ.
೩. ಸರಿಯಾದ ನಿದ್ರಾಹಾರಗಳಿಲ್ಲದಿದ್ದರೂ ಹಗಲು, ರಾತ್ರಿಯೆನ್ನದೆ ನಮ್ಮನ್ನ, ನಮ್ಮ ದೇಶದ ಗಡಿಗಳನ್ನು ಕಾಯುವ ಆ ವೀರ ಸೈನಿಕರಿಗೆ ಸಲಾಂ. ನಾವಿಲ್ಲಿ ನಿಶ್ಚಿಂತೆಯಿಂದ ಹಾಡು, ನೃತ್ಯ, ಸಂಗೀತ, ಸಂವಾದ, ಸಿನೆಮಾಗಳಲ್ಲಿ ತಲ್ಲೀನರಾಗಿದ್ದರೆ, ಅಲ್ಲಿ ದೇಶಭಕ್ತ ವೀರರು ತಮ್ಮ ಜೀವವನ್ನೇ ಪಣಕ್ಕಿಟ್ಟು ನಮ್ಮನ್ನು ದುಷ್ಟ ವೈರಿಗಳಿಂದ ರಕ್ಷಿಸುತ್ತಿದ್ದಾರೆ. ಇಲ್ಲಿ ನಮ್ಮ ನೆಮ್ಮದಿಯೇನಿದ್ದರೂ ಅದು ಅಲ್ಲಿ ಅವರ ತ್ಯಾಗದ ಕೊಡುಗೆ. ಪೋಲೀಸರೇನಾದರೂ ಮುಷ್ಕರಕ್ಕಿಳಿದರೆ ಜನ ಜೀವನವನ್ನೂಹಿಸುವುದೂ ಕಷ್ಟ. ನಮ್ಮ ನಿತ್ಯ ಸಂಕಷ್ಟಗಳಿಗೆ ಸ್ಪಂದಿಸುವ ಅವರಿಗೊಂದು ಸಲಾಂ.
ಐದು ದಿನಗಳ “ಕೃತಜ್ಞತಾ ಸವಾಲು” – ದಿನ ನಾಲ್ಕು – ಮೂರು ಋಣಘೋಷಗಳು
೧. ಮನ, ಮನೆಗಳನ್ನು, ಸನಾತನ ಧರ್ಮವನ್ನು, ಈ ದೇಶವನ್ನು ಕಟ್ಟಿ ಬೆಳೆಸಿದ ಆ ಮಹಾ ಸಂತರುಗಳಿಗೆ ಕೃತಜ್ಞ. ನಮ್ಮ ಈ ಪುಣ್ಯಭೂಮಿಯ ಉದ್ದಗಲಗಳಲ್ಲೆಲ್ಲೆಲ್ಲಿ ಸಂಚರಿಸಿದರೂ ಆ ಸಂತರುಗಳ ಛಾಯೆ ಸಿಗುತ್ತದೆ. ಅವರ ಆ ಮಹಾ ಸಂಕಲ್ಪಗಳಿಂದಲೇ ಈ ದೇಶ ಉಳಿದದ್ದು, ಬೆಳೆದದ್ದು. ಅದೆಷ್ಟು ಸಂತರುಗಳು ತಮ್ಮ ಜೀವನವನ್ನು ಇದಕ್ಕೆ ಮುಡಿಪಾಗಿಟ್ಟರು! ಶಂಕರಾಚಾರ್ಯರು, ಹಕ್ಕ-ಬುಕ್ಕರ ಗುರು ವಿದ್ಯಾರಣ್ಯರು, ಶಿವಾಜಿಯ ಗುರು ಸಮರ್ಥರು, ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಚಾಣಕ್ಯರು, ಇನ್ನೂ ನನಗೆ ಗೊತ್ತಿರದೆಷ್ಟೋ ಮಂದಿ. ಅವರೆಲ್ಲರಿಗೆ ಅಲ್ಪಮತಿಗಳಾದ ನಾವು ಹೇಗೆ ತಾನೆ ನಮನಗಳನ್ನು ಸಲ್ಲಿಸೋಣ? ಹೌದು. ನೆನೆಯಬೇಕು. ಕೃತಜ್ಞತೆಗಳೊಂದಿಗೆ ಅವರನ್ನು ನೆನೆಯಬೇಕು. ಅವರೆಲ್ಲರು ನಮಗೆ ಆದರ್ಶರು. ಆ ಸಂತ ಮಹಾಗಣಕ್ಕೊಂದು ನಮನ.
೨. ಅದಕ್ಕೆ ಏನೇನು ಹೆಸರಿವೆಯೋ ಗೊತ್ತಿಲ್ಲ. ಅಂತಃಕರಣ, ಆತ್ಮಸಾಕ್ಷಿ, ಒಳ್ಳೆ ಮನಸ್ಸು... ನಮ್ಮನ್ನು ಸದಾ ಒಳ್ಳೆಯ ಕಾರ್ಯಗಳಿಗೆ ಪ್ರಚೋದಿಸುವ, ಒಳ್ಳೆಯ – ಕೆಟ್ಟ ಕಾರ್ಯಗಳನ್ನು ವಿಮರ್ಶಿಸಿ ನಮಗೆ ತಿಳಿ ಹೇಳುವ, ನಮ್ಮೊಳಗೇ ಇರುವ ಭೌತಿಕ ಸ್ವರೂಪವಿಲ್ಲದ ವಸ್ತು. ಯಾವಾಗಲೂ ನಮ್ಮೊಳಗೇ ಆ ಎರಡು ಮನಸ್ಸುಗಳು ಇರುತ್ತದಲ್ಲವೇ? ಸದಾ ಅವೆರಡು ಪ್ರತಿ ವಿಷಯಗಳ ಬಗ್ಗೆ ಚರ್ಚಿಸುತ್ತಿರುತ್ತವೆ. ಅದಲ್ಲವೇ ನಮ್ಮನ್ನು ಎಷ್ಟೋ ಕೆಟ್ಟ ಕೆಲಸಗಳಿಂದ ತಡೆದು ನಮ್ಮ ಇಹ – ಪರಗಳನ್ನು ರಕ್ಷಿಸುವುದು? ಅದಿಲ್ಲದಿದ್ದಿದ್ದರೆ ಪ್ರಪಂಚದಲ್ಲೆಲ್ಲೆಲ್ಲೂ ಬಹುಷಃ ರಾವಣರೇ ತುಂಬಿರುತ್ತಿದ್ದರೋ ಏನೋ? ಆ ಒಳ್ಳೆಯ ಮನಸ್ಸಿಗೆ ನಾನು ಸದಾ ಕೃತಜ್ಞ.
೨. ಲೋಕದ ಒಳಿತಿಗೆ ಸದಾ ತುಡಿಯುವ, ದುಡಿಯುವ ಆ ವಿಜ್ಞಾನಿ ಸಮೂಹಕ್ಕೊಂದು ಸಲಾಂ. ನಮ್ಮ ಅನುಕೂಲತೆಗೆ ಇಂದು ಎಷ್ಟೆಲ್ಲಾ ಪರಿಕರಗಳಿವೆ!. ಅವುಗಳ ಹಿಂದೆ ಎಷ್ಟೆಲ್ಲಾ ಆವಿಷ್ಕಾರಗಳಿವೆ? ಹೊಸ ಸೃಷ್ಟಿ, ಮರುಸೃಷ್ಟಿ, ಸಂಕರ, ಹಸಿರು ಕ್ರಾಂತಿ, ವೈದ್ಯ ಲೋಕದಲ್ಲಂತೂ ಹೇಳ ತೀರದಷ್ಟು ಆವಿಷ್ಕಾರಗಳು. ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ, ಮೆಡಿಸಿನ್ ಕ್ಷೇತ್ರಗಳಲ್ಲಿ ಅದೆಷ್ಟೊಂದು ಆವಿಷ್ಕಾರಗಳು? ಇವೆಲ್ಲವುಗಳಿಂದ ಮನುಕುಲ, ಅಷ್ಟೇ ಏಕೆ ಇಡೀ ಲೋಕ ಸಾಕಷ್ಟು ಅನುಕೂಲತೆಗಳನ್ನ ಪಡೆದಿದೆ. ಈ ಎಲ್ಲ ಆವಿಷ್ಕಾರಗಳ ಹಿಂದೆ ಬೇರೆಲ್ಲವನ್ನೂ ಮರೆತು ಕೆಲಸ ಮಾಡುವ ಆ ವಿಜ್ಞಾನಿಗಳಿಗೆ ನಾನು ಕೃತಜ್ಞನಾಗಿರಲೇಬೇಕು.
೧. ಆ ಕಾಲಕ್ಕೊಂದು ಕೃತಜ್ಞತೆ. ಎಲ್ಲೂ ಎಲ್ಲೆಲ್ಲೂ ನಿಲ್ಲದೆ ನಿರಂತರ ಹರಿಯುತ್ತಿದೆಯಲ್ಲ ಆ ಕಾಲಕ್ಕೆ. ನಮ್ಮ ಬೇಸರದ ಕ್ಷಣಗಳನ್ನು ಮರೆಸುತ್ತದಲ್ಲ. ಆ ಕಾಲಕ್ಕೆ. ಸಂತೋಷದ ಗಳಿಗೆಗಳು ನಮ್ಮ ಜೀವನದಲ್ಲಿ ಮುಂದೆಂದೋ ಬರುತ್ತದೆ ಎಂದು ನಾವು ಭರವಸೆ ಇಟ್ಟುಕೊಳ್ಳುವಂತೆ ಮಾಡುತ್ತದಲ್ಲ. ಆ ಕಾಲಕ್ಕೆ. ವೀರ್ಯಾಣುವನ್ನು ಭ್ರೂಣವಾಗಿಸಿ, ಮಗು – ಮಕ್ಕಳಾಗಿಸಿ, ಯುವಕರು, ದೊಡ್ಡವರನ್ನಾಗಿಸಿ, ಮುದುಕರನ್ನಾಗಿಸಿ ಸಾಯಿಸುತ್ತದಲ್ಲ ಆ ಕಾಲಕ್ಕೆ. ಸಂತೋಷ, ದುಃಖಗಳನ್ನು ಚಕ್ರಗಳಂತೆ ಸುರುಳಿ ಸುತ್ತಿಸುತ್ತದಲ್ಲ ಆ ಕಾಲಕ್ಕೆ. ಕತ್ತಲು ಭೀಕರವಾಗುತ್ತಾ ಸಾಗುತ್ತದೆ. ಪ್ರಪಂಚದ ಎಲ್ಲ ಜೀವಿಗಳು ಸ್ತಬ್ಧವಾಗುತ್ತವೆ. ಅದೆಷ್ಟೋ ಹೊತ್ತಿನ ನಂತರ ಸೂರ್ಯಕಿರಣಗಳನ್ನು ತಂದು ಆ ಕತ್ತಲನ್ನು ಓಡಿಸುತ್ತದಲ್ಲ. ಅದು ಆ ಕಾಲ ಪುರುಷನ ಆಟ. ಅವನಿಂದಲೇ ನಮ್ಮೆಲ್ಲರ ಬದುಕಿನಲ್ಲಿ ಏನೆಲ್ಲ ಬದಲಾವಣೆಗಳು. ಒಳಿತು, ಕೆಡುಕುಗಳು. ಅವನಿಗೊಂದು ಸಲಾಂ.
೨. ಬ್ರಹ್ಮಾಂಡದಲ್ಲಿ ನಾನೆಂತ ಸರಿಯಾದ ಭಾಗದಲ್ಲಿ ಜೀವಿಸುತ್ತಿದ್ದೇನೋ ಆ ಭೂಪ್ರದೇಶಕ್ಕೆ ಋಣಿ. ನಾನಿರುವ ಜಾಗದಲ್ಲಿ ಪ್ರಕೃತಿ ವಿಕೋಪಗಳಾದ ಭೂಕಂಪನ, ಸುನಾಮಿಗಳಿಲ್ಲ. ಉಷ್ಣತೆ ೩೬೫ ದಿನವೂ ಸಹನೀಯ. ಭಯೋತ್ಪಾದಕರ ಧಾಳಿ ಹೆಚ್ಚಿಲ್ಲ. ಅತಿವೃಷ್ಟಿ, ಅನಾವೃಷ್ಟಿಗಳು ಹೆಚ್ಚಿಲ್ಲ. ಜನರು ಧರ್ಮ ಸಹಿಷ್ಣುಗಳು. ನಿರುದ್ಯೋಗ ಹೆಚ್ಚಿಲ್ಲ. ತುತ್ತಿನ ಕಾರಣಕ್ಕಾಗಿ ಜನ ಸಾಯುತ್ತಿಲ್ಲ. ಸಾಂಕ್ರಾಮಿಕ ರೋಗಗಳು ಹೆಚ್ಚಿಲ್ಲ. ಜೂಜಾಟಗಳು ಹೆಚ್ಚಿಲ್ಲ. ಹೆಚ್ಚಿನ ಕುಟುಂಬ ಬಡವರಾದರೂ ನೆಮ್ಮದಿಯಿಂದ ಬದುಕುವ ಕುಟುಂಬಗಳು. ಕಲೆಗಳಿಗೆ ಪ್ರೋತ್ಸಾಹವಿರುವ ಪ್ರದೇಶ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳದ ಪ್ರದೇಶ. ವಿಭಿನ್ನ ಆಚರಣೆಗಳನ್ನು ಹೊಂದಿದರೂ ಪರಸ್ಪರ ಗೌರವದಿಂದ ಬದುಕುವ ಜನರ ಪ್ರದೇಶ. ಬೇರೆ ದೇಶಗಳ ಮೇಲೆ, ಬೇರೆ ಧರ್ಮಗಳ ಮೇಲೆ ಧಾಳಿ ಮಾಡದ ಪ್ರದೇಶ, ಪ್ರಪಂಚಕ್ಕೆ ಹೊಸ ಧರ್ಮಗಳನ್ನು ಕೊಟ್ಟ ಪ್ರದೇಶ, ವಿಜ್ಞಾನಿ, ತಂತ್ರಜ್ಞರು, ವೈದ್ಯರು, ಶಿಕ್ಷಕರು, ಸಾಹಿತಿಗಳು, ಚಿಂತಕರುಗಳನ್ನು ಕೊಟ್ಟ ಪ್ರದೇಶ. ಇಂತಹ ಭರತಭೂಮಿಯಲ್ಲಿ ಕನ್ನಡಿಗನಾಗಿ ಬೆಳದದ್ದು ಪುಣ್ಯ. ಈ ನಾಡಿಗೆ ಕೃತಜ್ಞ.
೩. ಆ ನನ್ನ ಪ್ರಿಯ ಮಡದಿ, ಮಗನಿಗೆ ಕೃತಜ್ಞ. ನನಗಾಗಿ, ನನ್ನ ಸಂಸಾರಕ್ಕಾಗಿ ಆಕೆಯ ತ್ಯಾಗ ದೊಡ್ಡದು. ಆಕೆಯ ಮಾತಾ – ಪಿತೃಗಳ ಪ್ರೇಮ ದೊಡ್ಡದು. ಅಕ್ಕ, ಭಾವನ ಪ್ರೀತಿ ದೊಡ್ಡದು. ಅವರು ನಮ್ಮ ಮೇಲಿಟ್ಟಿರುವ ಅಕ್ಕರೆ, ಅಭಿಮಾನ ದೊಡ್ಡದು. ನಮಗೆ ನೀಡುವ ಸಲಹೆ, ಸಹಕಾರಗಳು ಅಮೂಲ್ಯ. ನಮ್ಮ ಸಮಾರಂಭಗಳಲ್ಲಿ, ಹುಟ್ಟು, ಸಾವುಗಳಲ್ಲಿ ಈ ಎಲ್ಲ ಹತ್ತಿರದ ಬಂಧು ಬಾಂಧವರ ಸಹಕಾರ ಅಮೂಲ್ಯ. ಅವರೆಲ್ಲರಿಗೆ ನಾನು ಸದಾ ಋಣಿ. ಕೃತಜ್ಞ.
ಇದೊಂದು ಉತ್ತಮ ಚಟುವಟಿಕೆ, ಹವ್ಯಾಸ. ೫ ದಿನಗಳ ಕಾಲ ಬೆಂಬಿಡದೆ ಚಿಂತನೆಗೆ ಹಚ್ಚಿದ್ದು. ನಾನೆಷ್ಟರವನೆಂಬಂತೆ ಮಾಡಿದ್ದು. ಮತ್ತು ನಾನೆಷ್ಟರವನೆಂಬುದನ್ನು(ಹೆಮ್ಮೆ) ತಂದು ಕೊಟ್ಟದ್ದು. ಬರೆಯಲು ಪ್ರಯತ್ನಿಸಿ.
No comments:
Post a Comment