ಅದೊಂದು ಶುಭ ಸಂಜೆ. ಹೊರಗಿನ್ನೂ ಬೆಳಕಿತ್ತು. ಮನೆಯ ಒಳಗೆ ಕತ್ತಲೆ ಕವಿದಿತ್ತು. ಒಬ್ಬ ಅಜ್ಜಿ ಮನೆಯ ಅಂಗಳದಲ್ಲಿ ಏನನ್ನೋ ಹುಡುಕುತ್ತಿದ್ದಳು. ಬಹಳ ಹೊತ್ತಿನಿಂದ ಹುಡುಕುತ್ತಿದ್ದಳು. ಒಮ್ಮೊಮ್ಮೆ ತಾನು ಹುಡುಕುತ್ತಿದ್ದುದು ಸಿಕ್ಕೇ ಬಿಟ್ಟಿತೆಂದು ಸಂತೋಷಿಸುತ್ತಿದ್ದಳು. ಆದರೆ ಸಿಕ್ಕಿದ್ದು ತಾನು ಹುಡುಕುತ್ತಿದ್ದುದಾಗಿರುತ್ತಿರಲಿಲ್ ಲ. ಮತ್ತೆ ಬೇಸರಿಸುತ್ತಿದ್ದಳು. ಮತ್ತೆ ಹುಡುಕುತ್ತಿದ್ದಳು. ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳಿಗೆ ಅಜ್ಜಿಯ ಈ ವರ್ತನೆ ವಿಚಿತ್ರವೆನಿಸಿತು. ಅಜ್ಜಿಯ ಬಳಿ ಓಡಿ ಬಂದು ಕೇಳಿದಳು. 'ಅಜ್ಜಿ, ಅಷ್ಟು ಹೊತ್ತಿನಿಂದ ಏನು ಹುಡುಕುತ್ತಿದ್ದೀಯ?' ಅಜ್ಜಿ ಉತ್ತರಿಸಿದಳು. 'ಒಂದು ಗುಂಡು ಸೂಜಿ ಕಳೆದೋಗಿತ್ತು'. ಮೊಮ್ಮಗಳು ಮತ್ತೆ ಪ್ರಶ್ನಿಸಿದಳು. 'ಎಲ್ಲಿ ಕಳೆದೋಗಿತ್ತು'? ಅಜ್ಜಿಯ ಉತ್ತರ - 'ಮನೆ ಒಳಗೆ ಆಡುಗೆ ಮನೆಯಲ್ಲಿ ಕಳೆದೋಗಿತ್ತು. ಅಲ್ಲಿ ಈಗ ಬೆಳಕಿಲ್ಲ. ಕತ್ತಲು. ಇಲ್ಲಾದರೆ ಬೆಳಕಿದೆ. ಹಾಗಾಗಿ ಇಲ್ಲಿ ಹುಡುಕುತ್ತಿದ್ದೇನೆ'. ಮೊಮ್ಮಗಳಿಗೆ ವಿಚಿತ್ರವೆನಿಸಿತು. ಕೇಳಿದಳು. 'ಏನಜ್ಜೀ ನೀನು. ಇಷ್ಟೊಂದು ವಯಸ್ಸಾಗಿದೆ ನಿನಗೆ. ಒಂದು ಸಣ್ಣ ಗುಂಡು ಸೂಜಿಗಾಗಿ ಇಷ್ಟೆಲ್ಲ ಹುಡುಕಬೇಕೇ? ಹೋಗಲಿ, ಕಳೆದುದನ್ನು ಕಳೆದಲ್ಲಿ ಹುಡುಕಬೇಕು ತಾನೆ?'
ಎರಡು ವಿಚಾರಗಳಲ್ಲಿ ಗೊಂದಲಗಳಿವೆ. ೧. ಏನನ್ನು ಹುಡುಕಬೇಕು ಗೊತ್ತಿಲ್ಲ. ೨. ಎಲ್ಲಿ ಹುಡುಕಬೇಕು ಗೊತ್ತಿಲ್ಲ. ಗುಂಡು ಸೂಜಿಯೊಂದು ನೆಮ್ಮದಿ. ಇದನ್ನು ಅಂತರಂಗದಲ್ಲಿ ಹುಡುಕದೇ ಬಹಿರಂಗದಲ್ಲಿ ಹುಡುಕುತ್ತಿದ್ದೇವೆ. ಕಾರಣ, ಅಂತರಂಗ ಕತ್ತಲಾಗಿದೆ. ಬಹಿರಂಗದಲ್ಲಿ ಕಣ್ಣು ಕೋರೈಸುವ ಬೆಳಕಿದೆ. ನೆಮ್ಮದಿಯೆಂದು ತೋರುವ ಹಲವಾರು (ಅಡ್ಡ, ಉದ್ದ, ಅಗಲ) ದಾರಿಗಳಿವೆ. ಬೇಕಾದುದು ಬೆಳಕು, ಅಂತರಂಗದಲ್ಲಿ. ಅದನ್ನು ಹೊತ್ತಿಸಿಕೊಳ್ಳಬೇಕು. ಆ ಬೆಳಕಿನಲ್ಲಿ ಹುಡುಕಬೇಕು.
No comments:
Post a Comment