ಝೂಂಡನ ಊಟ.
ಝೂಂಡನಿಗೆ ಊಟ ರುಚಿಸಲಿಲ್ಲ. ಅಂದಿನಿಂದ ಹಲವಾರು ದಿನಗಳವರೆಗೆ ಊಟ ರುಚಿಸಲಿಲ್ಲ. ಹಲವಾರು ದಿನಗಳಿಂದ ಝೂಂಡನ ಪತ್ನಿಯ ಮನಸ್ಥಿತಿಯೂ ಸರಿ ಇಲ್ಲ. ಒಂಥರಾ ಕಿರಿ ಕಿರಿ. ಸಮಾಧಾನವಿಲ್ಲ. ಸಿಡುಕು. ಝೂಂಡನಿಗೆ ಪತ್ನಿಯ ಮನಸ್ಥಿತಿಗೂ ತನ್ನ ಊಟಕ್ಕೂ ಏನೋ ಸಂಬಂಧವಿದೆಯೆನ್ನಿಸಿತು. ಮುಂದಿನ ಬಾರಿಯ ಝೂಂಡ ಗುರುವಿನ ಭೇಟಿಯಲ್ಲಿ ಈ ವಿಷಯವಾಗಿ ಸಾಕಷ್ಟು ಚರ್ಚಿಸಿದ. ಝೂಂಡಗುರುಗಳು ಆತನಿಗೆ ಎರಡು ಸಲಹೆಗಳನ್ನಿತ್ತರು. ೧. ಅನ್ನದಾನ ನಡೆಯುವೆಡೆ ಊಟಮಾಡು. ೨. ತಾಯಿಯೊಬ್ಬಳು ಮಗುವಿಗಾಗಿ ಕಲಸಿದ ಅನ್ನವನ್ನು ಊಟಮಾಡು. ಈ ಎರಡು ಸಲಹೆಗಳು ನಮಗೆ ವಿಚಿತ್ರವೆನಿಸಲಿಲ್ಲ. ಯಾಕೆಂದರೆ ನಮಗೆ ಗೊತ್ತು. ಈ ಎರಡೂ ಒಂಥರಾ ಹೆಚ್ಚು ರುಚಿಯಾಗಿರುತ್ತದೆ. ಆದರೆ ಝೂಂಡನಿಗೆ ವಿಚಿತ್ರವೆನಿಸಿತು.. ಮತ್ತು ಆ ಹೆಚ್ಚಿನ ರುಚಿ ಯಾಕೆಂದು ಬುದ್ಧಿಯನ್ನು ಒರೆಗೆ ಹಚ್ಚಿದ. ಝೂಂಡ ಗುರುವಿನ ಬಳಿ ಚರ್ಚಿಸಿದ. ವಿವರಣೆ ಪಡೆದ. ಅಡಿಗೆಯೊಂದೇ ಎಂದೂ ರುಚಿಯಾಗಿರುವುದಿಲ್ಲ. ಅದರ ಜೊತೆ ಭಾವವು ಬೆರೆತಿರಬೇಕು. ಅನ್ನದಾನಗಳಲ್ಲಿ ದಾನಿಯು ಒಂದೋ ತನ್ನ ಪಾಪ ಕರ್ಮಗಳನ್ನು ಕಳೆದುಕೊಳ್ಳುವ ಭಾವದಿಂದಿರುತ್ತಾನೆ. ಅಥವಾ ಹೆಚ್ಚಿನ ಪುಣ್ಯ ಸಂಪಾದನೆಯ ಭಾವ ಹೊಂದಿರುತ್ತಾನೆ. ಇವರಡೂ ಸಹ ಒಳ್ಳೆಯ ಭಾವಗಳು. ಇವು ಆತ ಮಾಡುವ ದಾನದೊಂದಿಗೆ ಬೆರೆಯುತ್ತವೆ. ತಾಯಿ ಮಗುವಿಗಾಗಿ ಅನ್ನ ಕಲಸುವಾಗ ಅವಳ ಪ್ರೀತಿ, ಕರುಣೆಗಳು ಅಲ್ಲಿ ಸೇರುತ್ತವೆ. ತನ್ನ ಮಗುವಿವೆ ಇದು ಅಮೃತಾನ್ನವಾಗಲೆಂಬ ಭಾವ ಸೇರಿ ಅದು ಅಮೃತಾನ್ನವೇ ಆಗುತ್ತದೆ. ಹಾಗಾಗಿ ಅದು ಬರಿಯ ಹಾಲನ್ನವಾದರೂ ಹೆಚ್ಚು ರುಚಿ. ಒಳ್ಳೆಯ ಭಾವವು ಬೆರೆತಿರುವ ಆಹಾರ ಸಹಜವಾಗಿಯೇ ಹೆಚ್ಚು ರುಚಿಯಾಗಿರುತ್ತದೆ. ಝೂಂಡ ಗುರುಗಳು ಇವಿಷ್ಟು ವಿವರಣೆಯನ್ನು ಝೂಂಡನಿಗೆ ಹೇಳಿ, ನಿನ್ನ ಪತ್ನಿಯನ್ನು ಸಮಾಧಾನಿಸು. ಆ ಸಮಾಧಾನ ಬೆರೆತಿರುವ ಅಡಿಗೆಯನ್ನು ನೀನು ಸಮಾಧನದಿಂದ ಸ್ವೀಕರಿಸೆಂದು ಹೇಳಿದರು. ಅಂದಿನಿಂದ ಝೂಂಡ ಅಮೃತಾನ್ನವನ್ನೇ ಸೇವಿಸಿದ.
No comments:
Post a Comment