Thursday, May 26, 2011

ಶಾಪ‌

ಓ ಮೇಘಗಳೇ,
ಓಡುವಿರೆಲ್ಲಿಗೆ...?
ಧೋ ಎಂದಿಲ್ಲಿಯೇ
ಸುರಿಯಬಾರದೇ...?

ತೋಯುವಾಸೆ ನನಗೆ
ನನ್ನ ಕಂಬನಿಯಲ್ಲೇ.
ಸಾಲದದು, ಕೃಪೆಮಾಡಿ
ನನ್ನ ತೋಯಿಸಬೇಡವೇ...?

ಪರ್ವತಗಳ ಪ್ರೀತಿ ನಿಮಗೆ
ನನ್ನ ಹಾಗೇ...
ಓಡಿಹೋಗಿ ತಬ್ಬಿ ಹಿಡಿಯುವಿರಿ
ನನ್ನ ಹಾಗೇ...

ಇವನ ವೈರಾಗ್ಯದಂತೆ ಆ ಪರ್ವತ
ನಿಮ್ಮನೊಳಸೇರಿಸುವುದಿಲ್ಲವದು
ಮಳೆಯಾಗಿ ಕಂಬನಿಗೈಯುವಿರಿ
ನನ್ನ ಹಾಗೇ...

ಅತ್ತು ಅತ್ತು ಬಿಕ್ಕಳಿಬೇಕು ನಾನು.
ತೋಯ್ಸಿ ತೊಪ್ಪೆಗೊಳಿಸಬೇಕು ನೀವು.
ಅವನು ಸಾವಿಗಾಗಿ ಪರಿತಪಿಸಬೇಕು.
ಪರ್ವತಗಳ ತುದಿ ಸುಟ್ಟು ಸುಡಿಮಣ್ಣಾಗಬೇಕು.

ನೀಲ್ ಕಮಲ್ ಚೇರು

ಖಾಲಿ ಮನಸ್ಸಿನಿಂದ ಕಳೆದುಹೋಗಿ ಇಹ ಜಗತ್ತಿಗೆ ಮರಳಿದಾಗ ನನ್ನ ಗೆಳತಿಗೆ ಎದುರಿಗೆ ಕಂಡದ್ದು ನೀಲ್ ಕಮಲ್ ಪ್ಲಾಸ್ಟಿಕ್ ಚೇರು. ಒಂದೇ ಸಮನೆ ನಗಾಡಲಾರಂಭಿಸಿದಾಗ ದಂಗುಬಡಿಯುವ ಸರದಿ ನನ್ನದು. ವಿವರಿಸಲಾರಂಭಿಸಿದಳು.

ಅವಳ ಗೆಳತಿಗೆ ಅಂದರೆ ನನ್ನ ಗೆಳತಿಯ ಗೆಳತಿಗೆ ವರಾನ್ವೇಷಣೆಯ ಸಮಯ. ಫೋಟೋ ನೋಡಿ ತನಗೆ ಬೇಡವೆಂದರೂ, ಫೋಟೋದಲ್ಲಿ ಕೆಲವರು ದಪ್ಪಗಾಗಿ ಕಾಣುವವರುಂಟು. ಆದರೆ ಭೇಟಿಮಾಡಿ ನೋಡಿದರೆ ಒಮ್ಮೊಮ್ಮೆ ಸರಿಯಾಗಿದ್ದಾರೆ ಎನ್ನಿಸುವುದುಂಟು. ಹಾಗಾಗಿ ಮನೆಗೆ ಬರಲಿ ಬಿಡು, ಆಮೇಲೆ ನೋಡೋಣ ಎಂಬ ತಂದೆ-ತಾಯಿಯರ ಮಾತಿಗೆ ಇಲ್ಲವೆನ್ನಲಾಗಲಿಲ್ಲ ಅವಳಿಗೆ. ಸರಿ. ಒಂದು ಮೌಲ್ಯಯುತವಾದ ಭಾನುವಾರದಂದು ಭೇಟಿಗೆ ಸಜ್ಜಾದರು. ವರನನ್ನು ನೋಡಿದವಳಿಗೆ ತೆರೆದ ಬಾಯನ್ನು ಮುಚ್ಚಲು ’ಬಾಯಿ ತೆರೆದಿದೆ’ ಎಂದು ಮನಸ್ಸಿಗೆ ಅನ್ನಿಸುವಷ್ಟು ಸಮಯ ಹಿಡಿಯಿತು. ಕಮ್ಮಿ ಎಂದರೂ ೧೦೦ ಕೆ.ಜಿ. ಯಷ್ಟು ತೂಗಬಹುದವನು. ಕುಶಲೋಪಚಾರದ ನಂತರ ಅವರೀರ್ವರಿಗೇ ಏಕಾಂತದಲ್ಲಿ ಮಾತನಾಡುವ ಅವಕಾಶ. ’ಮಹಡಿಯ ಮೇಲೆ ಹೋಗಲಿ ಬಿಡಿ’ ಇವರ ಮಾತಿಗೆ ಅವರ ಒಪ್ಪಿಗೆ.ಮೇಲೆ ಒಂದು ಮಂಚ ಮತ್ತೊಂದು ನೀಲ್ ಕಮಲ್ ಚೇರು. ಇವಳು ಮಂಚದ ಮೇಲೆ. ಅವನು ಚೇರಿನ ಮೇಲೆ. ವರನೇ ಮಾತಿಗೆ ತೊಡಗಿದ.

'ನೀವು ಸಾಫ್ಟ್ ವೇರಂತೆ'.

'ಇಲ್ಲ, ನಾನು ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿ'.

'ಹಾಂ. ಅದೇ ನಾ ಹೇಳಿದ್ದು'.

ನೀಲ್ ಕಮಲ್ ಚೇರು ಯಾಕೋ ತೂಗುವಂತೆ ಕಾಣುತ್ತಿದೆ ಇವಳಿಗೆ. ಅವನಿಗೆ ಅದರ ಪರಿವೆ ಇದ್ದಂತೆ ಕಾಣಲಿಲ್ಲ. ಮತ್ತೆ ಮಾತಿಗೆಳೆದ.

'ನಾನೂ ಸಾಫ್ಟ್ ವೇರ್ ಉದ್ಯೋಗಿ. ನಂಗೆ ಒಬ್ಬಳು ಅಕ್ಕ. ಅವಳೂ ಸಹಾ. ನಾನು ಜಾವಾ ಮೇಲೆ ಕೆಲಸ ಮಾಡೋದು. ನಮ್ಮಕ್ಕ ಸಿ. ಪ್ಲಸ್. ಪ್ಲಸ್. ನೀವೂ ಕೂಡಾ ಸಿ. ಪ್ಲಸ್. ಪ್ಲಸ್. ಅಂತೆ. ಗುಡ್ ಗುಡ್.' ಇಷ್ಟು ಹೇಳಿದ್ದ. ನಾನು ಹಾಂ... ಎನ್ನುತ್ತಿದ್ದೆ ಅಷ್ಟೆ. ಫಟಾರ್... ತೂಗುತ್ತಿದ್ದ ನೀಲ್ ಕಮಲ್ ಚೇರು ನೆಲಕ್ಕುರುಳಿತ್ತು. ಹಿಂದಿನ ಎರೆಡು ಕಾಲುಗಳು ಎರೆಡು ದಿಕ್ಕುಗಳಿಗೆ. ’ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ’ ಎಂದು ಕೈ ಹಿಡಿದು ಏಳಲು ಸಹಾಯ ಮಾಡಬಹುದಿತ್ತು. ಮಾಡಬೇಕು ಅನ್ನಿಸಲಿಲ್ಲ ಇವಳಿಗೆ. ಆಘಾತದಲ್ಲೇ ಕುಳಿತಿದ್ದಳು. ಅವನೇ ಸಾವರಿಸಿಕೊಂಡು ಮೇಲೆದ್ದ. ಬಂದು ಮಂಚದ ಮೇಲೆ ಆಸೀನನಾದ.

’ಓಲ್ಡ್ ಚೇರಿರಬೇಕು’, ಕಷ್ಟದ ನಗೆ ತೋರಿಸಿ ಅಂದ.ಇವಳಿಗೆ ಮಂಚದ ಮೇಲೇ ಕಣ್ಣು.

ಎರಡು ದಿನದ ನಂತರ ಅವನ ತಂದೆ ಅವಳ ತಂದೆಗೆ ಫೋನಾಯಿಸಿದರು.

’ನಿಮ್ಮ ಮಗಳಿಗೆ ಏನನ್ನಿಸಿತಂತೆ ನಮ್ಮ ಮಗನ ಬಗ್ಗೆ’ - ಆ ಕಡೆಯಿಂದ.

’ನಮ್ಮ ಮಗಳಿಗೆ ಅಷ್ಟೊಂದು ಇಷ್ಟ ಆಗಲಿಲ್ಲ ನಿಮ್ಮ ಮಗ’ - ಇವಳ ತಂದೆ.

’ನಮ್ಮ ಮಗನದ್ದೂ ಅದೇ ಅಭಿಪ್ರಾಯ. ಆ ಚೇರೂ ಮುರ್ದೊಯ್ತಲ್ಲ...’ - ಆ ಕಡೆಯಿಂದ.

- ಮಾಧವ

ಓದಿದ್ದು - ಆದದ್ದು : ೩

ಲ. ನಾ. ಭಟ್ಟರು - ಏನು ಓದಿದೆ?

ನಾನು - ಮೊನ್ನೆ ನಾನು ಬಿ.ಇ. ಮಾಡ್ಬೇಕಿದ್ದಾಗ ಉಳಿದಿದ್ದ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ಗೆ ಹೊಗಿದ್ದೆ. ಅಲ್ಲಿಯ ಲೈಬ್ರರಿಯಲ್ಲಿ ಸುಮಾರು ೮ ರಿಂದ ೯ ಸಾವಿರ ಪುಸ್ತಕಗಳಿವೆ. ಅದರಲ್ಲಿ ಬಹಳಷ್ಟು ತೀರಾ ಹಳೆಯವು. ಸುಮಾರು ಪುಸ್ತಕಗಳನ್ನು ಬೇಕಾಗಿಲ್ಲವೆಂದು ತೀರ್ಮಾನಿಸಿ ಆರಿಸಿ ಒಂದು ಕೋಣೆಯಲ್ಲಿಟ್ಟಿದ್ದರು. ಅದರಲ್ಲಿ ನನಗೊಂದು ಪ್ರೊ. ರಾಮಕೃಷ್ಣ ರಾವ್ ಅವರು ಬರೆದ ’ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ’ ಅನ್ನುವ ಪುಸ್ತಕ ಸಿಕ್ಕಿತು. ಅದನ್ನೇ ಓದತೊಡಗಿದೆ.

ಲ. ನಾ. ಭಟ್ಟರು - ಏನಾದೆ?

ನಾನು - ಜ್ಯೋತಿಷ ಶಾಸ್ತ್ರವನ್ನು ಶಾಲಾ-ಕಾಲೇಜುಗಳ ಪಠ್ಯ ವಿಷಯವಾಗಿ ಸೇರಿಸಬೇಕೇ ಬೇಡವೇ ಎಂಬುದು ಬಹುದಿನಗಳ ಚರ್ಚೆ. ಜ್ಯೋತಿಷ ಎಂದರೆ ಕೇವಲ ಫಲ ಜ್ಯೋತಿಷ, ಹಿಂದಿನ ಕರ್ಮಗಳ ಆಧಾರದ ಮೇಲೆ ಒಬ್ಬ ಮನುಷ್ಯನ ಒಳಿತು-ಕೆಡುಕುಗಳನ್ನು ತೀರ್ಮಾನಿಸುವುದು, ಕಾಲವನ್ನು ಗಣನೆಗೆ ತೆಗೆದುಕೊಂಡು ಕೆಲಸ ಕಾರ್ಯಗಳನ್ನು ಆರಂಭಿಸುವುದು ಇತ್ಯಾದಿ.. ಮಾತ್ರವೆಂಬುದು ನನ್ನಂತವರ ತಿಳುವಳಿಕೆಯಾಗಿತ್ತು. ಆದರೆ ಜ್ಯೋತಿಷ ಶಾಸ್ತ್ರದಲ್ಲಿ ಇದೊಂದು ಅತಿ ಚಿಕ್ಕ ಭಾಗ, ಮತ್ತು ಹೆಚ್ಚಿನ ಗಣನೆಗೆ ತೆಗೆದುಕೊಂಡು ಇದೇ ಜ್ಯೋತಿಷವೆನ್ನುವುದು ತಪ್ಪು ಎಂದು ತಿಳಿಯಿತು. ಮನುಷ್ಯ ಹುಟ್ಟಿದ ಮೇಲಿನ ಸ್ವಲ್ಪ ಕಾಲಾನಂತರ, ತನ್ನ ಅನ್ನವನ್ನು ತಾನೇ ಬೆಳೆದುಕೊಳ್ಳಲು ಆರಂಭಿಸಿದ ಮೇಲೆ ಪರಿಸರದ ಅಧ್ಯಯನ ಅತ್ಯಗತ್ಯವಾಗತೊಡಗಿತು. ಹೀಗೆ ಪ್ರಾರಂಭಿಸಿದ್ದು ನಕ್ಷತ್ರ, ಗ್ರಹಗಳ ಅಧ್ಯಯನಕ್ಕೂ ಪ್ರೇರಣೆಯಾಯಿತು. ನದಿಯಲ್ಲಿ ಪ್ರವಾಹ ಬರುವುದಕ್ಕೂ ಮುಂಚೆ ಒಂದು ನಕ್ಷತ್ರ ಕಾಣಿಸಿಕೊಳ್ಳುವುದು ಮುಂತಾದದ್ದನ್ನು ಮಾನವ ಗುರುತಿಸುತ್ತಾ ಹೋದ. ಇಂತಹ ಒಂದು ಅಧ್ಯಯನಕ್ಕೆ ಭರತ ನಾಡಿನಲ್ಲಿ ಜ್ಯೋತಿಷ ಎಂಬ ಹೆಸರು. ಮತ್ತು ಅದರಲ್ಲಿ ಪಾಂಡಿತ್ಯ ಪಡೆದವನು ಜ್ಯೋತಿಷಿಯಾದ. ಅಂದರೆ ಜ್ಯೋತಿಷ ಎಂಬುದು ಖ(ಆಕಾಶ)ಗೋಳ(ಯಾವ ಕಡೆಯಿಂದ ನೋಡಿದರೂ ಒಂದೇ ರೀತಿ ಕಾಣುವುದು) ವಿಜ್ಞಾನದ ಅಧ್ಯಯನವೆಂದಾಯ್ತು. ಇಂಥಹ ಜ್ಯೋತಿಷದ ಜ್ಞಾನ ಯಾವ ಯಾವ ಶತಮಾನದಲ್ಲಿ ಪ್ರಪಂಚದ ಯಾವ ಯಾವ ಭಾಗಗಳಲ್ಲಿ ಹೇಗೆ ಹೇಗೆ ವೃದ್ಧಿಸಿತು, ಭಾರತೀಯರ ಕೊಡುಗೆ ಎಷ್ಟರ ಮಟ್ಟಿನದು ಮುಂತಾದವನ್ನು ರಾಮಕೃಷ್ಣ ರಾವ್ ಅವರು ತಿಳಿಸಿದರು. ಪ್ರಪಂಚದ ಯಾವ ಯಾವ ಭಾಗದಲ್ಲಿ ಯಾವ ಯಾವ ರೀತಿಯಲ್ಲಿ ಕಾಲವನ್ನು ಲೆಕ್ಕ ಹಾಕುತ್ತಾರೆ ಅಂತೆಲ್ಲಾ ಉದಾಹರಣೆಯ ಸಮೇತ ವಿವರಿಸುತ್ತಾ ಹೋಗ್ತಾರೆ. ಖಗೋಳ ಶಾಸ್ತ್ರದ ಬಗೆಗಿನ ಅವರ ಜ್ಞಾನವನ್ನು ನೋಡಿ ಬೆರಗಾಗುತ್ತದೆ ಭಟ್ಟರೆ. ಭಟ್ಟರಾದ ನಿಮಗೆ ಪಂಚಾಗದ ಬಗ್ಗೆ ಮಾಹಿತಿ ಇರಲೇಬೇಕು. ನಾನೂ ಕೂಡ ವೇದಾಭ್ಯಾಸ ಮಾಡುವಾಗ ಘಟಿಕಾ, ವಿಘಟಿಕಾ ಮುಂತಾದ ಶಬ್ದಗಳನ್ನ ಕೇಳಿದ್ದೆ. ಆದರೆ ಅವುಗಳ ಸರಿಯಾದ ಕಾಲ ಎಷ್ಟು ಎಂಬುದು ತಿಳಿದಿರಲಿಲ್ಲ. ೧ ಪ್ರಾಣಕ್ಕೆ ೪ ಸೆಕೆಂಡ್ ಅಂತೆ. ಅಂತಹ ೬ ಪ್ರಾಣಗಳಿಗೆ ೧ ವಿಘಟಿಕವಂತೆ, ಮತ್ತು ೬೦ ವಿಘಟಿಕಕ್ಕೆ ೧ ಘಟಿಕವಂತೆ. ಅಂತಹ ೬೦ ಘಟಿಕಗಳಿಗೆ ೧ ದಿನವಂತೆ. ಈ ದಿನ ಸರಿಯಾಗಿ ೨೪ ಘಂಟೆಗಳಾದವು. ಈಗ ಸ್ಪಷ್ಟವಾಯಿತು. ಇನ್ನು ಪಂಚಾಂಗವನ್ನು ಓದಿದರೆ ಸ್ವಲ್ಪ ಹೆಚ್ಚು ಅರ್ಥ ಮಾಡಿಕೊಳ್ಳಬಲ್ಲೆ.
ಭಟ್ಟರೆ, ಜ್ಯೋತಿಷವೆಂದರೆ ಫಲ ಜೋತಿಷ ಮಾತ್ರವಲ್ಲ. ಪದವಿ ಮತ್ತು ತದನಂತರದ ಖಗೋಳ ಶಾಸ್ತ್ರದ ಅಧ್ಯಯನಕ್ಕೆ ಪೂರ್ವಭಾವಿಯಾಗಿ ಜ್ಯೋತಿಷದ ಅಧ್ಯಯನ ಹೆಚ್ಚು ಮಹತ್ವದ್ದೆಂದು ಅನಿಸುತ್ತದೆ. ಇದರಿಂದ ಭಾರತೀಯರ ಖಗೋಳ ಶಾಸ್ತ್ರದ ಇತಿಹಾಸದ ಪರಿಚಯ ಮಾತ್ರವಲ್ಲದೆ, ಪದವಿ ಮತ್ತು ತದನಂತರದ ಅಧ್ಯಯನಕ್ಕೆ ಖಗೋಳ ಶಾಸ್ತ್ರವನ್ನು ಆರಿಸಿಕೊಳ್ಳಲು ಹೆಚ್ಚು ಸ್ಫೂರ್ತಿ ದೊರೆಯುತ್ತದೆಂಬುದು ನನ್ನ ಅಭಿಪ್ರಾಯ.
ಭಟ್ಟರೆ, ರಾಮಕೃಷ್ಣ ರಾವ್ ನಂತವರು ಬಹಳ ಅಪರೂಪ. ಖಗೋಳ ಶಾಸ್ತ್ರದ ಮೇಲೆ ಅತ್ಯಂತ ಅಧಿಕಾರಯುತವಾಗಿ ಮಾತನಾಡುವ ಮತ್ತು ಬರೆಯುವವರೆಂದು ಅವರ ಪುಸ್ತಕವನ್ನು ಓದಿದ ನಂತರ ಮತ್ತು ಸಭೆಯಲ್ಲಿ ಅವರನ್ನು ಹಲವಾರು ಭಾರಿ ನೋಡಿದ ನಂತರ ಅನುಭವವಾಗಿದೆ. ಅಂತಹವರ ಹತ್ತಿರ ಸಂಪದದಲ್ಲೇನಾದರೂ ಖಗೋಳ ಶಾಸ್ತ್ರದ ಬಗ್ಗೆ ಅಂಕಣಗಳನ್ನು ಬರೆಸಿದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ಅನಿಸುತ್ತದೆ.

-ಮಾಧವ

ನೋಡಿದ್ದು - ಕಲಿತದ್ದು

ಲ. ನಾ. ಭಟ್ಟರು - ಎನ್ನೋಡ್ದೆ?

ನಾನು - ನೋಡಬಾರದ್ದೇನೂ ಅಲ್ಲ. ನೋಡಬೇಕಂತನೂ ನೋಡಲಿಲ್ಲ. ಅಕಸ್ಮಾತ್ ನೋಡಿದೆ. ನೋಡಿರದಿದ್ದರೆ ಕಲಿಯುವಿಕೆ ಹಿಂದುಳಿಯುತ್ತಿತ್ತು. ಅವರು ಒಬ್ಬ ವ್ಯಕ್ತಿ. ಬಿಬಿಎಂಪಿ ಚುನಾವಣೆ ನಡೆದಿತ್ತಲ್ಲ. ಆಗ ನಾನು ಅವರನ್ನ ನೋಡಿದ್ದು. ಹೆಸರು - ಎನ್. ಎಸ್. ರಮಾಕಾಂತ್.

ಲ. ನಾ. ಭಟ್ಟರು - ಎನ್ಕಲ್ತೆ?

ನಾನು - ಅವರನ್ನ ನೋಡಿ ಸುಮಾರು ಕಲ್ತೆ. ಅವರೊಬ್ಬ ನಿವೃತ್ತ ಮೈನಿಂಗ್ ಇಂಜಿನಿಯರ್. ಜರ್ಮನಿಯಲ್ಲಿ ವಾಸವಾಗಿದ್ದವರು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ವಯಸ್ಸು ಎಪ್ಪತ್ತು ದಾಟಿರಬಹುದು. ಇಪ್ಪತ್ತು ವರ್ಷದವರನ್ನೂ ನಾಚಿಸುವಂತೆ ಅವರು ಕೆಲಸ ಮಾಡುತ್ತಿದ್ದಾರೆ. ನನಗಿನ್ನೂ ಅರ್ಥವಾಗದ ವಿಷಯವೆಂದರೆ ಆ ಸ್ಫೂರ್ತಿಯನ್ನು ಅವರಂತವರು ಹೇಗೆ ಕಾಪಾಡಿಕೊಂಡು ಬರುತ್ತಾರೆ ಎಂಬುದು. ಇಲ್ಲಿ ಅವರಂತವರು ಹೇಳಲಿಕ್ಕೆ ಉದ್ದೇಶವಿದೆ. ಇಂತದ್ದೇ ಇನ್ನೂ ಇಬ್ಬರನ್ನು ನಾನು ನೋಡಿದ್ದೇನೆ. ಡಾ. ಎನ್. ಆರ್.  ರಮೇಶ್ ಮತ್ತು ಸಂತೋಷ್ ಎಂಬ ಇನ್ನಿಬ್ಬರು. ಇವರಿಬ್ಬರು ರಮಾಕಾಂತ್ ಗಿಂತ ಸ್ವಲ್ಪ ಭಿನ್ನವಾಗಿ ನಿಲ್ಲುತ್ತಾರೆ. ಅವರ ಬಗ್ಗೆ ಇನ್ನೊಮ್ಮೆ ಹೇಳುತ್ತೆನೆ. ರಮಾಕಾಂತ್ ನೆಲೆಸಿರುವುದು ಬೆಂಗಳೂರಿನ ವಸಂತನಗರದಲ್ಲಿ. ಅಲ್ಲಿ ಇವರನ್ನು ಗಾರ್ಬೇಜ್ ಮ್ಯಾನ್ ಎನ್ನುತ್ತಾರೆ. ಅವರ ಮನೆಯಿರುವ ಪರಿಸರಕ್ಕೊಮ್ಮೆ ಭೇಟಿಯಿತ್ತರೆ ಇದರ ಕಾರಣ ಗೊತ್ತಾಗುತ್ತದೆ. ಇವರು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದವರು. ಇವರು ಕೈಗೆತ್ತಿಕೊಂಡ ವಿಷಯ ಕಸ ವಿಲೇವಾರಿ. ಅವರ ಮನೆಯ ಸುತ್ತಮುತ್ತಲಿನ ಎಲ್ಲ ಮನೆಯವರ ಮನವೊಲಿಸಿ ಕಸವನ್ನ ಅದರ ಮೂಲದಲ್ಲಿಯೇ ಬೇರ್ಪಡಿಸುವುದಕ್ಕೆ ಹಚ್ಚಿದರು (Dry and Wet waste segregation). ಅದರಿಂದ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸುವುದು ಇದರ ಉದ್ದೇಶ. ಹಸಿ ಕಸವನ್ನು ಇವರು ಗೊಬ್ಬರ ಮಾಡಲು ಇವರು ಉಪಯೋಗಿಸುತ್ತಾರೆ ಮತ್ತು ಒಣ ಕಸವನ್ನು ಮಾರುತ್ತಾರೆ(Re-cycling). ಇವರು ತಯಾರಿಸಿದ ಗೊಬ್ಬರವನ್ನು ಕುಮಾರಾಪಾರ್ಕ್ ಉದ್ಧಾರಕ್ಕಾಗಿ ಬಳಸುತ್ತಾರೆ. ಗಮನಿಸಿ. ಬೆಂಗಳೂರಿನಲ್ಲಿ ಉತ್ತಮವಾದ ಉದ್ಯಾನಗಳಲ್ಲಿ ಕುಮಾರಾಪಾರ್ಕ್ ಕೂಡ ಒಂದು. ಈ ಉದ್ಯಾನಕ್ಕೆ ಬಿಬಿಎಂಪಿಯಿಂದ ಪಡೆಯಲಾಗುವ ಅನುದಾನ ತೀರಾ ಕಮ್ಮಿ ಮತ್ತು ಪಡೆದದ್ದನ್ನು ಸಮರ್ಪಕವಾಗಿ ಉಪಯೋಗಿಸಲಾಗಿದೆ. ಇದು ರಮಾಕಾಂತರ ಅಪ್ಪನ ಮನೆಯ ಪಾರ್ಕ್ ಅಂತೂ ಅಲ್ಲ ತಾನೆ? ಹಾಗಿದ್ದರೂ ಅವರು ಸ್ವಯಂ ಸ್ಫೂರ್ತಿಯಿಂದ ಇದರ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರ ಮನೆಯ ಮೇಲೆ ಬೀಳುವ ಒಂದು ಹನಿ ಮಳೆಯೂ ಕಂಪೌಂಡ್ ದಾಟಿ ಹೊರಹೋಗುವ ಧೈರ್ಯ ಮಾಡುವುದಿಲ್ಲ. ಹಲವಾರು ಅಪಾರ್ಟ್ ಮೆಂಟ್ ಗಳಿಗೆ ಹೋಗಿ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಂತೆ ಗೋಳು ಹೊಯ್ದುಕೊಳ್ಳುತ್ತಾರೆ. ನಗರದ ಬೀದಿ ನಾಯಿಯ ಕಾಟಕ್ಕೆ ಪ್ರಮುಖ ಕಾರಣ ನಾವು ಎಲ್ಲೆಂದರಲ್ಲಿ ಕಸ ಹಣಿಯುವುದು ಎನ್ನುತ್ತಾರವರು. ತ್ಯಾಜ್ಯ ವಿಲೇವಾರಿ ವಿಷಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯವರಿಗೆ ಹಲವಾರು ಭಾರಿ ಟ್ರೈನಿಂಗ್ ಕೊಟ್ಟಿದ್ದಾರೆ.
ಹೀಗೊಮ್ಮೆ ಕಲ್ಪಿಸಿಕೊಳ್ಳಿ. ನೀವು ಮತ್ತು ನಿಮ್ಮ ಪ್ರೇಯಸಿ ಒಂದು ರೈಲ್ ನಲ್ಲಿ ಪ್ರಯಾಣಿಸುತ್ತಿದ್ದೀರಿ. ರೈಲಾದರೂ ಹೋಗುವ ದಾರಿ ಎಂಥದ್ದು? ಇಕ್ಕೆಲಗಳಲ್ಲೂ ಹೂಗಿಡಗಳನ್ನು ಬೆಳೆಸಲಾಗಿದೆ. ಇಂತಹ ಪ್ರಯಾಣ ನಿಮ್ಮ ಪ್ರೇಮವನ್ನು ಇಮ್ಮಡಿಗೊಳಿಸದೇ ಇರದು. ಆದರೆ ನಮ್ಮ ದೇಶದ ಯಾವುದೇ ನಗರದಲ್ಲಿ ರೈಲ್ ನಲ್ಲಿ ಸಂಚರಿಸುವಾಗಿನ ಸು-ವಾಸನೆ, ರೈಲ್ ಪ್ರಯಾಣದಿಂದಲೇ ನಮ್ಮನ್ನು ಹಿಮ್ಮೆಟ್ಟಿಸದೇ ಇರದು. ರೈಲ್ವೇ ಹಳಿಯ ಇಕ್ಕೆಲಗಳಲ್ಲೂ ಸಿಕ್ಕಾಪಟ್ಟೆ ಉಪಯೋಗಿಸದ ಭೂಮಿ ಎಲ್ಲೆಲ್ಲೂ ಇದೆ. ಈ ಭೂಮಿಯಲ್ಲಿ ಅಲ್ಪ-ಸ್ವಲ್ಪ ಉದ್ಯಾನಗಳನ್ನು ನಿರ್ಮಿಸಿದರೆ ಪ್ರಯಾಣಿಕರಿಗೂ ಹಿತ, ಗಲೀಜು ಮಾಡುವವರೂ ಮತ್ತೊಮ್ಮೆ ಯೋಚಿಸುವಂತಾಗುತ್ತದೆ. ಈ ಕೆಲಸವನ್ನು ವಸಂತನಗರದಲ್ಲಿ ರಮಾಕಾಂತ್ ರವರು ಸ್ವಯಂಸ್ಫೂರ್ತಿಯಿಂದ ಹೋರಾಡಿ ಸಾಧಿಸಿದ್ದಾರೆ. ವಸಂತನಗರಕ್ಕೆ ವಾಚನಾಲಯವನ್ನು ತಂದಿದ್ದಾರೆ. ಮಾಡಿರುವ ಕೆಲಸ ಸಾಕಷ್ಟಿದೆ.
ಭಟ್ಟರೆ, ಮಾಡಿರುವ ಕೆಲಸಕ್ಕಿಂತಲೂ ನನ್ನನ್ನು ಕಾಡುವ ಪ್ರಶ್ನೆ ಅವರ ಸ್ಫೂರ್ತಿಯದು. ನಿವೃತ್ತರಾಗಿ ಮನೆಯಲ್ಲಿ ಆರಾಮವಾಗಿ ಕೂರುವ ಬದಲು ಇದ್ದ ಬದ್ದ ಕೆಲಸಗಳನ್ನೆಲ್ಲಾ ಮೈಮೇಲೆಳೆದುಕೊಂಡು ಸಾಧಿಸಲು ಹೆಣಗತೊಡಗುತ್ತಾರೆ. ಇಂತವರಿಂದ ನಮಗೊಂದಿಷ್ಟು ಒಳ್ಳೆಯ ಬುದ್ಧಿ ಬಂದರೆ ಕಲಿತಂತಲ್ಲವೆ ಭಟ್ಟರೆ?

-ಮಾಧವ

ಓದಿದ್ದು - ಆದದ್ದು : ೨

 ಲ. ನಾ. ಭಟ್ಟರು - ಏನು ಓದಿದೆ?

ನಾನು - ಆಫೀಸಿಗೆ ಬರುವಾಗ ಹೋಗುವಾಗ ಸಿಗುವುದು ಸರಾಸರಿ ೩ ಘಂಟೆ. ಮೊದಲ ಓದು ವಿ.ಕ. ಮಧ್ಯಪುಟ. ನಂತರದ ಕೆಲಸ ಪದಬಂಧ. ಮತ್ತೊಂದಿಷ್ಟು ನೀರಸಾಧಕರು ಎದುರಾದರು.

ಲ. ನಾ. ಭಟ್ಟರು - ಏನಾದೆ?

ನಾನು - ಕಲಿತೆ. ನೀರ ಸಾಧಕರು ಸಾಕಷ್ಟು ಮಾತನಾಡಿದರು. ನಾವೇನು ಮಾಡಿದ್ದೆವು ಎಂದರು. ಅದಕ್ಕೆ ಪರಿಹಾರ ಕಂಡುಕೊಂಡ ಬಗ್ಗೆ ತಿಳಿಸಿದರು. ಇನ್ನೂ ಮಾಡುವ ಕೆಲಸದ ಬಗ್ಗೆ ಸಾಕಷ್ಟು ಹರಟಿದರು. ಭಟ್ಟರೆ, ನೀವು ವಿ.ಕ. ಓದುವಿರೋ ಇಲ್ಲವೋ ನನಗೆ ಗೊತ್ತಿಲ್ಲ. ನೀವುರುವಲ್ಲಿ ಬಹುಶಃ ಸಿಗಲಾರದು. ಇತ್ತೀಚೆಗೆ ನೇತ್ರಾವದಿ ನದಿ ತಿರುವಿನ ಬಗ್ಗೆ ಒಂದು ಸ್ವಾರಸ್ಯಕರ ಚರ್ಚೆ ವಿ.ಕ. ದಲ್ಲಿ ನಡೆಯುತ್ತಿದೆ. ದೂರದ ಲಂಡನ್ ನಲ್ಲಿ ಒಬ್ಬರು ಮೇಧಾವಿ ಮಧು ಸೀತಪ್ಪ, ಇಲ್ಲಿನ ಪ್ರಜ್ಞಾವಂತ ಪ್ರಜೆ ವಿನಾಯಕ ಭಟ್, ಮೂರೂರು ಇವರಿಬ್ಬರ ನಡುವೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಮಂಗಳೂರಿನ ತನಕ ಹರಿದು ಅರಬ್ಬೀ ಸಮುದ್ರ ಸೇರುವ ನೇತ್ರಾವದಿ ನದಿಯ ಸ್ವಲ್ಪ ಪ್ರಮಾಣ ತಿರುಗಿಸಿ ನಮ್ಮ ಬಯಲು ನಾಡಿಗೆ ಹರಿಸಬೇಕೆಂಬುದು ಮಧು ಸೀತಪ್ಪನವರ ವಾದ. ಹಾಗೆ ಮಾಡುವುದರಿಂದ ನಾನಾ ತರಹದ ಕಂಡರಿಯದ ಸಮಸ್ಯೆಗಳು ಪಶ್ಚಿಮ ಘಟ್ಟ, ಮತ್ತು ಕರಾವಳಿಯಲ್ಲಿ ಬರಬಹುದೆಂಬುದು ವಿನಾಯಕ ಭಟ್ಟರ ವಾದ. ಇವರಿಬ್ಬರ ಚರ್ಚೆಯಲ್ಲಿ ನಾನು ತಿಳಿದದ್ದು ಬಹಳಷ್ಟು. ಅಂಕಿ ಅಂಶಗಳ ಸಮೇತ ಇಷ್ಟೇ ನೀರನ್ನು ಹೀಗೆಯೇ ತಂತ್ರಜ್ಞಾನ ಉಪಯೋಗಿಸಿ ಬಯಲು ನಾಡಿಗೆ ಹರಿಸಲಾಗುವುದೆಂದು ಮಧು ಸೀತಪ್ಪನವರು ಹೇಳಿದರೆ, ಅತಿ ಹೆಚ್ಚಿನ ಖರ್ಚು ಮಾಡಿ ಅಷ್ಟು ದೊಡ್ಡ ಯೋಜನೆಯಡಿ ನೀರು ಹರಿಸುವಂತಹ ಅಗತ್ಯ ಬಂದಿಲ್ಲ. ಬಯಲು ನಾಡಿನ ಅಸಂಖ್ಯಾತ ಕೆರೆ-ಕಟ್ಟೆಗಳು ಹೂಳು ತುಂಬಿ ಇಂದು ಬತ್ತಿ ಕುಳಿತಿವೆ. ಅದರ ಪುನರಜ್ಜೀವನ ಅಲ್ಲಿನ ಜನರಿಗೆ ತುರ್ತಿನ ಹಾಗೂ ಶಾಶ್ವತದ ಪರಿಹಾರ, ಎಂಬುದು ವಿನಾಯಕ ಭಟ್ಟರ ಮಾತು. ಪಶ್ಚಿಮ ಘಟ್ಟದ ಪ್ರಾಣಿ-ಪಕ್ಷಿ ಸಂಕುಲಗಳಿಗೆ, ನದಿಯ ನೀರಿಗೆ ಅಪಾಯವಾಗದ ಹಾಗೆ ನದಿಯನ್ನು ತಿರುಗಿಸಲಾಗುವುದೆಂದು ಸೀತಪ್ಪನವರೆಂದರೆ, ಒಂದು ವೇಳೆ ಅಪಾಯವಾದರೆ ಅನಂತರೆ ಅದನ್ನ ಸರಿಪಡಿಸಲಾಗುವುದಿಲ್ಲವೆಂಬುದು ವಿನಾಯಕ ಭಟ್ಟರ ವಾದ. ಇವರಿಬ್ಬರ ಚರ್ಚೆಯನ್ನು ಗಮನಿಸುತ್ತಾ, ನೀರಸಾಧಕರು ಓದಿದರೆ ವಿನಾಯಕ ಭಟ್ಟರ ಮಾತಿನಲ್ಲಿ ಸತ್ಯವಿದೆ ಎಂದೆನಿಸುತ್ತದೆ. ನೀರಸಾಧಕರಲ್ಲಿ ಇವರಿಬ್ಬರ ಚರ್ಚೆಗೆ ಉತ್ತರವಿದೆ. ಕೋಲಾರದ ಮುಳಬಾಗಿಲು ತಾಲ್ಲೂಕಿನ ಚಿಕ್ಕ ಹಳ್ಳೀ ಹೊಸ ಕೆರೆಯ ಪುನರುಜ್ಜೀವನ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಾರೋಗೇರಿ, ಕಾಮಧೆನು ಗ್ರಾಮಗಳ ಬಾಂದಾರ, ದೂರದ ಬೆಳಗಾವಿಯ ಸಾಲಿಮಠರ ಬೋರ್ವೆಲ್ ಗೆ ನೀರುಣಿಸುವ ಯಶಸ್ಸು, ಕೋಲಾರದ ಮುಳಬಾಗಿಲು ತಾಲೂಕಿನ ಕುನಿಬಂಡಿ ಮಂದಿಯ, ಬಿಜಾಪುರದ ಯತ್ನಾಳದ ಹಳ್ಳದ ಒಡ್ಡು ಹೀಗೆ ನಾನಾ ತರಹ ನೀರಿನ ಕತೆಗಳಲ್ಲಿವೆ. ಇವ್ಯಾವುವೂ ನದಿ ನೀರನ್ನು ತಿರುಗಿಸಿಯದವಲ್ಲ. ಎಲ್ಲವೂ ಮಳೆಯಾಧಾರಿತ. ಬಿದ್ದ ಅಲ್ಪ ಮಳೆಯನ್ನು ಹಿಡಿದಿಟ್ಟರೆ ಮತ್ತು ಮಿತವ್ಯಯಿಸಿದರೆ, ನಾವೂ ಬೆಳೆದು ಇತರರಿಗೂ ಹಂಚಬಹುದೆಂದು ನೀರಸಾಧಕರು ತೋರಿಸಿಕೊಟ್ಟಿದ್ದಾರೆ. ಭಟ್ಟರೆ ಇನ್ನೊಂದು ವಿಷಯ - ನಾವು ನೀರಿಂಗಿಸಿದರೆ ಅದು ನಮಗೆ ಸಿಗದಿರಬಹುದು, ಆದರೆ ಅದು ನಮ್ಮೂರಿನ ಹತ್ತು ಜನಕ್ಕೆ ಕೊಡದೆ ಹೋಗುವುದಿಲ್ಲ.

-ಮಾಧವ

ಓದಿದ್ದು - ಆದದ್ದು

ಲ. ನಾ. ಭಟ್ಟರು - ಏನು ಓದಿದೆ?

ನಾನು - ನಿಮ್ಮೂರಿನ ಬಗ್ಗೆ ಓದಿದೆ. ನಿಮ್ಮ ತಲೆಯಲ್ಲಿ ! ಚಿಹ್ನೆ ಬರಲಿ ಎಂದೇ ಹಾಗಂದೆ. ಅದು ನಮ್ಮೂರೂ ಹೌದು. ಪ್ರಾರಂಭವಾಗುವುದು ಮಳೆಗಾಲ. ನೀರಿನ ಬಗ್ಗೆ ಓದೋಣವೆಂಬ ಮನಸ್ಸು. ಅಂಕಿತದಲ್ಲಿ ಪಡ್ರೆ ಇರಲಿಲ್ಲ. ರಾಧಾಕೃಷ್ಣ ಭಡ್ತಿ ಸಿಕ್ಕರು. ಅವರನ್ನೇ ಕೇಳಿದಾಗ "ನೀರಸಾಧಕರು" ಕೊಟ್ಟರು. ಅದರಲ್ಲಿನ ನಮ್ಮೂರಿನ ಬಗ್ಗೆಯೂ ಇದ್ದ ಲೇಖನ ಕಂಡು ಸಂತಸವಾಯಿತು.

ಲ. ನಾ. ಭಟ್ಟರು - ಏನಾದೆ?

ನಾನು - ನೀಚಡಿ ಎಂಬ ಶಬ್ದ ನೀರತಡಿ ಎನ್ನುವ ಶಬ್ದದಿಂದ ಬಂದದ್ದೆಂದು ನೀವು ನನಗೆ ಹೇಳಿರಲಿಲ್ಲ. ಭಡ್ತಿಯವರ ಲೇಖನ ಓದಿ ತಿಳಿದೆ. ಹತ್ತಾರು ಹಳ್ಳಿಗಳ ನೀರುಳಿಸಿದ ಯಶಸ್ಸಿನ ಕತೆಗಳಲ್ಲಿದ್ದವು. ಪ್ರಕೃತಿಯನ್ನು ನೋಡಿ ಆಶ್ಚರ್ಯಗೊಂಡೆ. ಭೂಮಾತೆಗೆ ಪ್ರಾಣಿ-ಪಕ್ಷಿ, ಹೂಗಿಡ, ಮರ, ಮಾನವರಿಗೆಲ್ಲರಿಗೂ ನೀರು ಬೇಕೆಂದು ಗೊತ್ತವಳಿಗೆ. ನಾಲ್ಕು ತಿಂಗಳು ಹೊಲದಲ್ಲಿ ದುಡಿದು ಉಳಿದಷ್ಟು ದಿನ ಬೆಳೆದದ್ದನ್ನು ಉಳಿಸಿ ತಿನ್ನುವವರು ನಾವು, ಬುದ್ಧಿವಂತರೆಂಬುದೂ ಗೊತ್ತವಳಿಗೆ.  ಅದಕ್ಕೇ ಮಳೆಗಾಲವೆಂಬುದೊಂದನ್ನು ಮಾಡಿ, ನಾಕೊಟ್ಟೆ, ಈಗ ನಿಮ್ಮ ಬುದ್ಧಿಯುಪಯೋಗಿಸಿ ಎನ್ನ್ನುತ್ತಿದ್ದಾಳೆಂಬುದನ್ನು ತಿಳಿದೆ. ಹಾಗೆ ಬುದ್ಧಿಯುಪಯೋಗಿಸಿದ ಹತ್ತಾರು ಹಳ್ಳಿಗಳ ಜನರಿದ್ದಾರೆ, ಇನ್ನೂ ಉಪಯೋಗಿಸದ ನನ್ನಂತವರೂ ಇದ್ದಾರೆ ಎಂಬುದನ್ನು ತಿಳಿದೆ. ಸ್ವಲ್ಪ ಜಾಸ್ತಿಯೇ ಮತಿ ಬಳಸಿದ ಪಡ್ರೆ, ಭಡ್ತಿ ಮುಂತಾದವರೂ ಇದ್ದಾರೆ. ನಾವು ಹೂಂ ಎಂದರೆ, ಹಾರಿಸುವಷ್ಟು ಮಾಹಿತಿ ಅವರಲ್ಲಿದೆ ಎಂಬುದನ್ನು ತಿಳಿದೆ. ಭಟ್ಟರೆ, ನಾನೂ ಏನಾದರೂ ಮಾಡುವೆ.
-ಮಾಧವ
೨೬-೪-೨೦೧೦

ಸಿಟ್ಟು

ಇಂದೇಕೋ ಬೇಸರ
ಸೋತುಹೋದ ಅನುಭವ
ಇಂದಿನ ಈ ಬೇಸರ
ಹಿಂದಿನ ಸಿಟ್ಟಿನ ಪ್ರತಿಫಲ
ಸಿಟ್ಟದೇಕೋ ಬಂತು
ಅದರ ಪಾಡಿಗೆ ಅದು ಹೋಯ್ತು
ಬರುತಾ ತರಲಿಲ್ಲವೇನನ್ನೂ
ಬೇಸರವುಳಿಸದೇ ಹೋಗಲಿಲ್ಲವೆನ್ನು
ಬಂದ ಸಿಟ್ಟಿಗೆ ಬಯ್ದೆ ನನ್ನಾಕೆಗೆ
ಆಗ ಗೊತ್ತಗಲಿಲ್ಲ ಅದು ನನಗೇ
ಅವಳ ಗುಣ ದೊಡ್ಡದು
ಹೀರಿಕೊಳ್ಳುವುದದು ಕಷ್ಟಗಳನೆಂದೂ
ನನ್ನಾಕೆಯ ನಾ ಪ್ರೀತಿಸುವೆ
ತುಸು ಹೆಚ್ಚಿಯೇ ಪ್ರೀತಿಸುವೆ
ಮಿತವೆಲ್ಲವು ಹಿತವು
ಅಮಿತ ಪ್ರೀತಿಯು ಅಹಿತವು
ಅವಳೆಂದಳು-
ನಾ ಅನುಸರಿಸಿ ಹೋಗುವೆ
ನಿನ್ನ ಜೊತೆ ಸಾಗುವೆ
ಅನುಸರಿಸುವಂತಾದೆ ನಾನು
ಬೇಸರವಯಿತೆಂದಿತು ಮನವು

ಹಿಮಾ-ಲಯ

ಈ ವರ್ಷದ ನೊಬೆಲ್ ಪುರಸ್ಕಾರವನ್ನು ಶ್ರೀಮಾನ್ ಲ.ನಾ.ಭಟ್ ರವರಿಗೆ ನೀಡಲಾಗಿದೆ. ತೀರ ಪ್ರದೇಶದ ಜೀವಿಗಳು ಸಮುದ್ರ ಮಟ್ಟದ ಏರಿಕೆಯಿಂದಾಗಿ ಮೃತಪಟ್ಟಿದ್ದು ಅದು ಇನ್ನು 1000 ವರ್ಷಗಳ ನಂತರ ನಮಗೆ ಇಂಧನವಾಗಿ ದೊರಕಲಿದ್ದಾರೆ ಎನ್ನುವ ಮಹತ್ತರವಾದ ಸಂಶೋಧನೆಗೆ ಅವರಿಗೆ ಪುರಸ್ಕಾರ ದೊರಕಿದೆ. ಎಲ್ಲ ತೀರ ಪ್ರದೇಶಗಳು ಮುಳುಗಿ ಪರ್ವತ ಪ್ರದೇಶಗಳೆಂದು ಬಿಂಬಿತವಾಗಿದ್ದ ಭೂ ಪ್ರದೇಶಗಳು ಮಾತ್ರ ಉಳಿದಿದ್ದು ಎಲ್ಲ ಜನರು ಅಲ್ಲಿಗೆ ಲಗ್ಗೆ ಇಟ್ಟು ಕುಳಿತಿದ್ದಾರೆ. ಭಾರತದ ಹಿಮಾಲಯ ಪರ್ವತವು ಹಿಮವನ್ನು
ಕಳೆದುಕೊಂಡು ಹಿಮಾ-ಲಯವಾಗಿ ಈಗ ವಾಸಯೋಗ್ಯವಾಗಿದೆ. ಅಲ್ಲಿ ಭಾರತದ ಮಹಾಜನತೆಯೂ, ಪಾಕಿಸ್ತನ, ಚೀನಾ ಮತ್ತು ಅಕ್ಕಪಕ್ಕದ ದೇಶಗಳ ಮಹಾಜನರು ಜೀವಿಸುತ್ತಿದ್ದಾರೆ. ಎಲ್ಲ ಖಂಡಗಳ ಎತ್ತರದ ಭಾಗಗಳು ಮಾತ್ರ ಉಳಿದಿದ್ದು ಮತ್ತೆಲ್ಲ ಜಲಪ್ರಳಯದಲ್ಲಿ ಮುಳುಗಿಹೋಗಿವೆ. ಅಲ್ಲಿಗೆ ಹಿಂದೂಗಳು, ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು, ಯಹೂದಿಗಳು, ಪ್ಯಾಲಿಸ್ತೇನಿಯನ್ನರು ಮುಂತಾದ ಮತ ಭಾಂದವರೆಲ್ಲರು ಲಗ್ಗೆ ಇಟ್ಟು ಸಂಸಾರ ನಡೆಸುತ್ತಿದ್ದಾರೆ. ಹಿಂದಿನ ಹಾಗಲ್ಲದೆ ತಮ್ಮ ಮತ ಭಾಂದವರ ಸಂಖ್ಯೆಯನ್ನು ವೃದ್ಧಿಸಲು ಕೆಲವರಿಗೆ ಈಗ ಅನುಕೂಲವಾಗಿದೆ. ತಮ್ಮ ಜಾಗವೆಂದು ಹೇಳಿ ಭಯೋತ್ಪಾದನೆಯನ್ನು ಮಾಡುತ್ತಿದ್ದವರಿಗೆ ಅವರ ಜಾಗವೆಲ್ಲ ನೀರಿನಲ್ಲಿ ಮುಳುಗಿ ಕೆಲಸವಿಲ್ಲದಂತಾಗಿದೆ. ಹಿಮಾ-ಲಯಕ್ಕೊಸ್ಕರ ಭಾರತ, ಪಾಕಿಸ್ತಾನ, ಚೀನಾ ಮುಂತಾದವೆಲ್ಲ ಹೊಸ ಯುದ್ಧಗಳನ್ನು ಪ್ರಾರಂಭಿಸಿವೆ. ಓಂದು ತಮಾಶೆಯೆಂದರೆ ಈಗ ಇವುಗಳಿಗೆಲ್ಲ ಖಂಡಾಂತರ ಕ್ಷಿಪಣಿಗಳ ಅಗತ್ಯವಿಲ್ಲ. ಎಲ್ಲರು ಅಲ್ಲಲ್ಲೆ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.
ಮಹಾಜನರಿಗೆಲ್ಲ ಊಟದ ಕೊರತೆ ಉಂಟಾಗಿದೆ. ಗಾಂಧಿ ತಮ್ಮ ಉಪವಾಸವನ್ನು ಪುನ: ಪ್ರಾರಂಭಿಸಿದ್ದಾರೆ. ಊಟದ ಕೊರತೆಯನ್ನು ನೀಗಿಸಲು ಎಲ್ಲರು ಪ್ರತಿ ಸೋಮವಾರ ಉಪವಾಸ ಕೈಗೊಳ್ಳಿರೆಂದು ಉಪದೇಶಿಸುತ್ತಿದ್ದಾರೆ. ಮುಸಲ್ಮಾನ ಹಿಂದೂಗಳೆಲ್ಲ ಒಂದೆಂದು, ಒಟ್ಟಿಗೆ ಬಾಳಿದರೆ ಮಾತ್ರ ನೆಮ್ಮದಿ ಸಾಧ್ಯ ಎಂದು ಚಳುವಳಿ ಸಾರಿದ್ದಾರೆ. ತೆರೇಸಾ ಹೊಸ ಹೊಸ ಸಾಂಕ್ರಮಿಕ ರೋಗಗಳಿಂದ ಜರ್ಜರಿತರಾದವರ ಶುಶ್ರೂಷೆ ಕೈಗೊಂಡಿದ್ದಾರೆ. ನಾಸಾದವರು ಸಮಸ್ಯೆಗೆ ಪರಿಹಾರ ಅನ್ಯ ಗ್ರಹಗಳ ಆಕ್ರಮಣದಿಂದ ಮಾತ್ರ ಸಾಧ್ಯವೆಂದು ನಂಬಿದ್ದಾರೆ. ಮತ್ತು ಆ ದಿಶೆಯಲ್ಲಿ ಸತತ ಪ್ರಯತ್ನ ನಡೆಸಿದ್ದಾರೆ. ಉಪಗ್ರಹಗಳು ಮಾತ್ರ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯಾವ ಭಗಗಳು ಹಿಮವನ್ನು ಯಾವ ಯಾವ ಪ್ರಮಾಣದಲ್ಲಿ ಕಳೆದುಕೊಳ್ಳುತ್ತಿವೆ ಮತ್ತು ಎಷ್ಟು ವಾಸಯೋಗ್ಯವಾಗಿ ಪರಿವರ್ತಿತವಾಗುತ್ತಿವೆ ಎಂಬ ಮಾಹಿತಿಯನ್ನು ತಪ್ಪದೆ ರವಾನಿಸುತ್ತಿವೆ. ಹಿಮಾ-ಲಯ, ಆಲ್ಫ್ಸ್ ಮುಂತಾದ ಪರ್ವತಗಳನ್ನು ನೋಡಿದರೆ ಜಾತ್ರೆಯ ನೆನಪಾಗುತ್ತಿದೆ. ಹಿಂದೊಮ್ಮೆ ಶಾಂತವಾಗಿ ಅನೇಕ ಋಷಿ ಮುನಿಗಳ ಜ್ಞಾನ ವೃದ್ಧಿಯ ಸ್ಥಳಗಳಾಗಿದ್ದವಿಂದು ಕೊಲೆ, ಕಳ್ಳತನ, ಸುಲಿಗೆ, ವ್ಯಭಿಚಾರ, ಯುದ್ಧ, ರಾಜಕೀಯ, ಕಪಟ, ಮೋಸಗಳ ಆಗರವಾಗಿದೆ.
ಸಿಂಗಪುರ ಸರ್ಕಾರವು ತಮ್ಮ ಪ್ರಜೆಗಳಿಗೆ ಇನ್ನು ಮಕ್ಕಳನ್ನು ಹೆರಬೇಡಿ. ನೀವು ಮಾತ್ರ ಬದುಕಿ ಸಾಯಿರಿ, ಮಾನವ ಸಂಪತ್ತಿನ ಅವಶ್ಯಕತೆ ಇನ್ನಿಲ್ಲ, ನಿಮ್ಮ ವಿಧಿಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂಬ ಹೊಸ ತೀರ್ಮಾನವನ್ನು ಕೈಗೊಂಡಿದ್ದಾರೆ. ಪಾಕಿಸ್ತಾನದ ಜನತೆ ಜಮ್ಮು ಮತ್ತು ಕಾಶ್ಮೀರದ ತೀರಾ ಅವಶ್ಯಕತೆಯಲ್ಲಿದ್ದಾರೆ, ಹಾಗಾಗಿ ಆ ಭಾಗಗಳನ್ನು ಅವರಿಗೇ ಬಿಟ್ಟುಕೊಡುವ ಬಗ್ಗೆ ಚಿಂತಿಸಲಾಗಿವುದೆಂದು ನೆಹರು ಸರ್ಕಾರ ಹೇಳಿದೆ. ಅಮೆರಿಕವು ಅಣು ಒಪ್ಪಂದದ ವಿಚಾರದಲ್ಲಿ ಹೊಸ ನೀತಿಯನ್ನು ರಚಿಸಲಾಗುವುದೆಂದು ಹೇಳಿದೆ. ಹಲವಾರು ದೇಶಗಳು ನೀರಿನಡಿಯಲ್ಲಿ ಮುಳುಗಿಹೋಗಿರುವುದರಿಂದ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಲು, ಇರುವ ದೇಶಗಳು ಸಹಾಯಕ್ಕೆ ಮುಂದೆ ಬರಬೇಕೆಂದು ವಿಶ್ವಸಂಸ್ಥೆ ಕೇಳಿಕೊಂಡಿದೆ.
ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನಂದಿಬೆಟ್ಟದಲ್ಲಿ ಹೊಸ ಸರ್ಕಾರ ರಚಿಸಿದ ಮಾನ್ಯ ಶ್ರೀ ಯಡಿಯೂರಪ್ಪನವರು ಏನು ತೀರ್ಮಾನ ಕೈಗೊಳ್ಳುತ್ತಾರೆಂದು ಕಾದು ನೋಡಲು ತೀರ್ಮಾನಿಸಲಾಗಿದೆ.
-ಮಾಧವ

ಛೇ, ನಮಗೂ ಬಾಲವಿದ್ದಿದ್ದರೆ...

ವಿ.ಸೂ.:ಗಂಭೀರವಾಗಿ ಪರಿಗಣಿಸತಕ್ಕದ್ದಲ್ಲ.
ಡಾರ್ವಿನ್ನನ ನಿಯಮದಂತೆ ನಮ್ಮ ಬಾಲ ನಶಿಸಿಹೋಗಿ ಎಸ್ಟೋ ವರ್ಷಗಳಾದವಲ್ಲ. ನನಗೆ ನನ್ನ ಪೂರ್ವಜರ ಮೇಲೆ ಈದಿನ ಸಿಟ್ಟು ಬರುತ್ತಿದೆ. ದೇವರು ಕೊಟ್ಟಿದ್ದನ್ನು ಅವರು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗಾಗೇ ನಾವೀಗ ಬಾಲವಿಲ್ಲದೆ ಜನಿಸುವಂತಾಗಿದೆ. ಎಂತಹ ದುರ್ಗತಿಯಲ್ಲವೇ? ನಮಗೂ ಬಾಲವಿದ್ದಿದ್ದರೆ! ಎಷ್ಟು ಸೊಗಸಾಗಿರುತ್ತಿತ್ತು?
ನಾಡಿದ್ದು ಬರುವ ಒಲಂಪಿಕ್ಸ್ ನಲ್ಲಿ ಅದೆಂತದೋ ಇಬ್ಬರು ಕತ್ತಿ ಹಿಡಿದುಕೊಂಡು ಆಟವಾಡುತ್ತಾರಲ್ಲ, ಅದಕ್ಕೆ ಕೃತಕ ಬಾಲವನ್ನಳವಡಿಸುವ ತೊಂದರೆಯೇ ಇರುತ್ತಿರಲಿಲ್ಲ. ನಮ್ಮ ಬಾಲವನ್ನೇ ಹಿಡಿ ಹಿಡಿದು ಜಗ್ಗಬಹುದಿತ್ತು. ಎಲ್ಲ ಪ್ರಾಣಿಗಳ ಹಾಗೆಯೇ ನಾವೂ ನಮಗೆ ಬಾಲವಿದೆಯೆಂದು
ಹೇಳಿಕೊಳ್ಳಬಹುದಿತ್ತು. ಬುದ್ಧಿ ಚಾತುರ್ಯ, ನಗು ಮುಂತಾದವುಗಳೊಡನೆ ಬಾಲವೂ ಇದ್ದಿದ್ದರೆ, ನಾವೂ ಯಾವ ಪ್ರಾಣಿಗಳಿಗೂ ಕಡಿಮೆಯಲ್ಲವೆಂದು ಬೀಗಬಹುದಿತ್ತು. ಮೊನ್ನೆ ನನ್ನ ಸ್ನೇಹಿತನ ಹತ್ತಿರ ಈ ದು:ಖವನ್ನೇ ತೊಡಿಕೊಳ್ಳುತ್ತಿದ್ದೆ. ಯಾವ ಯಾವ ತರಹದ ಗತ್ತು
ಗಾಂಭೀರ್ಯವನ್ನು ನಾವು ಪ್ರದರ್ಶಿಸಬಹುದಿತ್ತು! ಒಬ್ಬೊಬ್ಬರಿಗೆ ಒಂದೊಂದಳತೆಯ ಬಾಲಗಳು. ಮಕ್ಕಳು ಕಾಲರ್ ಪಟ್ಟಿಯನ್ನು ಹಿಡಿದು ಹೊಡೆದಾಡುವುದರ ಬದಲು ಬಾಲವನ್ನು ಹಿಡಿದು ತಿರುಗಾಡಿಸಿ ಬಿಸಾಡಬಹುದಿತ್ತು ಇನ್ನೊಬ್ಬರನ್ನು. ಯುವಕರು ತಮ್ಮ ಬಾಲವನ್ನೇ ತಮ್ಮ ಸೌಂದರ್ಯ ಪ್ರದರ್ಶನಕ್ಕೊಸ್ಕರ ಬಳಸಬಹುದಿತ್ತು. ಒಬ್ಬೊಬ್ಬಾರು ಒಂದೊಂದು ರೀತಿಯ ಸ್ಟೈಲ್ ಮಾಡಬಹುದಿತ್ತು. ಈಗಿನ ಜಿಮ್ಗಳಲ್ಲಿ ಬಾಲದ ಸೌಂದರ್ಯ ವೃದ್ಧಿಗೋಸ್ಕರ ಹೊಸ ಹೊಸ ಉಪಕರಣಗಳನ್ನು ಕಂಡುಹಿಡಿಯುತ್ತಿದ್ದರೇನೋ? ಬಾಲದ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಮಾತ್ರೆಗಳು, ಸಾಬೂನುಗಳು, ಶಾಂಪೂಗಳು ಹೇರಳವಾಗಿ ಸಿಗುತ್ತಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ಹುಡುಗಿಯರು ತಮ್ಮ ತಮ್ಮ ಸೌಂದರ್ಯವನ್ನು ಅಳೆಯಲು ಬಾಲವನ್ನು ಹೊಸ ಕ್ರೈಟೀರಿಯಾವಾಗಿ ಸೇರಿಸಿಕೊಳ್ಳುತ್ತಿದ್ದರು. ವಿಶ್ವಸುಂದರಿ ಸ್ಪರ್ಧೆಯಲ್ಲಿ ಬಾಲವು ಸೌಂದರ್ಯವತಿಯನ್ನು ಆರಿಸುವಲ್ಲಿ ಖಂಡಿತವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿತ್ತು. ಸಿನಿಮಾ ತಾರೆಯರ
ಪೋಸ್ಟರುಗಳಲ್ಲಿ ಬಾಲವು ಪ್ರಮುಖ ಸ್ಥಾನವನ್ನಲಂಕರಿಸುತ್ತಿತ್ತು.
ಬಾಲವಿದ್ದಿದ್ದರೆ ನಮಗೆ ಇನ್ನೊಬ್ಬರ ಮನಸ್ಸನ್ನರಿಯಲು ಬಹಳವಾಗಿ ಅನುಕೂಲವಾಗುತ್ತಿತ್ತೆಂದು ನಾನು ಹೇಳಬಲ್ಲೆ. ಯಾಕೆಂದ್ರೆ ಸಂತೋಷವಾದಾಗ ನಮ್ಮ ಬಾಲ ಖಂಡಿತವಾಗಿ ಆಡಲು ಪ್ರಾರಂಭಿಸುತ್ತಿತ್ತು. ಹಾಗೆಯೇ ಇನ್ನೊಬ್ಬರನ್ನು ಕಂಡು ಭಯವಾದಾಗ ಅದು ಮುದುರಿಕೊಳ್ಳುವುದರಲ್ಲಿ ಅನುಮಾನವಿರಲಿಲ್ಲ. ಗರ್ವಿಷ್ಟರ ಬಾಲವು ಗರ್ವವನ್ನು ಸೂಚಿಸಲೆಂಬಂತೆ ಮೇಲಕ್ಕೆತ್ತಿರುತ್ತಿತ್ತು. ಇನ್ನೊಬ್ಬರನ್ನು ಹಾಳುಗೆಡವಲು ಹೊಂಚು ಹಾಕುತ್ತಿರುವವನದ್ದು ಬೆಕ್ಕು ಬೇಟೆಯಾಡುವಾಗ ನಿಧಾನವಾಗಿ ಅಲ್ಲಡಿಸುವುದಿಲ್ಲವೇ? ಹಾಗೆ ಅಲ್ಲಾಡಲು
ಶುರುಮಾಡುತ್ತಿತ್ತು. ಹಾಗಾಗಿ ನಾವು ನಮ್ಮ ಮನಸ್ಸಿನಲ್ಲಿರುವುದನ್ನು ಗುಟ್ಟುಮಾಡಲು ಸಾಧ್ಯವಿರದೇ ಸಂತೋಷವಾಗಿರಬಹುದಿತ್ತು.
ಈಗಿನ ನಾನಾ ವಿಧದ ಡಾಕ್ಟರುಗಳಂತೆ ಬಾಲದ ಸ್ಪೆಷಲಿಸ್ಟ್ ಒಬ್ಬೊರು ಖಂಡಿತ ಇರುತ್ತಿದ್ದರು. ಸಾಫ್ಟ್ ವೇರ್ ಇಂಜಿನಿಯರುಗಳು ತಮ್ಮೆರಡು ಕೈಗಳ ಜೊತೆ ಟೈಪ್ ಮಾಡಲು ಬಾಲದ ನೆರವನ್ನೂ ಪಡೆದುಕೊಳ್ಳುತ್ತಿದ್ದುದರಲ್ಲಿ ಅನುಮಾನವಿರಲಿಲ್ಲ. ತರುಣಿಯರ ಬಾಲದ ಸೌಂದರ್ಯ ವೃದ್ಧಿಗಾಗಿ ನಾನಾ ತರದ ಹಾರಗಳೂ, ಡ್ರೆಸ್ ಮೆಟೀರಿಯಲ್ಲುಗಳೂ ಬಂದು ಇನ್ನಷ್ಟು ವ್ಯಾಪರ ವೃದ್ಧಿಯಾಗುತ್ತಿತ್ತು. ತರುಣರು ಬಾಲಕ್ಕೆ ಟ್ಯಾಟೂಗಳನ್ನೂ, ರಿಂಗಳನ್ನೂ ಅಳವಡಿಸಿಕೊಳ್ಳುತ್ತಿದ್ದರು. ಈನ್ನೂ ಕೆಲವರು ಬಾಲವನ್ನು ಎಷ್ಟು ಬೇಕೋ ಅಷ್ಟನ್ನು ತುಂಡರಿಸಿಕೊಳ್ಳುತ್ತಿದ್ದರೇನೋ?
ಛೇ, ಎಷ್ಟು ತರದ ಉಪಯೋಗಗಳಿದ್ದರೂ ಇಂದು ನಮಗೆ ಬಾಲವಿಲ್ಲವಲ್ಲ ಅನ್ನೋ ಕೊರಗುವ ಮನಸ್ಥಿತಿ ಬಂದಿದೆ. ಇದಕ್ಕೆ ಯಾರನ್ನು ದೂಷಿಸಬೇಕೋ ತಿಳಿಯುತ್ತಿಲ್ಲ.
-ಬಾಲವಿಲ್ಲದ ಮಾಧವ.

ಇವೆಲ್ಲಾ ಇದ್ದಾ ಸಾಗರ್ದ್ ಜಾತ್ರೇಲಿ...?

ಬಾವಿಯೊಳಗ್ ಬೈಕು, ಕಾರು, ನೆಲದ್ಮೇಲ್ ಅಷ್ಟೆತ್ತರ್ದಲ್ಲ್ ಹಾರಾಡ್ತಾ ತಪಸ್ಸಿಗ್ ಕೂತಿರೋ ರುಷಿ, ಖಾರ ಹಚ್ಚಿದ ಊರಗಲದ ಅಕ್ಕಿ ಹಪ್ಪಳ , ಅರ್ಧ ಸುತ್ಸೋ ಹಡ್ಗು, ಪೂರ್ತಿ ಸುತ್ಸಿ, ಇಳ್ಸಿ ನನ್ನಾ ಅನ್ತಾ ಕೂಗ್ಸೋ ದೊಡ್ ತೊಟ್ಳು, ಹೊಟ್ಟೆ ತೊಳ್ಸೋ ಟೊರ್ರೊ ಟೊರ್ರೊ, ದಪ್ಪದವ್ರನ್ನ ತೆಳ್ಳಗೆ, ತೆಳ್ಗಿರೋರನ್ನ ದಪ್ಪಗೆ ತೋರ್ಸೋ ಕನ್ನಡಿ, ತಿನ್ನಕ್ಕಾಗ್ದೇ ಇರೋಷ್ಟು ಷೀ... ಬೆ0ಡು ಬತ್ತಾಸು, ಮ0ಡಕ್ಕಿ, ಊದಿದಷ್ಟು ದೊಡ್ಡಕ್ಕಾಗ ಪುಗ್ಗಿ, ತರತರದ್ ಕೀ ಚೈನು, ಬಳೆ, ಹೆ0ಗಸ್ರ ಪರ್ಸು, ಆಸ್ರಾದೋರಿಗ್ ಪೈನಾಪಲ್ ಪಾನಕ‌... ಇವೆಲ್ಲಾ ಇದ್ದಾ ಸಾಗರ್ದ್ ಜಾತ್ರೇಲಿ...?

ಮದುವೆ ಮನೆ...

ಸುಮುಹೂರ್ತೇ ಸಾವಧಾನ... ಸುಲಗ್ನೇ ಸಾವಧಾನ... ಮಂತ್ರಘೋಷ.
ಅವನಿಗೆ ಖುಷಿ, ಅವನಮ್ಮನಿಗೆ ಗೆದ್ದೆನೆಂಬ ಭಾವ, ಅವನಿಗೆ ಗೆಲ್ಲಬಲ್ಲೆನೆ...? ಎಂಬ ಗೊಂದಲ‌.
ಅವಳಿಗೂ ಅದೇ ಭಾವ, ಅವಳಿಗೆ ಹೊಸ ಸಂಗಾತಿಯೆಂಬ ಖುಷಿ, ತಂದೆ, ತಾಯಿಯ ಬಿಟ್ಟು ಹೊರಡುವ ದುಃಖ.
ಅವಳ ತಂದೆ ತಾಯಿಗೆ ಒಂದೆಡೆ ಗೆದ್ದೆವೆಂಬ ಖುಷಿ, ಇನ್ನೊಂದೆಡೆ ಮಗಳಿಲ್ಲದ ಬದುಕೆಂಬ ದುಃಖ.
ಒಂದೆಡೆ ಮನೆ ತುಂಬಿಸಿಕೊಳ್ಳುವ ಖುಷಿ, ಇನ್ನೊಂದೆಡೆ ಮನೆ ಖಾಲಿಯಾದ ಭಾವ.
ಆದವರಿಗೆ life..ಉ ಇಷ್ಟೇನೆ, ಆಗದವರಿಗೆ life..ಉ ಇಷ್ಟೆಲ್ಲಾ...!
ಮಂತ್ರಘೋಷ, ಖುಷಿ‍‍_ದುಃಖ, ಗೊಂದಲ, ಹೊಸ ಬಟ್ಟೆ, ಸಿಹಿ ಊಟ...
ಮದುವೆ ಮನೆ...

ಸಚೇತನರಿಗೊಂದು ಅರ್ಪಣೆ

ಸಚೇತನರಿಗೆ ವ್ಯಾಸರ ವಿಕ್ಷಿಪ್ತತೆ
ಚೇತನವ...
ಸಾಯಿಸುವುದೇ ಸಚೇತನವೇ...?

ಚೆಂದದ ಬಂಧವೇ ಅಲ್ಲವೇ ಸಂಬಂಧ‌
ಚೇತನಗೊಳ್ಳಲು, ಚೇತರಿಸಲು...
ಸಂ(ಸಮ್ಯಕ್) ಬಂಧ‌

ಸತ್ತ, ಸುಟ್ಟ, ಕೆಟ್ಟ, ಹರಿದ, ಬಲಾತ್ಕರಿಸಿದ‌
ಬಂಧಗಳ್ಹೇಗೆ
ಸಂಬಂಧಗಳಾದಾವು...?

ಚಿಗುರು, ಪ್ರೇಮ, ಹೊಸತನ
ಸೂರ್ಯೋದಯ...
ಚೇತನದ ಸಂಕೇತಗಳಿವು.

ಸಚೇತನರೇ,
ವಿಕ್ಷಿಪ್ತತೆಯ ತುಂಬಿ...
ವಿಕಲಚೇತನಗೊಳಿಸದಿರಿ.

ಸಚೇತನರೇ,
ಚೇತನಗೊಳಿಸಿ...
ಚೀತ್ಕರಿಸಬೇಡಿ.

ಮದುವೆ, ಗಂಡು

ಓಪನ್ ವಿತ್ ಸ್ಮೈಲ್...

ಪ್ರಿಯೆ,

ನನ್ನೊಳಗನಿನ್ನು ಹಿಡಿದಿಡಲಾರೆ.
ನಿನ್ನಿಂದಿನ ದಿರಿಸಲೆಷ್ಟು ಸುಂದರೆ...?

ಹ್ಮ್.. ಇದೇ. ಇದೇ ಕಣ್ಗಳವು
ನನ್ನ ಸೆಳೆದವು
ಪ್ರೀತಿಯ ಹೊಳೆಯಲಿ
ಮೀಸಿದವು.

ಮಧುರ ಕೈಗಳಿಗೆ ಮದರಂಗಿ
ನನ್ನ ಮನ ಚಿತ್ತಾರದಂಗಿ
ಹೊದ್ದು ಹೇಗಿರಲೇ...
ಅಂಗಿಯೊಳಗಿನ್ನೊಂದು ಭಂಗಿ...?

ಉಡುಗೊರೆಯ ಮರೆಯಬೇಡವೆಂದೆ
ಮರೆತೆ, ನನ್ನ ನಾನೆ ಮರೆತವಗೆ
ಉಡುಗೊರೆಯ‌ ನೆನಪೆ...?
ನನ್ನೊಳಗನಿನ್ನು ಹಿಡಿದಿಡಲಾರೆ...

**********

ನೆಂಟರಿಗೆ,

ಬಂದ ಉಡುಗೊರೆ ಮೇಲೆ ಕಣ್ಣು
ವಸ್ತ್ರ, ಪಾತ್ರೆ‍‍‍, ದುಡ್ಡು
ಜೊತೆಗಿದೊಂದು ಗ್ರೀಟಿಂಗ್ ಕಾರ್ಡು
ಒಡೆದೋದಿದವ ಮದುವೆ ಗಂಡು