Thursday, May 26, 2011

ಓದಿದ್ದು - ಆದದ್ದು : ೩

ಲ. ನಾ. ಭಟ್ಟರು - ಏನು ಓದಿದೆ?

ನಾನು - ಮೊನ್ನೆ ನಾನು ಬಿ.ಇ. ಮಾಡ್ಬೇಕಿದ್ದಾಗ ಉಳಿದಿದ್ದ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ಗೆ ಹೊಗಿದ್ದೆ. ಅಲ್ಲಿಯ ಲೈಬ್ರರಿಯಲ್ಲಿ ಸುಮಾರು ೮ ರಿಂದ ೯ ಸಾವಿರ ಪುಸ್ತಕಗಳಿವೆ. ಅದರಲ್ಲಿ ಬಹಳಷ್ಟು ತೀರಾ ಹಳೆಯವು. ಸುಮಾರು ಪುಸ್ತಕಗಳನ್ನು ಬೇಕಾಗಿಲ್ಲವೆಂದು ತೀರ್ಮಾನಿಸಿ ಆರಿಸಿ ಒಂದು ಕೋಣೆಯಲ್ಲಿಟ್ಟಿದ್ದರು. ಅದರಲ್ಲಿ ನನಗೊಂದು ಪ್ರೊ. ರಾಮಕೃಷ್ಣ ರಾವ್ ಅವರು ಬರೆದ ’ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ’ ಅನ್ನುವ ಪುಸ್ತಕ ಸಿಕ್ಕಿತು. ಅದನ್ನೇ ಓದತೊಡಗಿದೆ.

ಲ. ನಾ. ಭಟ್ಟರು - ಏನಾದೆ?

ನಾನು - ಜ್ಯೋತಿಷ ಶಾಸ್ತ್ರವನ್ನು ಶಾಲಾ-ಕಾಲೇಜುಗಳ ಪಠ್ಯ ವಿಷಯವಾಗಿ ಸೇರಿಸಬೇಕೇ ಬೇಡವೇ ಎಂಬುದು ಬಹುದಿನಗಳ ಚರ್ಚೆ. ಜ್ಯೋತಿಷ ಎಂದರೆ ಕೇವಲ ಫಲ ಜ್ಯೋತಿಷ, ಹಿಂದಿನ ಕರ್ಮಗಳ ಆಧಾರದ ಮೇಲೆ ಒಬ್ಬ ಮನುಷ್ಯನ ಒಳಿತು-ಕೆಡುಕುಗಳನ್ನು ತೀರ್ಮಾನಿಸುವುದು, ಕಾಲವನ್ನು ಗಣನೆಗೆ ತೆಗೆದುಕೊಂಡು ಕೆಲಸ ಕಾರ್ಯಗಳನ್ನು ಆರಂಭಿಸುವುದು ಇತ್ಯಾದಿ.. ಮಾತ್ರವೆಂಬುದು ನನ್ನಂತವರ ತಿಳುವಳಿಕೆಯಾಗಿತ್ತು. ಆದರೆ ಜ್ಯೋತಿಷ ಶಾಸ್ತ್ರದಲ್ಲಿ ಇದೊಂದು ಅತಿ ಚಿಕ್ಕ ಭಾಗ, ಮತ್ತು ಹೆಚ್ಚಿನ ಗಣನೆಗೆ ತೆಗೆದುಕೊಂಡು ಇದೇ ಜ್ಯೋತಿಷವೆನ್ನುವುದು ತಪ್ಪು ಎಂದು ತಿಳಿಯಿತು. ಮನುಷ್ಯ ಹುಟ್ಟಿದ ಮೇಲಿನ ಸ್ವಲ್ಪ ಕಾಲಾನಂತರ, ತನ್ನ ಅನ್ನವನ್ನು ತಾನೇ ಬೆಳೆದುಕೊಳ್ಳಲು ಆರಂಭಿಸಿದ ಮೇಲೆ ಪರಿಸರದ ಅಧ್ಯಯನ ಅತ್ಯಗತ್ಯವಾಗತೊಡಗಿತು. ಹೀಗೆ ಪ್ರಾರಂಭಿಸಿದ್ದು ನಕ್ಷತ್ರ, ಗ್ರಹಗಳ ಅಧ್ಯಯನಕ್ಕೂ ಪ್ರೇರಣೆಯಾಯಿತು. ನದಿಯಲ್ಲಿ ಪ್ರವಾಹ ಬರುವುದಕ್ಕೂ ಮುಂಚೆ ಒಂದು ನಕ್ಷತ್ರ ಕಾಣಿಸಿಕೊಳ್ಳುವುದು ಮುಂತಾದದ್ದನ್ನು ಮಾನವ ಗುರುತಿಸುತ್ತಾ ಹೋದ. ಇಂತಹ ಒಂದು ಅಧ್ಯಯನಕ್ಕೆ ಭರತ ನಾಡಿನಲ್ಲಿ ಜ್ಯೋತಿಷ ಎಂಬ ಹೆಸರು. ಮತ್ತು ಅದರಲ್ಲಿ ಪಾಂಡಿತ್ಯ ಪಡೆದವನು ಜ್ಯೋತಿಷಿಯಾದ. ಅಂದರೆ ಜ್ಯೋತಿಷ ಎಂಬುದು ಖ(ಆಕಾಶ)ಗೋಳ(ಯಾವ ಕಡೆಯಿಂದ ನೋಡಿದರೂ ಒಂದೇ ರೀತಿ ಕಾಣುವುದು) ವಿಜ್ಞಾನದ ಅಧ್ಯಯನವೆಂದಾಯ್ತು. ಇಂಥಹ ಜ್ಯೋತಿಷದ ಜ್ಞಾನ ಯಾವ ಯಾವ ಶತಮಾನದಲ್ಲಿ ಪ್ರಪಂಚದ ಯಾವ ಯಾವ ಭಾಗಗಳಲ್ಲಿ ಹೇಗೆ ಹೇಗೆ ವೃದ್ಧಿಸಿತು, ಭಾರತೀಯರ ಕೊಡುಗೆ ಎಷ್ಟರ ಮಟ್ಟಿನದು ಮುಂತಾದವನ್ನು ರಾಮಕೃಷ್ಣ ರಾವ್ ಅವರು ತಿಳಿಸಿದರು. ಪ್ರಪಂಚದ ಯಾವ ಯಾವ ಭಾಗದಲ್ಲಿ ಯಾವ ಯಾವ ರೀತಿಯಲ್ಲಿ ಕಾಲವನ್ನು ಲೆಕ್ಕ ಹಾಕುತ್ತಾರೆ ಅಂತೆಲ್ಲಾ ಉದಾಹರಣೆಯ ಸಮೇತ ವಿವರಿಸುತ್ತಾ ಹೋಗ್ತಾರೆ. ಖಗೋಳ ಶಾಸ್ತ್ರದ ಬಗೆಗಿನ ಅವರ ಜ್ಞಾನವನ್ನು ನೋಡಿ ಬೆರಗಾಗುತ್ತದೆ ಭಟ್ಟರೆ. ಭಟ್ಟರಾದ ನಿಮಗೆ ಪಂಚಾಗದ ಬಗ್ಗೆ ಮಾಹಿತಿ ಇರಲೇಬೇಕು. ನಾನೂ ಕೂಡ ವೇದಾಭ್ಯಾಸ ಮಾಡುವಾಗ ಘಟಿಕಾ, ವಿಘಟಿಕಾ ಮುಂತಾದ ಶಬ್ದಗಳನ್ನ ಕೇಳಿದ್ದೆ. ಆದರೆ ಅವುಗಳ ಸರಿಯಾದ ಕಾಲ ಎಷ್ಟು ಎಂಬುದು ತಿಳಿದಿರಲಿಲ್ಲ. ೧ ಪ್ರಾಣಕ್ಕೆ ೪ ಸೆಕೆಂಡ್ ಅಂತೆ. ಅಂತಹ ೬ ಪ್ರಾಣಗಳಿಗೆ ೧ ವಿಘಟಿಕವಂತೆ, ಮತ್ತು ೬೦ ವಿಘಟಿಕಕ್ಕೆ ೧ ಘಟಿಕವಂತೆ. ಅಂತಹ ೬೦ ಘಟಿಕಗಳಿಗೆ ೧ ದಿನವಂತೆ. ಈ ದಿನ ಸರಿಯಾಗಿ ೨೪ ಘಂಟೆಗಳಾದವು. ಈಗ ಸ್ಪಷ್ಟವಾಯಿತು. ಇನ್ನು ಪಂಚಾಂಗವನ್ನು ಓದಿದರೆ ಸ್ವಲ್ಪ ಹೆಚ್ಚು ಅರ್ಥ ಮಾಡಿಕೊಳ್ಳಬಲ್ಲೆ.
ಭಟ್ಟರೆ, ಜ್ಯೋತಿಷವೆಂದರೆ ಫಲ ಜೋತಿಷ ಮಾತ್ರವಲ್ಲ. ಪದವಿ ಮತ್ತು ತದನಂತರದ ಖಗೋಳ ಶಾಸ್ತ್ರದ ಅಧ್ಯಯನಕ್ಕೆ ಪೂರ್ವಭಾವಿಯಾಗಿ ಜ್ಯೋತಿಷದ ಅಧ್ಯಯನ ಹೆಚ್ಚು ಮಹತ್ವದ್ದೆಂದು ಅನಿಸುತ್ತದೆ. ಇದರಿಂದ ಭಾರತೀಯರ ಖಗೋಳ ಶಾಸ್ತ್ರದ ಇತಿಹಾಸದ ಪರಿಚಯ ಮಾತ್ರವಲ್ಲದೆ, ಪದವಿ ಮತ್ತು ತದನಂತರದ ಅಧ್ಯಯನಕ್ಕೆ ಖಗೋಳ ಶಾಸ್ತ್ರವನ್ನು ಆರಿಸಿಕೊಳ್ಳಲು ಹೆಚ್ಚು ಸ್ಫೂರ್ತಿ ದೊರೆಯುತ್ತದೆಂಬುದು ನನ್ನ ಅಭಿಪ್ರಾಯ.
ಭಟ್ಟರೆ, ರಾಮಕೃಷ್ಣ ರಾವ್ ನಂತವರು ಬಹಳ ಅಪರೂಪ. ಖಗೋಳ ಶಾಸ್ತ್ರದ ಮೇಲೆ ಅತ್ಯಂತ ಅಧಿಕಾರಯುತವಾಗಿ ಮಾತನಾಡುವ ಮತ್ತು ಬರೆಯುವವರೆಂದು ಅವರ ಪುಸ್ತಕವನ್ನು ಓದಿದ ನಂತರ ಮತ್ತು ಸಭೆಯಲ್ಲಿ ಅವರನ್ನು ಹಲವಾರು ಭಾರಿ ನೋಡಿದ ನಂತರ ಅನುಭವವಾಗಿದೆ. ಅಂತಹವರ ಹತ್ತಿರ ಸಂಪದದಲ್ಲೇನಾದರೂ ಖಗೋಳ ಶಾಸ್ತ್ರದ ಬಗ್ಗೆ ಅಂಕಣಗಳನ್ನು ಬರೆಸಿದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ಅನಿಸುತ್ತದೆ.

-ಮಾಧವ

No comments:

Post a Comment